ಯುವಕರಿಬ್ಬರೊಂದಿಗೆ ಲಾಡ್ಜಲ್ಲಿ ಖಾಸಗಿ ಕ್ಷಣ ಕಳೆದ ಮಹಿಳೆ, ಡ್ರಾಪ್ ವೇಳೆ ಅಪಾಘತ ನಾಟಕ ಸೃಷ್ಟಿ, ಕಾರ್ ಸಮೇತ ಗಿರಾಕಿಗಳ ಕಿಡ್ನಾಪ್, ತಪ್ಪಿಸಿಕೊಂಡ ಯುವಕ ಠಾಣೆಗೆ ದೂರು.
ಬೆಂಗಳೂರು(ಫೆ.22): ಮೂರು ದಿನಗಳ ಹಿಂದೆ ಇರುಳಿನಲ್ಲಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಇಬ್ಬರು ಯುವಕರಿಂದ .5 ಲಕ್ಷ ಸುಲಿಗೆಗೆ ಯತ್ನಿಸಿದ್ದ 28 ವರ್ಷದ ಮಹಿಳೆ ಹಾಗೂ ಆಕೆಯ ಏಳು ಮಂದಿ ಸಹಚರರ ತಂಡವನ್ನು ಬೇಗೂರು ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಕೆಂಗೇರಿ ಸಮೀಪದ ಹೊಸಕೆರೆಯ ಮಧು ಅಲಿಯಾಸ್ ಪ್ರಿಯಾ, ಆಕೆಯ ಗೆಳೆಯ ಹೆಬ್ಬಾಳದ ತಿರುಮಲೇಶ ಅಲಿಯಾಸ್ ತಿರುಮಲ, ಸಹಚರರಾದ ನೇಪಾಳ ಪ್ರಜೆ ದಲ್ಬೀರ್ ಸಿಂಗ್ ಅಲಿಯಾಸ್ ದೀಪು, ಮುಖೇಶ್, ಮಂಜುನಾಥ್, ಭರತ್, ನವೀನ್ ಹಾಗೂ ಕೆಂಪರಾಜು ಬಂಧಿತರಾಗಿದ್ದು, ಆರೋಪಿಗಳಿಂದ ಕಾರು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ತನ್ನ ಗೆಳೆಯ ತಿರುಮಲನ ಮೂಲಕ ಮಧುಗೆ ಖಾಸಗಿ ಕಂಪನಿ ಉದ್ಯೋಗಿ ಚೇತನ (ಹೆಸರು ಬದಲಾಯಿಸಲಾಗಿದೆ) ಪರಿಚಿತನಾಗಿದ್ದ. ಬಳಿಕ ಫೆ.18ರಂದು ‘ರಾತ್ರಿ ವಿಹಾರ’ದ ನೆಪದಲ್ಲಿ ಚೇತನ ಹಾಗೂ ಆತನ ಸ್ನೇಹಿತ ಲೋಕೇಶ್ (ಹೆಸರು ಬದಲಾಯಿಸಲಾಗಿದೆ)ನನ್ನು ಕರೆದುಕೊಂಡು ಬಳಿಕ ಅವರನ್ನು ಅಪಹರಿಸಿ ಹಣ ಸುಲಿಗೆಗೆ ಮಧು ಹಾಗೂ ಆಕೆಯ ಸಹಚರರು ಯತ್ನಿಸಿದ್ದರು. ಈ ವೇಳೆ ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಬೇಗೂರು ಠಾಣೆ ಪೊಲೀಸರಿಗೆ ಸಂತ್ರಸ್ತ ಲೋಕೇಶ ದೂರು ನೀಡಿದ್ದ.
