ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟ ಗ್ರಾಮದ ಪಲ್ಲೇರಿ ಎಂಬಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.
ಕೊಡಗು/ ಚಿಕ್ಕಮಗಳೂರು: (ಫೆ.12): ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟ ಗ್ರಾಮದ ಪಲ್ಲೇರಿ ಎಂಬಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ. ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಹಸುವೊಂದನ್ನು ಬೇರೊಂದು ಹುಲಿ ಕೊಂದು ತಿಂದು ಹಾಕಿದೆ.
ಕುಟ್ಟ ಬಳಿ ಹುಲಿ ದಾಳಿಗೆ 12 ವರ್ಷದ ಬಾಲಕ ಬಲಿಯಾಗಿದ್ದಾನೆ. ಕುಟ್ಟ ಗ್ರಾಮದ ಪಾಲ್ಲೇರಿ ಎಂಬಲ್ಲಿ ಹುಲಿ ದಾಳಿಗೆ ಬಾಲಕ ಚೇತನ್ (12) ಎಂದು ಗುರುತಿಸಲಾಗಿದೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಂದಿದ್ದ ಪಂಚವಳ್ಳಿ ಮೂಲದ ಕಾರ್ಮಿಕ ಹುಡುಗ ಆಗಿದ್ದಾನೆ. ಇವನು ತೋಟದ ಒಳಗೆ ಆಟ ಆಡುತ್ತಿದ್ದ ವೇಳೆ ಬಾಲಕನ ಮೇಲೆ ಹುಲಿ ದಾಳಿ ಮಾಡಿದೆ.
undefined
ಹುಲಿ ದಾಳಿಗೆ ಮತ್ತೊಬ್ಬ ಯುವಕ ಬಲಿ: ಸೌದೆ ತರಲು ಹೋದವ ಮಸಣ ಸೇರಿದ
ಸಂಜೆ ಸುಮಾರು 4 ಗಂಟೆಗೆ ಹುಲಿ ದಾಳಿ: ತೋಟದಲ್ಲಿ ಸಂಜೆ ಸುಮಾರು 4 ಗಂಟೆಗೆ ಹುಲಿ ದಾಳಿ ಮಾಡಿ ಬಾಲಕನ ಜೀವ ತೆಗೆದಿರುವ ಘಟನೆ ನಡೆದಿದೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಹುಲಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಹುಲಿ ಅಲ್ಲಿಂದ ಪರಾರಿಯಾಗಿದೆ. ಇನ್ನು ಬಾಲಕನ ಮೃತದೇಹವನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕನ್ನು ಕಳೆದುಕೊಂಡ ಕಾರ್ಮಿಕ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಹುಲಿ ದಾಳಿಯ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದು, ಒಬ್ಬಂಟಿಯಾಗಿ ಯಾರೊಬ್ಬರೂ ಸಂಚಾರ ಮಾಡದಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಹುಲಿಯನ್ನು ಸೆರೆ ಹಿಡಿಯಲು ಬೋನು ಅಳವಡಿಕೆ ಮಾಡಿದ್ದಾರೆ.
ಹೆಚ್ಚಾಗುತ್ತಿವೆ ಕಾಡು ಪ್ರಾಣಿಗಳ ದಾಳಿ: ಕಾಡಿನ ವಿನಾಶ ಹೆಚ್ಚಾಗುತ್ತಿದ್ದಂತೆ ಕಾಡು ಪ್ರಾಣಿಗಳು ನಾಡಿನತ್ತ ಧಾವಿಸುತ್ತಿವೆ. ಇನ್ನು ಜನವಸತಿ ಪ್ರದೇಶಗಳಿಗೆ ಬಂದು ಜನರ ಮೇಲೆಯೇ ದಾಳಿ ಮಾಡುತ್ತಿವೆ. ಆದರೆ, ಯಾರೋ ಕಾಡು ಕಡಿದ ತಪ್ಪಿಗೆ ಇನ್ಯಾರೋ ಕಾಡು ಪ್ರಾಣಿಗಳಿಗೆ ಬಲಿ ಆಗುತ್ತಿರುವುದು ಮಾತ್ರ ಶೋಚನೀಯವಾಗಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಬರೋಬ್ಬರಿ 20ಕ್ಕೂ ಅಧಿಕ ಜನರು ಕಾಡುಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಈ ಅಂಕಿ- ಅಂಶಗಳು ಕಾಡಿನ ಅಂಚಿನಲ್ಲಿ ವಾಸ ಮಾಡುವ ಜನರಿಗೆ ಆತಂಕ ಹುಟ್ಟಿಸುವಂತಿವೆ.
