
ಬೆಂಗಳೂರು (ಆ.12): ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೇತನ್ (25) ಆತ್ಮಹತ್ಯೆ ಮಾಡಿಕೊಂಡ ಯುವ ಅಧ್ಯಕ್ಷ. ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾಗಿದ್ದಾರೆ. ಲಗ್ಗೆರೆ ಸಮೀಪದ ಮಾರುತಿ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಚೇತನ್ ಗುರುವಾರ ಸಂಜೆ 7ರ ಸುಮಾರಿಗೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬದವರು ಮನೆಯಲ್ಲಿದ್ದಾಗಲೇ ತಮ್ಮ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ: ಹಲವು ವರ್ಷಗಳಿಂದ ಪತ್ನಿಯ ಮೇಲೆ ಸಂಶಯಗೊಂಡ ಪತಿಯೊಬ್ಬ ಮಂಗಳವಾರ ರಾತ್ರಿ ಒಂಟಿ ನಳಿಕೆ ಕೋವಿಯಿಂದ ಹತ್ಯೆ ಮಾಡಿರುವ ಭೀಕರ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ. ಚೆಟ್ಟಳ್ಳಿಯ ಬಟ್ಟೀರ ಗೋಪಾಲ ಅಲಿಯಾಸ್ ಕಿಶನ್(53) ಪತ್ನಿಯನ್ನು ಕೊಂದ ಆರೋಪಿ. ಪತ್ನಿ ಶಶ್ಮಾ (34) ಮೃತರು. ಗಂಡ ಹೆಂಡತಿ ಜಗಳವಾಡುತ್ತಿದ್ದ ವೇಳೆ ಕೋಪೋದ್ರಿಕ್ತನಾದ ಗೋಪಾಲ ಅಲಿಯಾಸ್ ಕಿಶನ್ ಒಂಟಿನಳಿಕೆ ಕೋವಿಯಿಂದ ಶಶ್ಮಾ ಅವರ ಎದೆಯ ಭಾಗಕ್ಕೆ ಗುಂಡಿಕ್ಕಿ ಕೊಂದಿದ್ದಾನೆ.
Davanagere ದೊಡ್ಡ ಖೋಟಾ ನೋಟು ಜಾಲವನ್ನು ಭೇದಿಸಿದ ಪೊಲೀಸ್ರು
ಬಳಿಕ ಶಶ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿದ ಗೋಪಾಲ, ಬೆಂಗಳೂರಿನಲ್ಲಿರುವ ತನ್ನ ಮಗ ನಿಧಿ ಹಾಗೂ ಪತ್ನಿಯ ತಂಗಿ ಶುಭಾ ಹಾಗೂ ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ. ಶಶ್ಮಾ ಸಾವಿನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ. ನಂತರ ಮೇಲಧಿಕಾರಿಗಳ ಆದೇಶದ ಮೇರೆಗೆ ಎಎಸ್‌ಐ ಪಿ.ಟಿ. ಶ್ರೀನಿವಾಸ್ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿ ಗೋಪಾಲ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಸಹೋದರರ ಮಧ್ಯೆ ಜಗಳ: ಕುಟುಂಬದ ನಾಲ್ವರನ್ನು ಕೊಂದ ಪತಿ-ಪತ್ನಿ
ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯುವಕ ಯತ್ನ: ಯುವಕನೊಬ್ಬ ತೆಲುಗು ಅರುಂಧತಿ ಸಿನಿಮಾ ನೋಡಿ, ಮುಕ್ತಿ ಪಡೆಯಬೇಕೆಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧುಗಿರಿ ತಾಲೂಕಿನ ಗಿಡ್ಡಯ್ಯನಪಾಳ್ಯದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ತುಮಕೂರು ನಗರದಲ್ಲಿ ಪಿಯುಸಿ ಓದುತ್ತಿರುವ ರೇಣುಕಾ(22) ಎಂಬ ಯುವಕ, ಬುಧವಾರ ರಾತ್ರಿ ಅರುಂಧತಿ ಸಿನಿಮಾ ನೋಡಿ ಪ್ರಭಾವಿತನಾಗಿ ತಾನು ಮುಕ್ತಿ ಹೊಂದಬೇಕೆಂದು ಗಿಡ್ಡಯ್ಯನ ಪಾಳ್ಯದಲ್ಲಿನ ತಮ್ಮ ರೇಷ್ಮೆ ತೋಟದಲ್ಲಿ ಮೈಮೇಲೆ ಪೆಟ್ರೋಲ್ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಹಚ್ಚಿಕೊಂಡಿದ್ದನ್ನು ಗಮನಿಸಿದ ಪೋಷಕರು ಬೆಂಕಿ ನಂದಿಸಿ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲೇ ಸುಟ್ಟಗಾಯಗಳಾಗಿದ್ದು ಸಾವು ಬದುಕಿನ ನಡುವೆ ನರಳಾಡುತ್ತಿದ್ದಾನೆ. ಬಳಿಕ ಆತನಿಗೆ ಪೋಷಕರು ಮಧುಗಿರಿ ಮತ್ತು ತುಮಕೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪೆತ್ರೆಗೆ ಸೇರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