ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ. ಕಳೆದ ಬಾರಿ ಕರೆ ಮಾಡಿ ಜೀವ ಬೆದರಿಕೆ ಹಾಕಲಾಗಿತ್ತು. ಇದೀಗ ಪತ್ರದ ಮೂಲಕ ಬೆದರಿಕೆ ಹಾಕಿದ್ದಾರೆ.
ಶಿವಮೊಗ್ಗ, (ಆಗಸ್ಟ್.24): ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮತ್ತೆ ಜೀವ ಬೆದರಿಕೆ ಬಂದಿದೆ. ಪತ್ರದ ಮೂಲಕ ಬೆದರಿಕೆ ಹಾಕಿದ್ದು, ಈ ಬಗ್ಗೆ ಈಶ್ವರಪ್ಪ ಅವರು ದೂರು ನೀಡಿದ್ದಾರೆ.
ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ನಿವಾಸಕ್ಕೆ ಇಂದು(ಆ.24) ಬೆದರಿಕೆ ಪತ್ರ ಬಂದಿದ್ದು,
ನಾಲಿಗೆ ಕಟ್ ಮಾಡುತ್ತೇನೆ.. ಹುಷಾರ್...ಬಾಲ ಬಿಚ್ಚ ಬೇಡ .. ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಇನ್ನು ಈ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ತಮ್ಮ ಅಪ್ತ ಸಹಾಯಕನ ಮೂಲಕ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗೆ(SP) ದೂರು ನೀಡಿದ್ದು, ತನಿಖೆ ಕೈಗೊಳ್ಳುವಂತೆ ಹೇಳಿದ್ದಾರೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪಗೆ ಮತ್ತೆ ಸಂಕಷ್ಟ
ಮುಸ್ಲಿಂ ಗೂಂಡಾಗಳೇ ಎಂದು ಹೇಳಿಕೆ ನೀಡಿದ್ದಕ್ಕೆ ಬೆದರಿಕೆ ಬಂದ ಪತ್ರದಲ್ಲಿ ಉಲ್ಲೇಖವಾಗಿದ್ದು, ಹಾವೇರಿ ಜಿಲ್ಲೆಯ ಮೂಟೆ ಬೆನ್ನೂರು ನಲ್ಲಿ ತಮ್ಮ ಒಡೆತನದ ಕಾಲೇಜು ಕಟ್ಟಡಕ್ಕೆ ಮುಸ್ಲಿಮರ ಸಿಮೆಂಟ್, ಇಟ್ಟಿಗೆ ಪಡೆದಿಲ್ಲವೇ ಎಂದು ಪ್ರಸ್ತಾಪ ಮಾಡಲಾಗಿದೆ.
ಬೆದರಿಕೆ ಪತ್ರದ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ
ಬೆದರಿಕೆ ಪತ್ರದ ಕುರಿತು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಟಿಪ್ಪು ಸುಲ್ತಾನ್ ಗೆ ಗೂಂಡಾ ಎಂದು ಕರೆದಿದ್ದೇನೆ ನಾಲಿಗೆ ಕಟ್ ಮಾಡುವ ಬೆದರಿಕೆ ಹಾಕಿದ್ದಾರೆ. ಹೇಡಿ ಬರೆದ ಪತ್ರದ ಬಗ್ಗೆ ತನಿಖೆ ನಡೆಸಲು ಶಿವಮೊಗ್ಗ ಎಸ್ಪಿ ಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಯಾರು ಗೂಂಡಾಗಿರಿ , ಕೊಲೆ, ದರೋಡೆ ಮಾಡುವ ಮುಸ್ಲಿಮರಿಗೆ ಗೂಂಡಾ ಎಂದು ಕರೆದೇ ಕರೆಯುತ್ತೇನೆ. ಎಲ್ಲಾ ಮುಸ್ಲಿಮರನ್ನು ಗೂಂಡಾ ಎಂದು ಕರೆಯೊಲ್ಲ. ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂಬಂತೆ ಗೂಂಡಾಗಿರಿ ಮಾಡಿದ ಹೇಡಿ ಪತ್ರ ಬರೆದಿದ್ದಾನೆ. ಶಿವಮೊಗ್ಗದ ಹರ್ಷ, ಮಂಗಳೂರಿನ ಪ್ರವೀಣ್ ನೆಟ್ಯಾರು ರನ್ನು ಹೇಡಿಗಳಂತೆ ಕೊಲೆ ಮಾಡಿದ್ದಾರೆ. ಶಿವಮೊಗ್ಗದ ಪ್ರೇಮ್ ಸಿಂಗ್ ಗೂ ಹೇಡಿಗಳಂತೆ ಚಾಕು ಹಾಕಿದ್ದಾರೆ
