ರಾಮನಗರ ಜಿಲ್ಲೆಯ ಕನಕಪುರದ ತೋಟದ ಮನೆಯೊಂದಲ್ಲಿ ಕೆಲಸಕ್ಕೆ ಬಂದಿದ್ದ ಕುಟುಂಬದ ಮಕ್ಕಳು ನಾಡಬಂದೂಕನ್ನು ಹಿಡಿದು ಆಟವಾಡುವಾಗ ಆಕಸ್ಮಿಕವಾಗಿ ಗುಂಡು ಹಾರಿ ಮಗು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದೆ.
ರಾಮನಗರ (ಡಿ.18): ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತೋಟದ ಮನೆಯೊಂದರಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಕುಟುಂಬದಲ್ಲಿ ಮಕ್ಕಳು ನಾಡಬಂದೂಕು ಹಿಡಿದು ಆಟವಾಡುವಾಗ ಟ್ರಿಗರ್ ಒತ್ತಿ ಬಂದೂಕಿನಿಂದ ಗುಂಡು ಸಿಡಿದು 7 ವರ್ಷದ ಮಗು ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.
ಮಕ್ಕಳು ಆಟವಾಡುವಾಗ ಯಾವ ವಸ್ತುಗಳನ್ನು ಹಿಡಿದುಕೊಂಡು ಆಟವಾಡುತ್ತಾರೆ ಎಂಬುದರ ಮೇಲೆ ಪೋಷಕರು ಸದಾ ಗಮನಹರಿಸಬೇಕು. ಇಲ್ಲದಿದ್ದರೆ ಅಪಾಯಕಾರಿ ವಸ್ತುಗಳನ್ನು ಬಳಸಿ ಆಟವಾಡುವಾಗ ಪ್ರಾಣ ಹೋಗಿರುವ ಹಲವು ಘಟನೆಗಳನ್ನು ನಾವು ನೋಡಿದ್ದೇವೆ. ಇನ್ನು ರಾಮನಗರ ಜಿಲ್ಲೆಯ ಕನಪುರ ತಾಲೂಕಿನ ಕಾಡಶಿವನಹಳ್ಳಿ ಗ್ರಾಮದಲ್ಲಿ ನಡೆದಿರುವ ಇದೇ ರೀತಿಯ ದುರಂತ ಘಟನೆಯಲ್ಲಿ ಬಾಲಕ ಶಮಾ (7) ಮೃತಪಟ್ಟಿದ್ದಾನೆ. ಇನ್ನು ಬಾಲಕನ ಸಹೋದರ ಸಾಜೀದ್ (16) ಎಂಬಾತ ಬಂದೂಕು ತೆಗೆದುಕೊಂಡು ಆಟವಾಡುವಾಗ ಬಂದೂಕಿನ ಟ್ರಿಗರ್ ಒತ್ತಿದ್ದಾನೆ. ಕೂಡಲೇ ಗುಂಡು ಸಿಡಿದು ಬಾಲಕ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ
3 ದಿನದ ಹಿಂದಷ್ಟೇ ಕೂಲಿಗೆ ಬಂದ ಕುಟುಂಬ: ಕಳೆದ ಮೂರು ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಮೂಲದ ಕುಟುಂಬವೊಂದು ಮಲ್ಲೇಶ್ ಎಂಬುವವರ ತೋಟದಲ್ಲಿ ಕೆಲಸ ಮಾಡಲು ಬಂದಿತ್ತು. ಅಮಿನುಲ್ಲಾ ಮತ್ತು ಸಮ್‌ಸೂನ್ ಎಂಬ ದಂಪತಿ ಮಕ್ಕಳೊಂದಿಗೆ ತೋಟದ ಕೂಲಿ ಕೆಲಸ ಮಾಡಿಕೊಂಡಿದ್ದರು. ತೋಟದಲ್ಲಿ ಕೆಲಸ ಮಾಡುವ ವೇಳೆ ಮಕ್ಕಳು ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾರೆ. ಪೋಷಕರು ಕೂಡ ಇದನ್ನು ಗಮನಿಸಿಯೂ ಇಲ್ಲ. ಆಟವಾಡುತ್ತಿರುವಾಗ ನಾಡ ಬಂದೂಕಿನ ಟ್ರಿಗರ್ ಒತ್ತಿದ ಕೂಡಲೇ ಗುಂಡು ಮಗುವಿನ ದೇಹವನ್ನು ಹೊಕ್ಕಿದೆ. ಗುಂಡು ತಗುಲಿದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಸುರಕ್ಷತಾ ನಿಯಮ ಪಾಲಿಸದ ಮಾಲೀಕ: ತೋಟದ ಮಾಲೀಕ ಮಲ್ಲೇಶ್ ಬಂಧನ: ಇನ್ನು ಬಂದೂಕು ಹೊಂದುವ ಪರವಾನಗಿಯನ್ನು ಪಡೆದುಕೊಂಡಿದ್ದ ಮಲ್ಲೇಶ್ ಅವರು ತೋಟದ ಮನೆಯಲ್ಲಿ ಬಂದೂಕು ಇಟ್ಟುಕೊಂಡಿದ್ದರು. ಆದರೆ, ಈ ಬಂದೂಕನ್ನು ಸುರಕ್ಷತಾ ನಿಯಮ ಪಾಲಿಸದೇ ಮನೆಯಲ್ಲಿ ಬಂದೂಕು ಇಟ್ಟಿದ್ದರು. ಹೀಗಾಗಿಯೇ ಮಕ್ಕಳು ಬಂದೂಕನ್ನು ತೆಗೆದುಕೊಂಡು ಆಟವಾಡುವಾಗ ಗುಂಡು ಹಾರಿದೆ. ಸುರಕ್ಷತಾ ನಿಯಮ ಪಾಲಿಸದ ಬಂದೂಕನ್ನು ಇಟ್ಟಿದ್ದ ತೋಟದ ಮಾಲೀಕ ಮಲ್ಲೇಶ್ ಹಾಗೂ ಗುಂಡು ಹಾರಿಸಿದ ಬಾಲಕ ಸಾದಿಕ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಪ್ರೀತಿಸಿದಾಕೆಗೆ ಮದುವೆ : ಗುಂಡು ಹಾರಿಸಿಕೊಂಡು ಸಾವಿಗೆ ಶರಣಾದ 17ರ ತರುಣ
ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ: ಇನ್ನು ಕೇವಲ ಮೂರು ದಿನಗಳ ಹಿಂದಷ್ಟೇ ಹೊಟ್ಟೆ ಪಾಡಿಗಾಗಿ ದುಡಿಯಲು ತೋಟಕ್ಕೆ ಆಗಮಿಸಿದ್ದ ಉತ್ತರ ಪ್ರದೇಶದ ಬಡಕುಟುಂಬದ ಪೋಷಕರು ಮಗುವನ್ನು ಕಳೆದುಕೊಂಡು ಗೋಳಾಡುತ್ತಿದೆ. ಇನ್ನು ಮತ್ತೊಬ್ಬ ಹಿರಿಯ ಮಗ ಸಾಧಿಕ್ ಕೂಡ ಗುಂಡು ಹಾರಿಸಿದ ಕಾರಣಕ್ಕಾಗಿ ಅವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಗುವನ್ನು ಕಳೆದುಕೊಂಡು ದುಃಖ ಪಡಬೇಕೋ, ಇನ್ನೊಬ್ಬ ಮಗನು ಪೊಲೀಸ್ ಠಾಣೆ ಸೇರಿದ್ದು ಹೇಗೆ ಬಿಡಿಸಿಕೊಳ್ಳಬೇಕು ಎಂದು ಗೊತ್ತಾಗದೇ ಪರದಾಡುತ್ತಿದ್ದಾರೆ.