ಗ್ರಾನೈಟ್‌ ಲಾರಿಗಳಿಂದ ಲಂಚ: 20 ಪೊಲೀಸರ ವಿರುದ್ಧ ಕೇಸ್‌

By Kannadaprabha NewsFirst Published Aug 7, 2022, 6:48 AM IST
Highlights

 ನಗರದಲ್ಲಿ ಗ್ರಾನೈಟ್‌ ಸಾಗಿಸುವ ಲಾರಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಆರೋಪದ ಮೇರೆಗೆ ಸಂಚಾರ ವಿಭಾಗದ ಮೂವರು ಎಸಿಪಿಗಳು ಹಾಗೂ 8 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 20 ಪೊಲೀಸರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು (ಆ.7) : ನಗರದಲ್ಲಿ ಗ್ರಾನೈಟ್‌ ಸಾಗಿಸುವ ಲಾರಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟಆರೋಪದ ಮೇರೆಗೆ ಸಂಚಾರ ವಿಭಾಗದ ಮೂವರು ಎಸಿಪಿಗಳು ಹಾಗೂ 8 ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 20 ಪೊಲೀಸರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್‌ ದಾಖಲಿಸಿದೆ. ಎಸಿಪಿಗಳಾದ ಎಂ.ಎಸ್‌.ಅಶೋಕ್‌ (ಈಶಾನ್ಯ), ಬಿ.ಎಸ್‌.ಶ್ರೀನಿವಾಸ್‌ (ದಕ್ಷಿಣ), ಎಲ್‌.ನಾಗೇಶ್‌ (ಉತ್ತರ), ಇನ್‌ಸ್ಪೆಕ್ಟರ್‌ಗಳಾದ ಚಿಕ್ಕಜಾಲದ ಕೆ.ಜಗದೀಶ್‌, ಹುಳಿಮಾವಿನ ವೆಂಕಟೇಶ್‌, ಬ್ಯಾಟರಾಯನಪುರದ ರೂಪಾ ಹಡಗಲಿ, ಹೆಬ್ಬಾಳದ ಕೆ.ವಸಂತಕುಮಾರ್‌, ಕೆಂಗೇರಿಯ ಎನ್‌.ಮಲ್ಲಿಕಾರ್ಜುನ್‌, ಕುಮಾರಸ್ವಾಮಿ ಲೇಔಟ್‌ನ ಎಚ್‌.ಎಸ್‌.ವೆಂಕಟೇಶ್‌, ರಾಜಾಜಿ ನಗರದ ಎಸ್‌.ಶಿವರತ್ನ, ಮಲ್ಲೇಶ್ವರ ಠಾಣೆಯ ಎಸ್‌.ಗಿರೀಶ್‌ ಕುಮಾರ್‌, ಹೆಡ್‌ ಕಾನ್‌ಸ್ಟೇಬಲ್‌ಗಳಾದ ಬನಶಂಕರಿಯ ನರಸಿಂಹಮೂರ್ತಿ, ಕುಮಾರಸ್ವಾಮಿ ಲೇಔಟ್‌ನ ವೆಂಕಟೇಶ್‌, ಹೆಬ್ಬಾಳದ ಆರ್‌.ವೆಂಕಟೇಶ್‌, ರಾಜಾಜಿ ನಗರದ ಎಸ್‌.ಎನ್‌.ಭೋಜರಾಜು, ಮಲ್ಲೇಶ್ವರದ ಎನ್‌.ನಾಗರಾಜು, ಕೆಂಗೇರಿಯ ಎಂ.ಹನುಮಂತರಾಯಪ್ಪ, ಮಲ್ಲೇಶ್ವರದ ಸುಬ್ರಹ್ಮಣ್ಯಸ್ವಾಮಿ, ಕಾನ್‌ಸ್ಟೆಬಲ್‌ಗಳಾದ ಬ್ಯಾಟರಾಯನಪುರದ ಬಿ.ಸುನೀಲ್‌ ಹಾಗೂ ಮಲ್ಲೇಶ್ವರದ ವಿ.ಚಂದ್ರಕುಮಾರ್‌ ಆರೋಪಿತರಾಗಿದ್ದಾರೆ.

ಪೊಲೀಸರಿಂದ ಇದೆಂತಾ ಕೃತ್ಯ : ಬೇಲಿಯೇ ಎದ್ದು ಹೊಲ ಮೇಯ್ತು!

ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಪೊಲೀಸರು ವಸೂಲಿ ಮಾಡುತ್ತಿರುವುದು ಬಯಲಾಗಿತ್ತು. ಈ ಬಗ್ಗೆ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಆರ್‌.ಕುಲದೀಪ್‌ ಕುಮಾರ್‌ ಜೈನ್‌(DCP R.Kuladeep Kumar Jain) ಅವರು ನೀಡಿದ ವರದಿ ಹಾಗೂ ವಕೀಲ ಕೆ.ಎನ್‌.ಜಗದೀಶ್‌(K.N.Jagadeesh) ಸಲ್ಲಿಸಿದ ದೂರಿನ ಮೇರೆಗೆ ಎಸಿಬಿ ಎಫ್‌ಐಆರ್‌ ದಾಖಲಿಸಿದೆ.

