ಕಲಬುರಗಿ: ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

By Kannadaprabha News  |  First Published Jan 6, 2023, 10:00 PM IST

ಪೊಲೀಸರಿಗೆ ವಿಷಯ ತಿಳಿಸಿದ್ರೆ ಬಾಲಕನನ್ನೇ ಕೊಂದು ಹಾಕುವ ಬೆದರಿಕೆ, ಧೈರ್ಯ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಪೋಷಕರು. 


ಕಲಬುರಗಿ(ಜ.06):  ಶಾಲೆಗೆ ಹೊರಟಿದ್ದ ಬಾಲಕನನ್ನು ಮನೆ ಎದುರಿನಿಂದಲೇ ಕಿಡ್ನಾಪ್‌ ಮಾಡಿದ ಪ್ರಕರಣ ಸುಖಾಂತ್ಯ ಕಂಡಿರುವ ಪ್ರಸಂಗ ಬುಧವಾರ ಕಲಬುರಗಿ ನಗರದಲ್ಲಿ ನಡೆದಿದೆ. ಸಿದ್ದೇಶ್ವರ ನಗರ ಕಾಲೋನಿಯಲ್ಲಿ ಸಂಭವಿಸಿರುವ ಕಿಡ್ನಾಪ್‌ ಪ್ರಕರಣದಲ್ಲಿ ಬಾಲಕನ ಪೋಷಕರು ವಿಷಯ ತಿಳಿಸುತ್ತಿದ್ದಂತೆಯೇ ಪೊಲೀಸರು ಕ್ರಿಯಾಶೀಲರಾಗಿ ಅಪಹರಣಗೊಂಡಿದ್ದ ಬಾಲಕ ಕೆಲವೇ ಗಂಟೆಗಳಲ್ಲಿ ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರುವಂತೆ ಮಾಡಿದ್ದಾರೆ.

ಇಲ್ಲಿನ ಸಿದ್ದೇಶ್ವರ ಕಾಲೋನಿ ನಿವಾಸಿ ಶಿಕ್ಷಕ ಗುರುನಾಥ ರಾಠೋಡ ಇವರ 10 ವರ್ಷದ ಮಗ ಸುದರ್ಶನ್‌ ಶಾಲೆಗೆ ಹೋಗಲು ಬಸ್ಸಿಗಾಗಿ ಕಾಯುತ್ತ ಬೆಳಗಿನ 9 ಗಂಟೆ ಹೊತ್ತಿಗೆ ಮನೆ ಮುಂದಿನ ರಸ್ತೆಯಲ್ಲಿ ಗೇಟಿಗೇ ನಿಂತಿದ್ದಾನೆ. ಆಟೋದಲ್ಲಿ ಬಂದ ದುಷ್ಕರ್ಮಿಗಳು ಆಸ್ಪತ್ರೆ ವಿಳಾಸ ಕೇಳುವ ನೆಪದಲ್ಲಿ ಬಾಲಕನನ್ನು ಅಪಹರಿಸಿ ಯಾರೂ ಇಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕನ ತಂದೆಗೆ ಕರೆ ಮಾಡಿ 10 ಲಕ್ಷ ರುಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

Latest Videos

undefined

Crime News : ಇದು ಕಿಡ್ನಾಪ್ & ಮರ್ಡರ್ ಕಹಾನಿ: 9 ತಿಂಗಳ ಬಳಿಕ ಬಯಲಾಯ್ತು ರಹಸ್ಯ

ಬಾಲಕನ ಕೊಲ್ಲುವುದಾಗಿ ಬೆದರಿಕೆ:

ಹಣದೊಂದಿಗೆ ತೆಪ್ಪಗೆ ಹೇಳಿದೆ ಸ್ಥಳಕ್ಕೆ ಬಂದರೆ ಓಕೆ, ಇಲ್ದಿದ್ರೆ ಪೊಲೀಸರಿಗೆ ಹೇಳಿ ವಿಷಯ ದೊಡ್ಡು ಮಾಡಿದರೆ ಬಾಲಕನ ಕೊಲ್ಲೋದಾಗಿಯೂ ಅಪಹರಣಕಾರರು ಗುರುನಾಥರಿಗೆ ಕರೆ ಮಾಡಿ ಬೆದರಿಸಿದ್ದರು. ಈ ಸಂಗತಿ ಅರಿತಿದ್ದ ಪೊಲೀಸರು ಎಲ್ಲರು ಸಿವಿಲ್‌ ದಿರಿಸಿನಲ್ಲಿ ಬಂದವರೇ ಗುರುನಾಥರನ್ನು ಮುಂದಿಟ್ಟುಕೊಂಡು ತಾವು ಅಪಹರಣಕಾರರ ಕರೆಗಾಗಿ ಕಾಯುತ್ತಿದ್ದರು.