Chikkamagaluru: ಮೊಬೈಲ್ ಕಿತ್ತುಕೊಳ್ಳಲು ಬಂದವನನ್ನ ಕಲ್ಲಿನಿಂದ ಜಜ್ಜಿ ಕೊಲೆ: ಆರೋಪಿ ಬಂಧನ
ಕೂಡಲೇ ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಎಚ್.ಡಿ.ಅನಿಲ್ ಕುಮಾರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಗುರುಸ್ವಾಮಿ ಹಿರೇಮಠ್ ನೇತೃತ್ವದ ತಂಡವು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ 24 ತಾಸಿನಲ್ಲೇ ಮೈಸೂರು ಜಿಲ್ಲೆ ನಂಜನಗೂಡು ಬಳಿ ಆರೋಪಿಗಳನ್ನು ಬಂಧಿಸಿ ಅಪಹೃತ ಚೇತನ್‌ನನ್ನು ರಕ್ಷಿಸಿದ್ದಾರೆ.
ಮೋಹದ ಬಲೆಗೆ ಬಿದ್ದ ಯುವಕರು
ತನ್ನ ಪತಿ ಅಗಲಿಕೆ ಬಳಿಕ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುವ ಜವಾಬ್ದಾರಿ ಹೊತ್ತ ಮಧು, ಹಣಕ್ಕಾಗಿ ಅನೈತಿಕ ಮಾರ್ಗ ತುಳಿದಿದ್ದಳು. ಹಲವು ದಿನಗಳಿಂದ ಆಕೆಗೆ ಹೆಬ್ಬಾಳದ ತಿರುಮಲ ಹಾಗೂ ದೀಪು ಸ್ನೇಹವಾಗಿತ್ತು. ಗೆಳತಿ ಮಧುವನ್ನು ಮುಂದಿಟ್ಟು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣವಂತರ ಸುಲಿಗೆ ಮಾಡುವುದು ತಿರುಮಲನ ದುರಾಲೋಚನೆಯಾಗಿತ್ತು. ಹೀಗಿರುವಾಗ ಹೆಣ್ಣಿನ ಸಂಗ ಬಯಸಿದ್ದ ತನ್ನ ಗೆಳೆಯ ಚೇತನ್‌ಗೆ ಮಧುಳನ್ನು ತಿರುಮಲ ಪರಿಚಯ ಮಾಡಿಸಿದ್ದ. ಈ ಸ್ನೇಹವಾದ ಬಳಿ ಕೆಲದಿನಗಳ ಹಿಂದೆ ಆಕೆಯೊಂದಿಗೆ ತುಮಕೂರಿಗೆ ವಿಹಾರಕ್ಕೆ ಕರೆದೊಯ್ದು ಖಾಸಗಿ ಕ್ಷಣಗಳನ್ನು ಸವಿದು ಚೇತನ್ ಮರಳಿದ್ದ.
ಈ ‘ವಿಹಾರ’ ರಸಮಯ ಸಂಗತಿಯನ್ನು ತನ್ನ ಸ್ನೇಹಿತ ಲೋಕೇಶ್ ಬಳಿ ಆತ ಹೇಳಿಕೊಂಡಿದ್ದ. ಆಗ ತನಗೂ ಆಕೆಯೊಂದಿಗೆ ವಿಹಾರಕ್ಕೆ ಅವಕಾಶ ಕೊಡಿಸುವಂತೆ ಲೋಕೇಶ್ ಕೇಳಿದ್ದ. ಈ ಮಾತಿಗೊಪ್ಪಿದ ಚೇತನ್, ಮಧುಳಿಗೆ ಮತ್ತೆ ‘ಸುತ್ತಾಟ’ಕ್ಕೆ ಆಹ್ವಾನಿಸಿದ್ದ. ರಾತ್ರಿ ಚೇತನ್ ಕರೆದಿರುವುದನ್ನು ತಿರುಮಲನಿಗೆ ತಿಳಿಸಿದ ಮಧು, ಆತನ ಸೂಚನೆ ಮೇರೆಗೆ ಹನಿಟ್ರ್ಯಾಪ್ ಬಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಮೋಜು ಮಸ್ತಿ ಬಳಿಕ ಗೆಳತಿಯ ನಿಜ ಬಣ್ಣ!