ಏನಿದು ಆರೋಪ?

ಬೆಂಗಳೂರು(Bengaluru) ನಗರ ವ್ಯಾಪ್ತಿಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಪೊಲೀಸ್‌ ಇಲಾಖೆ(Depertment of Police) ನಿರ್ಬಂಧವಿಸಿದೆ. ಆದರೆ ಹೊರ ವರ್ತುಲ ರಸ್ತೆಗಳಲ್ಲಿ ಅವುಗಳ ಓಡಾಟಕ್ಕೆ ಅವಕಾಶವಿದೆ. ಹೀಗಾಗಿ ರಾತ್ರಿ 10ರಿಂದ ಮುಂಜಾನೆ 6ರ ಅವಧಿಯಲ್ಲಿ ಆನೇಕಲ್‌ನಿಂದ ಮಂಗಳೂರು ಕಡೆಗೆ ಗ್ರಾನೈಟ್‌(Granite) ಕಲ್ಲು ಸಾಗಾಣಿಕೆಗೆ ಅಡ್ಡಿಪಡಿಸದಂತೆ ಸಂಚಾರ ವಿಭಾಗದ ಅಧಿಕಾರಿಗಳನ್ನು ಲಾರಿ ಮಾಲಿಕರ ಸೋಗಿನಲ್ಲಿ ಖಾಸಗಿ ಸುದ್ದಿವಾಹಿನಿ ಪ್ರತಿನಿಧಿಗಳು ಸಂಪರ್ಕಿಸಿದ್ದರು. ಆಗ ಲಾರಿಗಳ ಓಡಾಟಕ್ಕೆ ತಲಾ ಟ್ರಿಪ್‌ಗೆ .15 ಸಾವಿರ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಹಣವನ್ನು ಸಹ ಸ್ವೀಕರಿಸಿದ್ದು, ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ರಹಸ್ಯ ಕಾರ್ಯಾಚರಣೆ ಪ್ರಕಟವಾದ ಬಳಿಕ ವಕೀಲ ಜಗದೀಶ್‌ ಅವರು, ಆರೋಪಿತ ಪೊಲೀಸರ ಮೇಲೆ ತನಿಖೆಗೆ ಆಗ್ರಹಿಸಿ ಎಸಿಬಿಗೆ ದೂರು ಸಲ್ಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ರಾಫಿಕ್‌ ಪೊಲೀಸರ ಕಿರುಕುಳಕ್ಕೆ ಬೇಸತ್ತು ಮಾಂಗಲ್ಯ ಮಾರಲು ಮುಂದಾದ ಮಹಿಳೆ

ಸಮಗ್ರ ತನಿಖೆ ಅಗತ್ಯ:

ಲಂಚದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಅವರು, ಪ್ರಕರಣದ ಕುರಿತು ವಿಚಾರಣಾ ನಡೆಸಿ ವರದಿ ಸಲ್ಲಿಸುವಂತೆ ಪಶ್ಚಿಮ ವಿಭಾಗದ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ಅವರಿಗೆ ಸೂಚಿಸಿದ್ದರು. ಆದರೆ ಆ ವೇಳೆ ಎಸಿಬಿಗೆ ವಕೀಲ ಜಗದೀಶ್‌ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮೊಟಕುಗೊಳಿಸಿದ ಡಿಸಿಪಿ ಕುಲದೀಪ್‌ ಕುಮಾರ್‌ ಜೈನ್‌ ಅವರು, ಅಪೂರ್ಣ ವರದಿಯನ್ನೇ ಎಸಿಬಿ ಸಲ್ಲಿಸಿದರು. ಈ ಲಂಚ ಆರೋಪದ ಬಗ್ಗೆ ಸಮಗ್ರ ತನಿಖೆ ಅಗತ್ಯವಿದೆ ಎಂದು ಡಿಸಿಪಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.

ಓರ್ವ ಎತ್ತಂಗಡಿ, ಉಳಿದವರು ಇಲ್ಲ:

ಲಂಚದ ಆರೋಪ ಹೊತ್ತಿದ್ದ ಪೊಲೀಸರ ಪೈಕಿ ಎರಡು ದಿನಗಳ ಹಿಂದಷ್ಟೇ ಮಲ್ಲೇಶ್ವರ ಸಂಚಾರ ಠಾಣೆ ಗಿರೀಶ್‌ ಕುಮಾರ್‌ ವರ್ಗಾವಣೆ ಆಗಿದ್ದು, ಉಳಿದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಎಫ್‌ಐಆರ್‌ ದಾಖಲಾದರೂ ನಗರ ಪೊಲೀಸ್‌ ಆಯುಕ್ತರಾಗಲಿ ಅಥವಾ ಸರ್ಕಾರವಾಗಲಿ ಕ್ರಮ ಜರುಗಿಸಿಲ್ಲ.

click me!