ಬಾಲಕನ ತಂದೆ ಜೊತೆಗೇ ಸಂಪರ್ಕದಲ್ಲಿದ್ದ ಅಪಹರಣಕಾರರು ಹಣದ ಒತೆಗೇ ಬುದ್ಧ ವಿಹಾರ ಗೇಟ್‌ಗೆ ಬರುವಂತೆ ಸೂಚಿಸಿದ್ದರು, ಮರುಕ್ಷಣವೇ ಮತ್ತೆ ಕರೆಮಾಡಿ ಗೀತಾ ನಗರ ಬ್ರಹ್ಮಕುಮಾರಿ ಆಶ್ರಮ ಗೇಟ್‌ಗೆ ಬರುವಂತೆ ಸೂಚಿಸಿದ್ದರು. ಗುರುನಾಥ ಅಲ್ಲಿಗೆ ಹೋಗುತ್ತಿದದಂತೆಯೇ ನಿನ್ನ ಜೊತೆ ಯಾರೋ ಇದ್ದಂತಿದೆ, ನಮಗೆ ಸಂಶಯ ಬರುತ್ತಿದೆ. ಇನ್ನೂ ಮುಂಎ ಮಾಡಿಯಾಳ ತಾಂಡಾ ಕ್ರಾಸ್‌ ಬಳಿ ಬಾ ಎಂದು ಸೂಚಿಸಿದ್ದಾರೆ. ಈ ಹಂತದಲ್ಲಿ ಗುರುನಾಥರೊಬ್ಬರನ್ನೇ ಬಿಟ್ಟು ಪೊಲೀಸರು ತಾವು ಅವರ ಹಿಂದೆ ಯಾರಿಗೂ ಶಂಕೆ ಬಾರದಂತೆ ಬೆನ್ನಟ್ಟಿದ್ದಾರೆ.

ಆದರೆ ಅಪಹರಣಕಾರರಿಗೆ ಪೊಲೀಸರು ತಮ್ಮನ್ನು ಬೆನ್ನಟ್ಟಿದ್ದಾರೆಂಬ ಶಂಕೆ ಬಲವಾಗಿದೆ. ಈ ಹಂತದಲ್ಲಿ ಅಪಹರಣಕಾರರು ಪಾಳಾ ಗ್ರಾಮದ ಹೊರ ವಲಯದಲ್ಲಿ ತಾವು ಅಪಹರಿಸಿ ತಂದಿದ್ದ ಬಾಲಕನನ್ನು ಅಲ್ಲೇ ಬಿಟ್ಟು ಮಾಯವಾಗಿದ್ದಾರೆ. ಇತ್ತ ಬಾಲಕ ಶಾಲೆಯ ದಿರಿಸಿನಲ್ಲಿಯೇ ಹೊಲಗದ್ದೆ ಅಲೆಯೋದನ್ನ ಊರವರು, ದಾರಿಹೋಕರು ನೋಡಿ ವಿಚಾರಿಸಿದ್ದಾರೆ. ತಕ್ಷಣ ಬಾಲಕನನ್ನು ವಿಚಾರಿಸುತ್ತ ಅವರ ತಂದೆಯ ಫೋನ್‌ ನಂಬರ್‌ ಪಡೆದು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೆ ಪಾಳಾ ಗ್ರಾಮದ ಹೊರವಲಯದಲ್ಲಿ ಬಾಲಕನಿದ್ದಲ್ಲಿಗೆ ದಾವಿಸಿದ ಪೊಲೀಸ್‌ ತಂಡ ಆತನನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ತಲುಪುವಂತೆ ಮಾಡಿದೆ.

ಕಿಡ್ನಾಪ್‌ನಲ್ಲಿ ವಯೋವೃದ್ಧನ ಮೊಬೈಲ್‌ ನಂಬರ್‌ ಬಳಕೆ:

ಇಡೀ ಪ್ರಕರಣದಲ್ಲಿ ಅಪಹರಣಕಾರರು ವಯೋವೃದ್ಧರೊಬ್ಬರಿಗೆ ಸೇರಿರುವ ಮೋಬೈಲ್‌ ನಂಬರ್‌ ಬಳಸಿರೋದು ಬೆಳಕಿಗೆ ಬಂದಿದೆ. ಈ ನಂಬರ್‌ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು ಇದು ನಿಜವಾಗಿಯೂ ವೃದ್ಧರೊಬ್ಬರಿಗೆ ಸೇರಿರೋ ನಂಬರ್‌ ಆಗಿದೆ. ಈ ವಯೋವೃದ್ಧ ಈಚೆಗೆ ಒಂದು ನಂಬರ್‌ಗೆ ಕರೆ ಮಾಡಿ ಕೊಡುವಂತೆ ದಾರಿಹೋಕರನ್ನು ಕೇಳಿದ್ದಾಗ ಅವರೇ ಕರೆ ಮಾಡುತ್ತಲೇ ಆ ವೃದ್ಧನ ಮೋಬೈಲ್‌ ಸಿಮ್‌ ದೋಚಿದ್ದಾರೆಂಬ ಶಂಕೆ ಬಲಗೊಂಡಿದೆ. ಮೊಬೈಲ್‌ ನಂಬರ್‌ ಯಾರು ಬಳಸುತ್ತಿದ್ದಾರೆಂಬ ಮಾಹಿತಿ ಬೆನ್ನು ಬಿದ್ದಿದ್ದಾರೆ. ಸದ್ಯ ಅಪಹರಣಗೊಂಡಿದ್ದ ಬಾಲಕ ಕ್ಷೇಮವಾಗಿ ಮನೆ ಸೇರಿದ್ದಾನೆ.

