ಡ್ರಗ್ಸ್‌ ಮಾಫಿಯಾ: ಡ್ರಗ್ಗಿಣಿಯರ ಜೊತೆ ನಂಟು, ಮತ್ತೊಬ್ಬ ಕಿಂಗ್‌ಪಿನ್‌ಗಾಗಿ ಶೋಧ

By Kannadaprabha NewsFirst Published Nov 7, 2020, 7:34 AM IST
Highlights

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ವ್ಯಕ್ತಿಗಾಗಿ ಹುಡುಕಾಟ| ಕೆಲ ವರ್ಷದಿಂದ ದಂಧೆಯಲ್ಲಿದ್ದರೂ ಒಮ್ಮೆಯೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ| ನಟಿ ರಾಗಿಣಿ, ಸಂಜನಾ ಜತೆ ನಂಟು| ತಾನೇ ಪಾರ್ಟಿ ಆಯೋಜಿಸುತ್ತಿದ್ದ| ಆಫ್ರಿಕನ್ನರಿಂದ ಡ್ರಗ್ಸ್‌ ಖರೀದಿಸುತ್ತಿದ್ದ| 

ಬೆಂಗಳೂರು(ನ.07): ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲ ನಂಟಿನ ಪ್ರಕರಣದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮನ್ಸೂರ್‌ ಅಲಿಯಾಸ್‌ ಮ್ಯಾಸ್ಸಿ (30) ಮತ್ತೊಬ್ಬ ಕಿಂಗ್‌ಪಿನ್‌ ಎಂಬ ಸಂಗತಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಕೃತ್ಯದಲ್ಲಿ ನಟಿಮಣಿಯರ ಬಂಧನ ಬಳಿಕ ಭೂಗತವಾಗಿರುವ ಆತನ ಪತ್ತೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಿಸಿಬಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ. ವಿಚಿತ್ರವೆಂದರೆ ಹಲವು ವರ್ಷಗಳಿಂದ ಡ್ರಗ್ಸ್‌ ದಂಧೆಯಲ್ಲಿ ನಿರತನಾಗಿದ್ದರೂ ಇದುವರೆಗೆ ಮ್ಯಾಸ್ಸಿ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ ಎನ್ನಲಾಗಿದೆ.

ಕಳೆದ 2018ರ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್‌ ಮಾರಾಟಕ್ಕೆ ಯತ್ನಿಸಿದ್ದಾಗ ಮಂಗಳೂರು ಮೂಲದ ಸಾಫ್ಟ್‌ವೇರ್‌ ಉದ್ಯೋಗಿ ಪ್ರತೀಕ್‌ ಶೆಟ್ಟಿ ಹಾಗೂ ಆತನ ಸಹಚರರ ಬಂಧನವಾಗಿತ್ತು. ಆಗ ಆರೋಪಿಗಳ ವಿಚಾರಣೆಯಲ್ಲಿ ದಂಧೆಯಲ್ಲಿ ಮನ್ಸೂರ್‌ ಅಲಿಯಾಸ್‌ ಮ್ಯಾಸ್ಸಿ ಪಾತ್ರ ಬಯಲಾಗಿತ್ತು. ಆದರೆ ಆ ಮಾಹಿತಿ ಆಧರಿಸಿ ಮ್ಯಾಸ್ಸಿ ವಿರುದ್ಧ ತನಿಖೆ ನಡೆಸದೆ ಅಂದು ತನಿಖಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಯಾಕೆ ಎಂಬುದು ನಿಗೂಢವಾಗಿದೆ ಎಂದು ಸಿಸಿಬಿ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.

ಸಂಜನಾ, ರಾಗಿಣಿಯನ್ನು ಟಾರ್ಗೆಟ್‌ ಮಾಡ​ಲಾಗ್ತಿದೆ: ನಟ ಜೈಜಗದೀಶ್‌

ಡ್ರಗ್ಸ್‌ ಪ್ರಕರಣದಲ್ಲಿ ಆರೋಪಿಗಳಾದ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ದೆಹಲಿ ಮೂಲದ ಪೇಜ್‌ ತ್ರಿ ಪಾರ್ಟಿ ಆಯೋಜನೆ ದಂಧೆಯ ಕಿಂಗ್‌ ಪಿನ್‌ ವೀರೇನ್‌ ಖನ್ನಾ, ನಟಿಯರ ಗೆಳೆಯರಾದ ರಾಹುಲ್‌ ತೋನ್ಸೆ, ಸಾರಿಗೆ ಇಲಾಖೆ ನೌಕರ ರವಿಶಂಕರ್‌, ಖ್ಯಾತ ನೃತ್ಯಗಾರ್ತಿ ನಂದಿನಿ ಅಳ್ವ ಪುತ್ರ ಆದಿತ್ಯ ಅಳ್ವ ಹಾಗೂ ಆಫ್ರಿಕಾ ಪೆಡ್ಲರ್‌ಗಳ ಜತೆ ಮ್ಯಾಸ್ಸಿ ನಿಕಟ ಸ್ನೇಹ ಹೊಂದಿರುವುದು ಪತ್ತೆಯಾಗಿದೆ. ಆದರೆ ಕೃತ್ಯ ಬೆಳಕಿಗೆ ಬಂದ ದಿನದಿಂದ ಅಜ್ಞಾತವಾಗಿರುವ ಆತನ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಪಾರ್ಟಿಗಳ ಆಯೋಜನೆ ದಂಧೆಕೋರ ಮ್ಯಾಸ್ಸಿ

