ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ನಡೆದ ಘಟನೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಫೆ.24): ಆಸ್ತಿಗೆ ಸಂಬಂಧಿಸಿದಂತೆ ಜಗಳ ಉಂಟಾಗಿ ಮಾರಕಾಸ್ತ್ರಗಳಿಂದ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಕೊಲೆಗಡುಕರಿಂದ ಪಾರಾಗಿದ್ದು, ಕೊನೆಗೂ ಆರೋಪಿಗಳಿಬ್ಬರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.
ಆಸ್ತಿ ವಿಚಾರಕ್ಕೆ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ
ಹೌದು, ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಾಲ್ವರನ್ನು ಕೊಚ್ಚಿ ಕೊಲೆಗೈದ ನಡೆದ ಈ ಘಟನೆ ಜಿಲ್ಲೆಯನ್ನೇ ತಲ್ಲಣಗೊಳಿಸಿದೆ. ಇಲ್ಲಿನ ನಿವಾಸಿಗಳಾಗಿದ್ದ ಶಂಭು ಹೆಗಡೆ(65), ಅವರ ಪತ್ನಿ ಮಾದೇವಿ ಹೆಗಡೆ (58), ಅವರ ಮಗ ರಾಜೀವ್ ಹೆಗಡೆ (40) ಹಾಗೂ ಸೊಸೆ ಕುಸುಮಾ ಭಟ್(32) ಭೀಕರವಾಗಿ ಕೊಲೆಯಾಗಿದ್ದಾರೆ. ಶಂಭು ಹೆಗಡೆಯವರಿಗೆ ನಾಲ್ವರು ಮಕ್ಕಳಾಗಿದ್ದು ಇವರಲ್ಲಿ ಓರ್ವ ಮಗ ಮೂತ್ರಪಿಂಡದ ಕಾಯಿಲೆಯಿಂದ ಹಿಂದೆ ಸಾವನ್ನಪ್ಪಿದರು. ಇನ್ನೋರ್ವ ಮಗ ಸೇರಿ ಇಬ್ಬರು ಹೆಣ್ಣು ಮಕ್ಕಳು. ಊರಲ್ಲಿ ಉತ್ತಮ ಜೀವನ ಸಾಗಿಸುತ್ತಿದ್ದ ಇದ್ದ ಶಂಭು ಹೆಗಡೆ ಹಾಗೂ ಹಿರಿಯ ಮಗನ ಹೆಂಡತಿ ವಿದ್ಯಾ ನಡುವೆ ಆಗಾಗ ಆಸ್ತಿ ಸಂಬಂಧಿಸಿದಂತೆ ಜಗಳ ಆಗುತ್ತಿತ್ತು ಎನ್ನಲಾಗಿದೆ.
Shivamogga: ಕುಡಿಯಲು ಹಣ ಕೊಡದ ಸ್ನೇಹಿತನ ಬರ್ಬರ ಕೊಲೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಶಂಭು ಹೆಗಡೆಯ ಹಿರಿಯ ಮಗ ಶ್ರೀಧರ ಹೆಗಡೆ ಸತ್ತ ಬಳಿಕ ಸೊಸೆ ತನ್ನ ಗಂಡನ ಆಸ್ತಿಯನ್ನು ಪಡೆದಿದ್ದಳು. ಈ ಆಸ್ತಿಯನ್ನು ಕೊಡಲು ಶಂಭು ಹೆಗಡೆ ಹಾಗೂ ಇನ್ನೋರ್ವ ಮಗನಾದ ರಾಜೀವ ಹೆಗಡೆಗೆ ಮನಸ್ಸು ಇರಲಿಲ್ಲ ಎನ್ನಲಾಗಿದ್ದು, ಬಳಿಕ ಸೊಸೆ ವಿದ್ಯಾ ಆಸ್ತಿಯನ್ನು ಪಡೆದು ಜೀವನ ಸಾಗಿಸುತ್ತಾ ಬಂದಿದ್ದಳು. ಇದರೊಂದಿಗೆ ಶಂಭು ಹೆಗಡೆ ತನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಸಮನಾಗಿ ಆಸ್ತಿ ಹಂಚಿದ್ದರು. ಆದ್ರೆ, ಮೃತಗೊಂಡ ಮಗನ ಹೆಂಡತಿಗೆ ನೀಡಿದ ಆಸ್ತಿ ಕಡಿಮೆಯಾಯ್ತು ಎಂದು ಆಕೆಯ ಸಹೋದರ ವಿನಯ ಭಟ್ ಹಾಗೂ ಶಂಭು ಹೆಗಡೆ ಕುಟುಂಬದ ಜತೆ ಆಗಾಗ ಜಗಳವಾಗುತ್ತಿತ್ತು. ಇಂದು ಸೊಸೆಯ ವಿದ್ಯಾಳ ಸಹೋದರ ತನ್ನ ಅಕ್ಕನಿಗೆ ಸೇರಿದ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಶಂಭು ಹೆಗಡೆ ಹಾಗೂ ಸೊಸೆ ವಿದ್ಯಾಳ ಸಹೋದರ ವಿನಯ ಹೆಗಡೆ ನಡುವೆ ಜಗಳ ಉಂಟಾಗಿದೆ.