ಬಣಕಲ್ ನಲ್ಲಿ ಹುಲಿದಾಳಿಗೆ ಸಿಂಧಿ ಹಸು ಬಲಿ:
ಚಿಕ್ಕಮಗಳೂರು (ಫೆ.12): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಮತ್ತೀಕಟ್ಟೆ ಗ್ರಾಮದಲ್ಲಿ ಹುಲಿ ದಾಳಿಗೆ ಸಿಂಧಿ ಹಸುವೊಂದು ಬಲಿಯಾಗಿದೆ.ಮತ್ತೀಕಟ್ಟೇ ಬ್ಲೂ ಮೌಂಟೇನ್ ಎಸ್ಟೇಟ್ ಆನಂದ್ ಮಿಸ್ಕಿತ್ ಎಂಬುವವರಿಗೆ ಸೇರಿದ ಕಾಫಿ ಎಸ್ಟೇಟ್ ನಲ್ಲಿ ಹುಲಿ ಹಸುವಿನ ಮೇಲೆ ದಾಳಿ ಮಾಡಿ ಕೊಂದು ತಿಂದಿದೆ. ಇದೇ ಗ್ರಾಮದ ಮಧುಸೂದನ್ ಚಂದ್ರಾವತಿಎನ್ನುವವರಿಗೆ ಸೇರಿದ ಸಿಂಧಿ ಹಸು ಎಂದು ತಿಳಿದುಬಂದಿದೆ.ಹಸು ಬಲಿಯಾಗಿರುವ ಸ್ಥಳಕ್ಕೆ ಉಪವಲಯ ಅಧಿಕಾರಿ ಉಮೇಶ್ ಮತ್ತು ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Kodagu: ಕಾಡು ದಾಟಿ ರಸ್ತೆಗೆ ಬರುವುದನ್ನು ಪತ್ತೆಹಚ್ಚಲು ರೆಡಿಯಾಯ್ತು ಆನೆ ಕ್ರಾಸಿಂಗ್ ಸಿಗ್ನಲ್
ಜೀವನಕ್ಕೆ ಆಸರೆಯಾಗಿದ್ದ ಹಸು ಸಾವು: ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ಕುಟುಂಬ ಈಗ ಬೆಲೆಬಾಳುವ ಸಿಂಧಿ ಹಸುವನ್ನು ಕಳೆದುಕೊಂಡುಯ ಆರ್ಥಿಕ ಸಂಕಷ್ಟಕ್ಕೆ ಒಳಾಗಿದ್ದಾರೆ. ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದ ಬಡಕುಟುಂಬಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರೀತಿಯಿಂದ ಸಾಕಿದ್ದ ಹಸುವನ್ನು ಹುಲಿ ಬಗೆದು ತಿಂದಿರುವ ಭಯಾನಕ ದೃಶ್ಯಕಂಡು ಹಸುವಿನ ಮಾಲೀಕರು ಕಣ್ಣೀರು ಸುರಿಸಿದ್ದಾರೆ.
ನಿರಂತರವಾಗಿ ಗೋವುಗಳ ಬೇಟೆ: ಬಣಕಲ್ ಹೋಬಳಿ ಹೆಗ್ಗುಡ್ಲು, ಮತ್ತೀಕಟ್ಟೆ, ಬಿ.ಹೊಸಳ್ಳಿ, ಬೆಳಗೋಡು, ತಳವಾರ, ಭಾರತೀಬೈಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಲಿಗಳ ದಾಳಿಗೆ ಹತ್ತಾರು ಜಾನುವಾರುಗಳು ಬಲಿಯಾಗಿವೆ. ಇತ್ತೀಚೆಗೆ ಕನ್ನಗೆರೆ ಸಮೀಪ ಒಂದೇ ದಿನ ಮೂರು ಹಸುಗಳು ಹುಲಿದಾಳಿಗೆ ಬಲಿಯಾಗಿದ್ದವು. ಈ ಬಗ್ಗೆ ಸಾರ್ವಜನಿಕರು ಪ್ರತಿಭಟನೆಯನ್ನು ಸಹ ಮಾಡಿದ್ದಾರೆ. ನಿರಂತರವಾಗಿ ಗೋವುಗಳನ್ನು ಹಿಡಿದು ತಿನ್ನುತ್ತಿರುವ ಹುಲಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಸ್ಥಳೀಯ ರೈತರು ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.