Kalaburagi: ಸಿನಿಮಾ ಶೈಲಿಯಲ್ಲಿ ಶಾಲಾ ಬಾಲಕನ ಅಪಹರಣ: ಸಿಂಗಂ ಸ್ಟೈಲ್​​ನಲ್ಲಿ ಪೊಲೀಸರ ಕಾರ್ಯಾಚರಣೆ

ಗುರುನಾಥ ಕುಟುಂಬದ ಮಾಹಿತಿ ಇರೋರಿಂದಲೇ ಕಿಡ್ನಾಪ್‌:

ಸದರಿ ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಪೊಲೀಸರು ಶಿಕ್ಷಕ ಗುರುನಾಥನ ಕುಟುಂಬದ ಸಂಪೂರ್ಣ ಮಾಹಿತಿ ಇರೋರೇ ಈ ಕುಕೃತ್ಯ ಎಸಗಿರುವ ಬಲವಾದ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಗುರುನಾಥ ಏಹಳುವಂತೆ ಅಪಹರಣಕಾರರು ಹಣಕಾಸಿನ ಬೇಡಿಕೆ ಇಟ್ಟಾಗ ನೀವು ತುಂಬ ಸಿರಿವಂತರು ಎಂಬುದು ಗೊತ್ತಿಗೆ ಎಂದು ಮಾತು ಬಳಸಿರೋದು ಗೊತ್ತಾಗಿದೆ. ಹೀಗಾಗಿ ಈ ಕುಟುಂಬದ ಮಾಹಿತಿ ಇರೋರೇ ಈ ಕೆಲಸಕ್ಕೆ ಇಳಿದಿರುವ ಶಂಕೆ ಪೊಲೀಸರು ಹೊರಹಾಕಿದ್ದು ಇದೇ ದೃಷ್ಟಿಕೋನದಲ್ಲಿ ತನಿಖೆ ಮುಂದುವರಿಸಿದ್ದಾರೆ. ತಮ್ಮ ಮಗ ಸುರಕ್ಷಿತವಾಗಿ ಮನೆಗೆ ಮರಳಿರುವ ಬಗ್ಗೆ ಶಿಕ್ಷಕ ಗುರುನಾಥ ರಾಠೋಡ ಸಂತಸದಲ್ಲಿದ್ದಾರೆ. ವಿವಿ ಠಾಣೆ ಸಿಪಿಐ ಅರುಣ್‌, ಕಲಬುರಗಿ ಪೊಲೀಸರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬಾಲಕನ ಅಪಹರಣ ಸುಖಾಂತ್ಯ ಕಾಣುವಲ್ಲಿ ನಮ್ಮ ಪೊಲೀಸ್‌ ಅಧಿಕಾರಿಗಳ ಪಾತ್ರ ತುಂಬ ಇದೆ. ಆರೋಪಿಗಳು ಯಾರು ಎಂಬುದು ಗೊತ್ತಾಗಿದೆ. ಅವರು ಬಳಸಿರೋ ಮೊಬೈಲ್‌ನಿಂದ ನಾವು ಅವರನ್ನು ಪತ್ತೆ ಹಚ್ಚಿದ್ದೇವೆ. ವಿಚಾರಣೆ ಸಾಗಿರೋದರಿಂದ ಈಗಲೇ ಯಾವುದೇ ವಿಷಯ ಹೇಳಲಾಗದು. ಯಾರೇ ಆಗಲಿ ಇಂತಹ ದುಷ್ಕೃತ್ಯಗಳಿಗೆ ಮುಂದಾದಲ್ಲಿ ನಾವು ಸುಮ್ಮನಿರೋದಿಲ್ಲ ಎಂಬ ಸಂದೇಶ ಸದರಿ ಪ್ರಕರಣದಿಂದ ರವಾನೆಯಾಗಿದೆ ಅಂತ ಕಲಬುರಗಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ. 

click me!