ಅಂತೆಯೇ ಫೆ.18ರಂದು ರಾತ್ರಿ ಕೆಂಗೇರಿ ಬಳಿ ತನ್ನ ಕಾರಿನಲ್ಲಿ ಮಧು ಹಾಗೂ ಗೆಳೆಯನನ್ನು ಲೋಕೇಶ್ ಪಿಕ್‌ಅಪ್ ಮಾಡಿದ್ದಾನೆ. ಅಲ್ಲಿಂದ ಬೇಗೂರಿಗೆ ಕರೆತಂದು ಲಾಡ್ಜ್‌ನಲ್ಲಿ ಆಕೆಯೊಂದಿಗೆ ಈ ಗೆಳೆಯರು ಕೆಲ ಹೊತ್ತು ಕಳೆದಿದ್ದಾರೆ. ಆನಂತರ ರಾತ್ರಿ 2ಕ್ಕೆ ಮನೆಗೆ ಹೊರಟ್ಟಿದ್ದಾರೆ. ದೇವರಚಿಕ್ಕನಹಳ್ಳಿಯ ತನ್ನ ಮನೆ ಬಳಿ ಚೇತನ್ ಇಳಿಯುವಾಗ ಅವರ ಕಾರನ್ನು ಮೂರು ಬೈಕ್‌ಗಳಲ್ಲಿ ಬಂದ ತಿರುಮಲನ ತಂಡ ಅಡ್ಡಗಟ್ಟಿದೆ. ಬಳಿಕ ಅದೇ ಕಾರಿನಲ್ಲಿ ಬೆದರಿಸಿ ಮೂವರನ್ನು ಅಪಹರಿಸಿ ಆರೋಪಿಗಳು ಬನ್ನೇರುಘಟ್ಟರಸ್ತೆಯ ಕೋಳಿ ಫಾರಂ ಲೇಔಟ್‌ಗೆ ಕರೆತಂದಿದ್ದಾರೆ. ಆ ವೇಳೆ ಕಾರಿನೊಳಗೆ ಮಧ್ಯದ ಆಸನದಲ್ಲಿ ಕುಳಿತಿದ್ದ ಲೋಕೇಶ್, ಬಲವಾಗಿ ಬಾಗಿಲುದೂಡಿ ಹೊರಬಂದು ತಪ್ಪಿಸಿಕೊಂಡಿದ್ದಾನೆ. ಕೊನೆಗೆ ಬೇಗೂರು ಠಾಣೆಗೆ ದೌಡಾಯಿಸಿ ತನ್ನ ಸ್ನೇಹಿತ ಚೇತನ್ ಹಾಗೂ ಮಧುಳನ್ನು ಕಿಡಿಗೇಡಿಗಳು ಅಪಹರಿಸಿದ್ದಾರೆ ಎಂದು ಲೋಕೇಶ್ ದೂರು ನೀಡಿದ್ದ.
ಅದರನ್ವಯ ತನಿಖೆ ನಡೆಸಿದಾಗ ಚೇತನ್ ಮೊಬೈಲ್ ಟವರ್ ಲೋಕೇಶನ್ ಮೂಲಕ ಅಪಹರಣಕಾರರ ಜಾಡು ಸಿಕ್ಕಿತು. ಬನ್ನೇರುಘಟ್ಟರಸ್ತೆಯಿಂದ ಮೈಸೂರು ರಸ್ತೆಗೆ ಬಂದು ಅಲ್ಲಿಂದ ನಂಜಗೂಡಿಗೆ ತೆರಳಿ ಚೇತನ್‌ನನ್ನು ಆರೋಪಿಗಳು ಒತ್ತೆಯಾಗಿಟ್ಟು .5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಬಂಧನ ಬಳಿಕ ಮಧುಳ ನಿಜ ಬಣ್ಣ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೊತೆಯಲ್ಲಿದ್ದೇ ಮಾಹಿತಿ ಕೊಟ್ಲು
ಕೆಂಗೇರಿಯಿಂದ ದೇವರಚಿಕ್ಕನಹಳ್ಳಿವರೆಗೆ ಲೋಕೇಶ್ ಕಾರಿನಲ್ಲಿ ಪ್ರಯಾಣಿಸುವಾಗ ನಿರಂತರವಾಗಿ ತನ್ನ ಗೆಳೆಯ ತಿರುಮಲನಿಗೆ ಮಧು ಮಾಹಿತಿ ನೀಡುತ್ತಿದ್ದಳು. ಲಾಡ್ಜ್‌ನಲ್ಲಿ ಹೊರಬಂದ ಬಳಿಕ ನನ್ನ ‘ಕೆಲಸ’ ಮುಗಿಯಿತು ಎಂದು ಆತನಿಗೆ ಟವರ್ ಲೋಕೇಶ್ ಕಳುಹಿಸಿ ಪೂರ್ವ ನಿಯೋಜಿತ ಸಂಚು ಕಾರ್ಯರೂಪಕ್ಕೆ ಸಿಗ್ನಲ್ ಕೊಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
‘ಮೀಡಿಯಾ’ದವನು ಎಂದು ಕಿರುಚಾಡಿದ!
