ಚುನಾವಣೆ ಹೊಸ್ತಿಲಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಚಿಕ್ಕಮಗಳೂರು ಪೊಲೀಸ್ ಇಲಾಖೆ ಅಕ್ರಮ ಬಂದೂಕುಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದೆ.
ಚಿಕ್ಕಮಗಳೂರು (ಫೆ.24): ಚುನಾವಣೆ ಹೊಸ್ತಿಲಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೊಲೀಸ್ ಇಲಾಖೆ ಅಕ್ರಮ ಬಂದೂಕುಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದೆ. ಈ ತಂಡ ಅಕ್ರಮ ಬಂದೂಕುಗಳೂ ಸೇರಿದಂತೆ ಶಸ್ತ್ರಾಸ್ತ್ರಗಳ ಪತ್ತೆಯಲ್ಲಿ ನಿರತವಾಗಿದ್ದು ಈಗಾಗಲೇ ಜಿಲ್ಲೆಯಾದ್ಯಂತ ಕಾರಾಚರಣೆ ನಡೆಸಿ ತಂಡ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಏಷ್ಯಾ ಸುವರ್ಣ ನ್ಯೂಸ್ ಗೆ ತಿಳಿಸಿದ್ದಾರೆ. ಜಿಲ್ಲಾಡಳಿತದಿಂದ ಜಿಲ್ಲೆಯಲ್ಲಿ ಸುಮಾರು 12 ಸಾವಿರ ಬಂದೂಕು ಪರವಾನಗಿ ವಿತರಿಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಪರವಾನಗಿ ಹೊಂದಿರುವ ಬಂದೂಕುಗಳು ಮಲೆನಾಡು ಪ್ರದೇಶಗಳಾದ ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲೂಕಿನಲ್ಲಿವೆ. ಮಲೆ ನಾಡಿನಲ್ಲಿ ಜಮೀನು ಹೊಂದಿರುವ ಹೆಚ್ಚಿನವರು ಪರವಾನಗಿ ಹೊಂದಿ ಕೋವಿ ಇಟ್ಟುಕೊಂಡಿದ್ದಾರೆ. ಇನ್ನು ಬಯಲು ಸೀಮೆ ಭಾಗಗಳಾದ ಕಡೂರು, ತರೀಕೆರೆ ತಾಲೂಕಿನಲ್ಲಿ ಕಡಿಮೆ ಜನರು ಬಂದೂಕು ಪರವಾನಗಿ ಹೊಂದಿದ್ದಾರೆ.ಜಿಲ್ಲೆಯಲ್ಲಿ ಪರವಾನಗಿ ರಹಿತ ಬಂದೂಕು ವ್ಯಾಪಕ ಪ್ರಮಾಣದಲ್ಲಿದ್ದು, ಅನೇಕ ಮಂದಿ ಬಂದೂಕು ದುರಸ್ತಿ ಅಂಗಡಿಯವರು ತಾವೇ ಸ್ಥಳೀಯವಾಗಿ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಬಂದಿರುವ ಮಾಹಿತಿ ಆದರಿಸಿ ವಿವಿದೆಡೆ ದಾಳಿ ನಡೆಸಿ ಅಕ್ರಮ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲೆನಾಡಿನ ಭಾಗದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ನಂತರ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬಂದೂಕು ದುರಸ್ತಿಪಡಿಸುವ ಅಂಗಡಿಗಳಿಗೆ ದಾಳಿ ನಡೆಸಿ ಭಾರಿ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆ ಹಚ್ಚಿದ್ದು ಆರು ಜನರನ್ನು ಬಂಧಿಸಿದ್ದಾರೆ.