ಭಟ್ಕಳ‌ ಮೂಲದ ಮ್ಯಾಸ್ಸಿ, ಬಾಣಸವಾಡಿ ಸಮೀಪ ವಾಸವಾಗಿದ್ದ. ನಗರದಲ್ಲಿ ಪಂಚಾತಾರ ಹೋಟೆಲ್‌, ರೆಸಾರ್ಟ್‌, ಕ್ಲಬ್‌, ಅಪಾರ್ಟ್‌ಮೆಂಟ್‌ ಹಾಗೂ ಫಾಮ್‌ರ್‍ ಹೌಸ್‌ಗಳಲ್ಲಿ ಐಷರಾಮಿ ಔತಣ ಕೂಟ ಹಾಗೂ ತಡರಾತ್ರಿ ಬಳಿಕ ‘ಅಫ್ಟರ್‌ ಅವ​ರ್‍ಸ್ ಪಾರ್ಟಿ’ ಆಯೋಜನೆಯಲ್ಲಿ ಮ್ಯಾಸ್ಸಿ ಪಾತ್ರವಹಿಸಿದ್ದ. ಈ ಪಾರ್ಟಿಗಳಿಗೆ ಆಫ್ರಿಕಾ ಪ್ರಜೆಗಳ ಮೂಲಕ ಆತ ಡ್ರಗ್ಸ್‌ ಪೂರೈಸುತ್ತಿದ್ದ. ಅಲ್ಲದೆ, ನಟ-ನಟಿಯರು ಸೇರಿದಂತೆ ಕೆಲವು ವಿಐಪಿ ಕುಳಗಳಿಗೆ ನೇರವಾಗಿ ಆತ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

2018ರ ಬಾಣಸವಾಡಿ ಡ್ರಗ್ಸ್‌ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಕೂಡಲೇ ನಗರ ತೊರೆದು ಆತ ಸೌದಿ ಅರೇಬಿಯಾಗೆ ಪರಾರಿಯಾಗಿದ್ದ. ಆರು ತಿಂಗಳ ಬಳಿಕ ಆತ ನಗರಕ್ಕೆ ಮರಳಿದ್ದ. ಅಷ್ಟರಲ್ಲಿ ಡ್ರಗ್ಸ್‌ ಕೇಸ್‌ ಕೂಡಾ ತಣ್ಣಗಾಗಿತ್ತು. ಹೀಗಾಗಿ ಮತ್ತೆ ಆತ ತನ್ನ ದಂಧೆಯನ್ನು ನಿರಾತಂಕವಾಗಿ ಮುಂದುವರೆಸಿದ್ದ ಎಂದು ಮೂಲಗಳು ಮಾಹಿತಿ ನೀಡಿವೆ.

ಡ್ರಗ್‌ ಮಾಫಿಯಾ: ಡ್ರಗ್ಗಿಣಿಯರ 600 ಪುಟ ಚಾಟಿಂಗ್‌ ಸಂಗ್ರಹ..!

ಈ ಪಾರ್ಟಿಗಳಲ್ಲಿ ಆತನಿಗೆ ನಟಿ ರಾಗಿಣಿ ದ್ವಿವೇದಿ ಸ್ನೇಹವಾಗಿತ್ತು. ಈ ಗೆಳೆತನದಲ್ಲೇ ನಟಿ ಮನೆಗೆ ಕೂಡಾ ಮ್ಯಾಸ್ಸಿ ಡ್ರಗ್ಸ್‌ ತಲುಪಿಸಿರುವ ಮಾಹಿತಿ ಇದೆ. ಗೋವಾ, ಆಂಧ್ರಪ್ರದೇಶ, ಒಡಿಶಾ ರಾಜ್ಯಗಳ ದಂಧೆಕೋರರ ಜತೆ ಸಂಪರ್ಕ ಹೊಂದಿದ್ದ ಮ್ಯಾಸ್ಸಿ, ವಿದೇಶದಿಂದ ಸಿಂಥೆಟಿಕ್‌ ಡ್ರಗ್ಸ್‌ ತರಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮ್ಯಾಸ್ಸಿ ಮೊಬೈಲ್‌ನಲ್ಲಿ ವಿಐಪಿಗಳ ನಂಬರ್‌