ಪತ್ರ ಬರೆಯುವುದು ಹೇಡಿಗಳ ಕೆಲಸ. ಇದಕ್ಕೆಲ್ಲ ಹೆದರೋದಿಲ್ಲ. ಗೂಂಡಾಗಿರಿ ಮಾಡುವ ಮುಸ್ಲಿಮರನ್ನು ಗೂಂಡಾ ಎನ್ನದೇ ಒಳ್ಳೆಯವರು ಎಂದು ಕರೆಯ ಬೇಕಾ? ಗೂಂಡಾ ಅಂದಿದ್ದಕ್ಕೆ ಬೇಸರಗೊಂಡು ಗೂಂಡಾ ಪತ್ರ ಬರೆದಿದ್ದಾನೆ. ಪತ್ರ ಬರೆದ ಬಗ್ಗೆ ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ರಾಜ್ಯದಿಂದಲೇ ಪತ್ರ ಬರೆಯಲಾಗಿದೆ. ಈ ಹೇಡಿಯನ್ನು ಪೋಲಿಸರು ಪತ್ತೆ ಹಚ್ಚುತ್ತಾರೆ. ನನಗೆ ಯಾವುದೇ ಹೆಚ್ಚಿನ ಭದ್ರತೆಯ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
2019ರಲ್ಲೂ ಈಶ್ವರಪ್ಪ ಬಂದಿತ್ತು ಬೆದರಿಕೆ ಕರೆ
ಹೌದು....2019ರಲ್ಲೂ ಸಹ ಈಶ್ವರಪ್ಪನವರಿಗೆ ಬೆದರಿಕೆ ಕರೆ ಬಂದಿತ್ತು. ಅನಾಮಧೇಯ ವ್ಯಕ್ತಿ ಕರೆಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದ.
ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದ ಆತ "ಬಿಜೆಪಿ ಸಂಸದ ಸ್ಥಾನಗಳಿಗೆ ಏಕೆ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿಲ್ಲ? ನಿಮಗೆ ಏನು ಮಾಡಬೇಕೆಂದು ನನಗೆ ಚೆನ್ನಾಗಿ ಗೊತ್ತು" ಎಂದು ಜೀವ ಬೆದರಿಕೆ ಹಾಕಿದ್ದಎಂದು ಸ್ವತಃ ಈಶ್ವರಪ್ಪ ಮಾಧ್ಯಮಗಳಿಗೆ ಹೇಳಿದ್ದರು.
ಅನಾಮಧೇಯ ವ್ಯಕ್ತಿ ಈಶ್ವರಪ್ಪ ಮೊಬೈಲ್ ಗೆ ಎರಡು ಬಾರಿ ಕರೆ ಮಾಡಿದ್ದ. ಅವಾಚ್ಯ ಶಬ್ದಗಳಿಂದ ಬೈದಿದ್ದ ಆವ್ಯಕ್ತಿಗೆ ಶಾಸಕ ಈಶ್ವರಪ್ಪ ಅವರೂ ಸಹ ಬೈಯ್ದಿದ್ದರು. ಆಗ ವ್ಯಕ್ತಿ ಕರೆಯನ್ನು ಕಟ್ ಮಾಡಿದ್ದ. ಅನಾಮಧೇಯ ಕರೆ ಹಿನ್ನೆಲೆಯಲ್ಲಿ ದೂರು ಸಹ ಸಲ್ಲಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ಈಶ್ವರಪ್ಪ"ರಾಜ್ಯದಲ್ಲಿ ಸಂಸದೀಅ ಚುನಾವಣೆಗೆ ಬಿಜೆಪಿಯಿಂದ ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ ಏಕೆಂದರೆ ಅವರಿಗೆ ನಮ್ಮ ಪಕ್ಷದ ಬಗ್ಗೆ ವಿಶ್ವಾಸವಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಅದೇ ಕಾರಣಕ್ಕೆ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದು ಸಂಶಯ ವ್ಯಕ್ತವಾಗಿತ್ತು.