* ಚಿಕ್ಕಮಗಳೂರಿನಲ್ಲಿ ಎಸಿಬಿ ಅಧಿಕಾರಿಗಳ ಭರ್ಜರಿ ಬೇಟೆ
* SDA ತಿಮ್ಮಯ್ಯ ನಿವಾಸದಲ್ಲಿ ಅಕ್ರಮ ಸಂಪತ್ತು ಪತ್ತೆ
* ಡಿವೈಎಸ್ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ನಡೆದಿರುವ ದಾಳಿ
ಚಿಕ್ಕಮಗಳೂರು, (ಜೂನ್. 17) : ರಾಜ್ಯಾದ್ಯಂತ ಇಂದು(ಶುಕ್ರವಾರ) ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ರಾಜ್ಯದ ವಿವಿಧೆಡೆ ಸೇರಿದಂತೆ ಚಿಕ್ಕಮಗಳೂರಿನ ಕಡೂರಿನಲ್ಲಿ ಕೂಡ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಸರ್ಕಾರಿ ಅಧಿಕಾರಿಯ ಮನೆಯಲ್ಲಿ ಶೋಧ ಕಾರ್ಯ ನಡೆಸಿ ಅಪಾರ ಪ್ರಮಾಣ ಆಸ್ತಿಯನ್ನು ಪತ್ತೆ ಮಾಡಿದ್ದಾರೆ…
ಎಸ್ ಡಿಎ ನೌಕರನ ಬಳಿ ಆಸ್ತಿ, ನಿವೇಶನ, ಮನೆಯ ದಾಖಲೆ ಪತ್ತೆ
ಚಿಕ್ಕಮಗಳೂರು ಜಿಲ್ಲೆಯಲ್ಲೂ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದು, ಅಜ್ಜಂಪುರದ ಪಟ್ಟಣ ಪಂಚಾಯತ್ ನಲ್ಲಿ ಎಸ್.ಡಿ.ಎ. ಆಗಿರುವ ತಿಮ್ಮಯ್ಯ ನಿವಾಸದ ಮೇಲೆ ದಾಳಿ ನಡೆದಿದೆ.ಡಿವೈಎಸ್ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ತಿಮ್ಮಯ್ಯರ ನಿವಾಸ ಸೇರಿದಂತೆ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಕಡೂರು ಪಟ್ಟಣದ ತಿಮ್ಮಯ್ಯ ನಿವಾಸ, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಅಜ್ಜಂಪುರ ಪಟ್ಟಣ ಪಂಚಾಯತ್ ಕಚೇರಿ ಮತ್ತು ತಿಮ್ಮಯ್ಯಯ ತಂದೆಯ ಬಸೂರು ನಿವಾಸದ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿನೆ ನಡೆಸಿದ್ದಾರೆ.
Kannada News LIVE: ಸರಕಾರಿ ನೌಕರಿ, SDA ಬಳಿ ಕೋಟಿ ಕೋಟಿ ಆಸ್ತಿ! ...
ಎಸ್.ಡಿ.ಎ. ಆಗಿರುವ ತಿಮ್ಮಯ್ಯ ಆದಾಯಕ್ಕಿಂತ 80 ಲಕ್ಷ ರೂ.ಗೂ ಅಧಿಕ ಹಣ ಗಳಿಸಿರುವ ಆರೋಪ ಎದುರಿಸುತ್ತಿದ್ದಾರೆ.ಕಡೂರು ಪುರಸಭೆ ಹಾಗೂ ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ಎಸ್ ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ .ಜಿ. ತಿಮ್ಮಯ್ಯ ಮನೆ ಮೇಲೆ ನಡೆದ ಎಸಿಬಿ ದಾಳಿಯಲ್ಲಿ 160 ಗ್ರಾಂ ಚಿನ್ನಾಭರಣ ಹಾಗೂ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ.
200 ಕುರಿಗಳ ಫಾರಂ ಹೊಂದಿರುವ ತಿಮ್ಮಯ್ಯ
ಬೆಳಿಗ್ಗೆ ಎಸಿಬಿ ಡಿವೈ ಎಸ್ ಪಿ ಅನಿಲ್ ರಾಥೋಡ್ ನೇತೃತ್ವದಲ್ಲಿ ಮೂವರು ಇನಸ್ಪೆಕ್ಟರ್ ಒಳಗೊಂಡ ತಂಡ ದಾಳಿ ನಡೆಸಿದ್ದು ಸಂಜೆವರೆಗೂ ಶೋಧ ಕಾರ್ಯ ಮುಂದುವರೆದಿತ್ತು .ಕಡೂರು ಪಟ್ಟಣದಲ್ಲಿ ನಲವತ್ತು ಲಕ್ಷ ರೂ. ಬೆಲೆಬಾಳುವ 1ಮನೆ ಐವತ್ತು ಲಕ್ಷ ರೂ. ಬೆಲೆಬಾಳುವ ವಾಣಿಜ್ಯ ಮಳಿಗೆ 3 ನಿವೇಶನಗಳು 8 ಗುಂಟೆ ಜಾಗ ಪತ್ತೆಯಾಗಿದೆ. ಇದಲ್ಲದೆ ಬಾಸೂರಿನಲ್ಲಿ ಸುಮಾರು 80 ಲಕ್ಷ ರೂ ಬೆಲೆಬಾಳುವ ಇಪ್ಪತ್ತು ಎಕರೆ ಜಮೀನು,160 ಗ್ರಾಂ ಚಿನ್ನ-ಬೆಳ್ಳಿ ಆಭರಣ ದೊರಕಿದ್ದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಿಲ್ ಕಲೆಕ್ಟರ್ ಆಗಿ ಕೆಲಸಕ್ಕೆ ಸೇರಿದ್ದ ಈತ ನಂತರದ ದಿನಗಳಲ್ಲಿ ನಕಲಿ ಅಂಕಪಟ್ಟಿಗಳನ್ನು ನೀಡಿ ಉನ್ನತ ಹುದ್ದೆಗೆ ಬಡ್ತಿ ಹೊಂದಿದ್ದ ಎನ್ನುವ ಆರೋಪಗಳು ಕೇಳಿಬಂದಿವೆ ಜೊತೆಗೆ ಆಸ್ತಿ ಗಳನ್ನ ಶೋಧ ಕಾರ್ಯದಲ್ಲಿ ವೇಳೆಯಲ್ಲಿ ಬಾಸೂರಿನಲ್ಲಿ 200 ಕುರಿಗಳ ಫಾರಂ ಹೊಂದಿರುವ ಬಗ್ಗೆ ಪತ್ರಗಳು ದೊರಕಿದೆ.