ಮ್ಯಾಸ್ಸಿ ಮೊಬೈಲ್‌ ಕರೆಗಳನ್ನು ಪರಿಶೀಲಿಸಿದಾಗ ಆತನೊಂದಿಗೆ ನಟಿಯರು ಹಾಗೂ ಉದ್ಯಮಿಗಳು ಸೇರಿದಂತೆ ಹಲವು ಗಣ್ಯಾತಿಗಣ್ಯರ ಮಾತುಕತೆ ವಿವರ ಸಿಕ್ಕಿದೆ. ಎರಡೂವರೆ ತಿಂಗಳಿಂದ ಆತನ ಪತ್ತೆಗೆ ಹುಡುಕಾಟ ನಡೆಸಲಾಗಿದೆ. ಮ್ಯಾಸ್ಸಿ ಬಂಧನ ಬಳಿಕ ಮತ್ತಷ್ಟುವಿಐಪಿ ಕುಳಗಳು ಬಲೆಗೆ ಬೀಳಬಹುದು ಎಂದು ಸಿಸಿಬಿ ಹೇಳಿದೆ.

ಪಾದರಕ್ಷೆ, ಮೇಕಪ್‌ ಕಿಟ್‌ನಲ್ಲಿ 35 ಲಕ್ಷ ಮೌಲ್ಯದ ಡ್ರಗ್‌ ಪತ್ತೆ

ಡ್ರಗ್ಸ್‌ ದಂಧೆ ವಿರುದ್ಧ ಕಸ್ಟಮ್ಸ್‌ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ನಗರಕ್ಕೆ ಪಾದರಕ್ಷೆಗಳು ಹಾಗೂ ಸೌಂದರ್ಯವರ್ಧಕದಲ್ಲಿ ಅಡಗಿಸಿಟ್ಟು ಸಾಗಿಸುತ್ತಿದ್ದ 36.5 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಶಪಡಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಕೊರಿಯರ್‌ನಲ್ಲಿ ಐದು ಜೊತೆ ಮಹಿಳೆಯರ ಪಾದರಕ್ಷೆಗಳು ಬಂದಿದ್ದವು. ಆಗ ಅವುಗಳ ಮೇಲೆ ಶಂಕಿತರಾದ ಅಧಿಕಾರಿಗಳು, ಪಾದರಕ್ಷೆಗಳನ್ನು ಕೊಯ್ದು ಪರಿಶೀಲಿಸಿದಾಗ 24.5 ಲಕ್ಷ ಮೌಲ್ಯದ 490 ಗ್ರಾಂ ಮೆಥಾಕ್ವಾಲೋನ್‌ ಡ್ರಗ್ಸ್‌ ಪತ್ತೆಯಾಗಿದೆ. ಅದೇ ರೀತಿ ಮತ್ತೊಂದು ಕಣ್ಣಿನ ಕಾಡಿಗೆಯಲ್ಲಿ ಮಾದಕ ವಸ್ತು ಸಿಕ್ಕಿದೆ.

ಈ ಸೌಂರ್ದವರ್ಧಕ ಸಹ ಆಫ್ರಿಕಾದಿಂದಲೇ ಪೋಸ್ಟ್‌ ಆಗಿತ್ತು. ಕಾಡಿಗೆ ಬಾಕ್ಸ್‌ನನ್ನು ಶೋಧಿಸಿದಾಗ 12 ಲಕ್ಷ ಮೌಲ್ಯದ 241 ಗ್ರಾಂ ಡ್ರಗ್ಸ್‌ ಪತ್ತೆಯಾಗಿದೆ. ಡಾರ್ಕ್ ವೆಬ್‌ಸೈಟ್‌ ಮೂಲಕ ಸ್ಥಳೀಯ ಪೆಡ್ಲರ್‌ಗಳು ಡ್ರಗ್ಸ್‌ ಖರೀದಿಗೆ ಯತ್ನಿಸುತ್ತಾರೆ. ಹಾಗಾಗಿ ಅನಾಮಧೇಯ ವ್ಯಕ್ತಿಗಳ ಹೆಸರಿನಲ್ಲಿ ಕೊರಿಯರ್‌ ಕಳುಹಿಸುತ್ತಾರೆ. ಬಳಿಕ ವಿಮಾನ ನಿಲ್ದಾಣದಿಂದ ಆ ವ್ಯಕ್ತಿಗಳು ಹೊರಬರುತ್ತಿದ್ದಂತೆ ದಾರಿ ಮಧ್ಯದಲ್ಲಿಯೇ ಅವರನ್ನು ಭೇಟಿಯಾಗಿ ಡ್ರಗ್ಸ್‌ ಅನ್ನು ಪೆಡ್ಲರ್‌ಗಳು ಸ್ವೀಕರಿಸುತ್ತಾರೆ. ಹೀಗೆ ಡ್ರಗ್ಸ್‌ ಸಾಗಾಣಿಕೆ ನೆರವಾದವರಿಗೆ ಕೈ ತುಂಬಾ ಹಣ ಸಿಗುತ್ತದೆ. ಈ ಎರಡು ಪ್ರಕರಣಗಳ ಆರೋಪಿಗಳಿಗೆ ತನಿಖೆ ನಡೆಸಲಾಗುತ್ತಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.
 

click me!