ವಿದ್ಯಾಳಿಗೆ ಸೇರಿದ ಜಾಗದಲ್ಲಿ ಶಂಭು ಹೆಗಡೆಯವರು ಕೊಟ್ಟಿಗೆ ಕಟ್ಟುತ್ತಿದ್ದರು. ಈ ಕುರಿತಂತೆ ಮುಂಜಾನೆಯಿಂದ ಜಗಳ ನಡೆದಿತ್ತು ಎನ್ನಲಾಗಿದ್ದು, ಇದು ತುಂಬಾ ವಿಕೋಪಕ್ಕೆ ಹೋದಾಗ ಶ್ರೀಧರ ಭಟ್ ಮತ್ತು ವಿನಯ ಭಟ್ ಈ ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಘಟನೆಯಲ್ಲಿ ಹೆತ್ತವರು ಹಾಗೂ ಕುಟುಂಬದವರನ್ನು ಕಳೆದುಕೊಂಡು ಇಬ್ಬರು ಪುಟಾಣಿಗಳು ಅನಾಥರಾಗಿದ್ದಾರೆ. ಜಗಳ ಉಂಟಾಗಿದ್ದ ಸಂದರ್ಭದಲ್ಲಿ ಚಿಕ್ಕ ಬಾಲಕ ಮನೆಯಲ್ಲಿ ಮಲಗಿದ್ದ ಎನ್ನಲಾಗಿದ್ದು, ಇನ್ನೋರ್ವ ಬಾಲಕಿ ಶಾಲೆಗೆ ಹೋಗಿದ್ದರಿಂದ ಬದುಕಿದ್ದಾರೆ. ಇನ್ನು ಆರೋಪಿಗಳಾದ ಶ್ರೀಧರ ಹಾಗೂ ವಿದ್ಯಾ ಸಹೋದರ ವಿನಯ ಭಟ್ ಕತ್ತಿಯಿಂದ ಹಲ್ಲೆ ಮಾಡಿ ಈ ಕೃತ್ಯ ಎಸಗಿದ್ದಾರೆ. ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾಳ ಸಹೋದರ ಹಲ್ಯಾಣಿ ನಿವಾಸಿ ವಿನಯ ಹಾಗೂ ಶ್ರೀಧರ ಭಟ್ ರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧಿಸಿ ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಕುಟುಂಬದ ಆಸ್ತಿ ವಿವಾದ ನಾಲ್ವರ ಕೊಲೆಯಲ್ಲಿ ಅಂತ್ಯವಾಗಿದ್ದು, ಮುಗ್ಧ ಮಕ್ಕಳು ಮಾತ್ರ ಅನಾಥರಾಗಿದ್ದಾರೆ. ಕೊಲೆಗೈದ ಆರೋಪಿಗಳಿಗೆ ನ್ಯಾಯಾಲಯ ಕಠಿಣ ಶಿಕ್ಷೆ ನೀಡಬೇಕೆನ್ನುವುದು ಭಟ್ಕಳ ತಾಲೂಕಿನ ಜನರ ಅಭಿಪ್ರಾಯ.