‘ನಾನು ಮೀಡಿಯಾದವನು. ನನಗೆ ಹೆಬ್ಬಾಳ ಪೊಲೀಸರ ಪರಿಚಯವಿದೆ. ಪೊಲೀಸರಿಗೆ ನಾನು ಮಾಹಿತಿದಾರನಾಗಿದ್ದು, ಅನೈತಿಕ ಚಟುವಟಿಕೆ ಮಾಹಿತಿ ಪಡೆದು ದಾಳಿ ನಡೆಸಲು ಬಂದಿದ್ದೆ’ ಎಂದು ತಿರುಮಲ ಕಿರುಚಾಡಿದ್ದಾನೆ. ಬಳಿಕ ಆತನಿಗೆ ಪೊಲೀಸರು ಬೆತ್ತದ ‘ಬಿಸಿ’ ಮುಟ್ಟಿಸಿದ್ದಾಗ ಕೊನೆಗೆ ಸತ್ಯ ಕಕ್ಕಿದ್ದಾನೆ.
ಆನ್‌ಲೈನ್‌ನಲ್ಲಿ ಚಂದದ ಹುಡುಗಿ ನೋಡಿ ಮದುವೆಯಾದ, ರೌಡಿಶೀಟರ್ ಎಂದು ಗೊತ್ತಾಗಿ ದಂಗಾದ!
ಆಂಧ್ರಪ್ರದೇಶ ಮೂಲದ ತಿರುಮಲ, ಹಲವು ವರ್ಷಗಳಿಂದ ತನ್ನ ತಾಯಿ ಜತೆ ಹೆಬ್ಬಾಳ ಬಳಿ ನೆಲೆಸಿದ್ದ. ಇದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಬಳಿ ಪರಿಚಿತನಿಗೆ ಬ್ಲ್ಯಾಕ್‌ಮೇಲ್ ಮಾಡಿ ಆತ .15 ಸಾವಿರ ಸುಲಿಗೆ ಮಾಡಿರುವುದು ಗೊತ್ತಾಗಿದೆ. ಈ ಹನಿಟ್ರ್ಯಾಪ್ ಬಲೆಗೆ ಹಲವು ಮಂದಿ ಬಿದ್ದು ಹಣ ಕಳೆದುಕೊಂಡಿರುವ ಅನುಮಾನವಿದೆ. ಕೆಲವರು ಮರ್ಯಾದೆಗೆ ಅಂಜಿ ಸಂತ್ರಸ್ತರು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿ ಉದ್ಯೋಗಿ, ಕ್ಯಾಬ್ ಚಾಲಕ
ಈ ಪ್ರಕರಣದ ಇಬ್ಬರು ಸಂತ್ರಸ್ತರು ಅವಿವಾಹಿತರು. ಒಬ್ಬ ಕ್ಯಾಬ್ ಚಾಲಕನಾಗಿದ್ದರೆ, ಮತ್ತೊಬ್ಬ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ. ಯೌವನದ ಬಿಸುಪಿನಲ್ಲಿ ಹೆಣ್ಣಿನ ಸಂಗಕ್ಕೆ ಹಾತೊರೆದು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.