ಅಕ್ರಮ ಗನ್ ನಿಂದ ಶೂಟೌಟ್ ಹಿನ್ನೆಲೆ ಖಾಕಿಗಳ ಹೈ ಅಲರ್ಟ್:
ಜಿಲ್ಲೆಯ ಮಲೆನಾಡಿನ ಭಾಗವಾದ ಬಾಳೆಹೊನ್ನೂರು ಸಮೀಪದ ಚಂದುವಳ್ಳಿ ಗ್ರಾಮದಲ್ಲಿ ಮಿಸ್ ಫೈರಿಂಗ್ ಆಗಿ ಇಬ್ಬರು ಮೃತಪಟ್ಟ ಪ್ರಕರಣದಲ್ಲಿ ಅಕ್ರಮ ಬಂದೂಕು ಬಳಕೆ ಯಾಗಿದ್ದರಿಂದ ಎಚ್ಚೆತ್ತು ಇಲಾಖೆ, ಕಾರ್ಯಾ ಚರಣೆ ನಡೆಸಿ ಒಂದೇ ದಿನದಲ್ಲಿ 50ಕ್ಕೂ ಹೆಚ್ಚು ಕೋವಿಗಳನ್ನು ವಶಪಡಿಸಿಕೊಂಡಿದೆ. ಜತೆಗೆ ಇನ್ನೂ ಅಕ್ರಮ ಬಂದೂಕುಗಳು ಇರುವ ಮಾಹಿತಿಯೂ ಇಲಾಖೆಗೆ ಲಭ್ಯವಾಗಿದೆ.ಕಾಡು ಪ್ರಾಣಿಗಳಿಂದ ಆತ್ಮ ರಕ್ಷಣೆಗೆ ಬಳಕೆ ಆಗಬೇಕಾಗಿದ್ದ ಬಂದೂಕುಗಳು ವೈರಿಗಳ ದಮನಕ್ಕೆ ಉಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಖಾಕಿ ಪಡೆ ಅಕ್ರಮ ಬಂದೂಕುಗಳ ಶಿಕಾರಿಗೆ ಇಳಿದಿದೆ.
ಶಾಂತವಾಗಿರುವ ಮಲೆನಾಡಿನಲ್ಲಿ ಬಂದೂಕಿನ ಸದ್ದು, ಕಾಡು ಪ್ರಾಣಿಗಳ ಉಪಟಳಕ್ಕೆ ವಿನಿಯೋಗ ಬದಲು ಪ್ರತೀಕಾರಕ್ಕೆ ಬಳಕೆ!
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು , ಬಾಳೂರು, ಕಳಸ ಹಾಗು ಎನ್ ಆರ್ ಪುರ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆದಿದೆ.ಪರವಾನಿಗೆ ರಹಿತ 41 , ಪರವಾನಿಗೆ ಸಹಿತ 10 ಬಂದೂಕು, 2 ರಿವಾಲ್ವರ್, 22 ರೈಫಲ್ ಗುಂಡು, 40 ಬುಕ್ ಶಾಟ್ ಗುಂಡು, ಬಂದೂಕು ನಳಿಕೆ, ಕಾರ್ಟ್ರೆಜ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ನೇತ್ರಕುಂಡ ಎಸ್ಟೇಟಿನ ಸದಾಶಿವಾಚಾರ್, ಬಾಳೂರಿನ ಸುಧಾಕರ್ ಆಚಾರಿ , ಬಾಳೆಹೊನ್ನೂರಿನ ರಾಮಚಂದ್ರ ಆಚಾರಿ, ಮಾವಿನಕೆರೆಯ ಸುಂದರ, ಗಂಗಾಧರ, ಆಡುವಳ್ಳಿಯ ಶಿವರಾಜ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
Chikkamagaluru: ಬೈಕಿನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ: ಸವಾರರಿಬ್ಬರು ಸ್ಥಳದಲ್ಲೇ ಸಾವು
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಖಾಂಡ್ಯ ಸಮೀಪದ ಬಿದಿರೆ ಎಂಬಲ್ಲಿ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಅಮಾಯಕ ಯುವಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ರಮೇಶ್ ಎಂಬಾತ ಈ ಕೃತ್ಯ ನಡೆಸಿದ್ದ. ಆತನು ಅಕ್ರಮ ಬಂದೂಕು ಬಳಸಿ ಬಿದಿರೆ ಗ್ರಾಮದಲ್ಲಿ ಬೈಕಿನಲ್ಲಿ ಸಾಗುತ್ತಿದ್ದ ಪ್ರವೀಣ್ ಮತ್ತು ಪ್ರಕಾಶ್ ಎಂಬ ಇಬ್ಬರು ಯುವಕರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದ ಈ ಹಿನ್ನೆಲೆ ಖಾಕಿ ಪಡೆ ಹೈ ಅಲರ್ಟ್ ಆಗಿದೆ..