ಭೀಮಾತೀರದ ಬೈರಗೊಂಡನ ಮೇಲೆ ಫೈರಿಂಗ್‌: ಇಬ್ಬರ ಬಂಧನ

By Kannadaprabha News  |  First Published Nov 6, 2020, 2:37 PM IST

ಡಿಕ್ಕಿ ಹೊಡೆದ ಟಿಪ್ಪರ್‌ ಚಾಲಕ ಸೇರಿದಂತೆ ಇಬ್ಬರ ಬಂಧನ| ಹಳೆಯ ದ್ವೇಷ ಹಾಗೂ ಗ್ಯಾಂಗ್‌ ಕಟ್ಟಿಕೊಳ್ಳುವ ಖಯ್ಯಾಲಿಯಿಂದಾಗಿ ಈ ಕೃತ್ಯ| ವಿಚಾರಣೆಯಿಂದ ಮತ್ತಷ್ಟು ಆರೋಪಿಗಳು ಬೆಳಕಿಗೆ ಬರಲಿದ್ದಾರೆ: ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್| 


ವಿಜಯಪುರ(ನ.06): ಭೀಮಾತೀರದ ಮಹಾದೇವ ಬೈರಗೊಂಡನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್‌ ಮಾಹಿತಿ ನೀಡಿದ್ದಾರೆ. 

ಗುರುವಾರ ತಡ ರಾತ್ರಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದುಷ್ಕೃತ್ಯ ಎಸಗಿದವರ ಮಾಹಿತಿ ಸಿಕ್ಕಿದೆ. ಭೀಮಾ ತೀರದ ಮಹಾದೇವ ಸಾಹುಕಾರ್‌ ಬೈರಗೊಂಡ ಕಾರಿಗೆ ಗುದ್ದಿದ ಟಿಪ್ಪರ್‌ ಚಾಲಕ ಹಾಗೂ ಮಾಹಿತಿ ನೀಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

Latest Videos

undefined

ಟಿಪ್ಪರ್‌ ಚಾಲಕ ಉಮರಾಣಿಯ ನಾಗಪ್ಪ ಪೀರಗೊಂಡ ಹಾಗೂ ಮಹಾದೇವ ಸಾಹುಕಾರ್‌ ಬಗ್ಗೆ ಮಾಹಿತಿ ನೀಡಿದ ವಿಜಯ ತಾಳಿಕೋಟೆ ಬಂಧಿತ ಆರೋಪಿಗಳು. ಹಳೆಯ ದ್ವೇಷ ಹಾಗೂ ಗ್ಯಾಂಗ್‌ ಕಟ್ಟಿಕೊಳ್ಳುವ ಖಯ್ಯಾಲಿಯಿಂದಾಗಿ ಈ ಕೃತ್ಯ ಎಸಗಲಾಗಿದೆ. ಗ್ಯಾಂಗ್‌ ಕಟ್ಟುವ ಉದ್ದೇಶದ ಹಿಂದೆ ಮಡಿವಾಳ ಹಿರೇಮಠ ಸ್ವಾಮಿ ಎಂಬಾತ ಕೇಂದ್ರ ಬಿಂದುವಾಗಿದ್ದಾನೆ. ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಕಳೆದ ಆರೇಳು ತಿಂಗಳಿಂದ ಪುಣೆ ಮೊದಲಾದ ಕಡೆಗಳಲ್ಲಿ ಯುವಕರನ್ನು ಕಟ್ಟಿಕೊಂಡು ಫೈನಾನ್ಸ್‌ ನಡೆಸಿ ಯುವಕರ ದಾರಿ ತಪ್ಪಿಸಿ ಗ್ಯಾಂಗ್‌ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದ ಎಂಬುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಹೇಳಿದರು.

ಭೀಮಾ ತೀರದಲ್ಲಿ ಮತ್ತೆ ಗುಂಡಿನ‌ ಸದ್ದು: ಇನ್ನೂ ಮುಗಿಯದ ರಕ್ತ ಚರಿತ್ರೆ..!

ಕಾತ್ರಾಳದಲ್ಲೂ ಸ್ಕೆಚ್‌:

ಧರ್ಮರಾಜ್‌ ಚಡಚಣ ಹಳೆಯ ಸಹಚರರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಕಾತ್ರಾಳ ಗ್ರಾಮದಲ್ಲಿ ನಡೆದಿದ್ದ ಸತ್ಸಂಗ ವೇಳೆಯಲ್ಲಿಯೇ ಬೈರಗೊಂಡನ ಮೇಲೆ ದಾಳಿ ನಡೆಸುವ ಸ್ಕೇಚ್‌ ಅನ್ನು ಆರೋಪಿಗಳು ರೂಪಿಸಿದ್ದರು. ಆದರೆ ಆ ಕಾರ್ಯಕ್ರಮ ಕೊರೋನಾ ಹಿನ್ನೆಲೆಯಲ್ಲಿ ರದ್ದಾಗಿದ್ದರಿಂದ ಸಾಧ್ಯವಾಗಲಿಲ್ಲ ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದರು.

ಭೀಮಾ ತೀರದ ಮಹಾದೇವ ಸಾಹುಕಾರ್‌ ಭೈರಗೊಂಡನ ಮೇಲೆ ದಾಳಿ ನಡೆಸಲು ಕಾತ್ರಾಳ ಸತ್ಸಂಗ ಕಾರ್ಯಕ್ರಮವೂ ಸೇರಿದಂತೆ ಆರೋಪಿಗಳು ಅನೇಕ ಯೋಜನೆಗಳನ್ನು ಹಾಕಿದ್ದರು. ಆದರೆ ಎಲ್ಲ ಯೋಜನೆಗಳು ವಿಫಲವಾಗಿದ್ದವು. ನ.2ರಂದು ಕೃತ್ಯ ಎಸಗುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಹಲವಾರು ಆರೋಪಿಗಳು ಶಾಮೀಲಾಗಿದ್ದಾರೆ. ಗ್ಯಾಂಗ್‌ ಕಟ್ಟುವಲ್ಲಿ ಖಯಾಲಿ ಹೊಂದಿದ್ದ ಮಡಿವಾಳ ಹಿರೇಮಠ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನನ್ನು ಆದಷ್ಟು ಬೇಗನೆ ಬಂಧಿಸಲಾಗುವುದು. ಆತನ ವಿಚಾರಣೆಯಿಂದ ಮತ್ತಷ್ಟು ಆರೋಪಿಗಳು ಬೆಳಕಿಗೆ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಇದ್ದರು.
 

click me!