ಘಟನೆಯ ಬಗ್ಗೆ ಖಚಿತ ಮೂಲಗಳಿಂದ ಮಾಹಿತಿ ಪಡೆದ ನಾಗರಗಾಳಿ ಎಸಿಎಫ್ ಮಲ್ಲಿನಾಥ ಕುಸನಾಳ ಮತ್ತು ಗೋಲಿಹಳ್ಳಿ ಆರ್‌ಎಫ್‌ಒ ವಾಣಿಶ್ರೀ ಹೆಗಡೆ ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಕಾಡುಕೋಣದ ರುಂಡ ಪತ್ತೆಯಾಗಿದೆ.
ಖಾನಾಪುರ(ಆ.12): ಕೃಷಿ ಜಮೀನಿನಲ್ಲಿ ಕಾಡುಕೋಣದ ರುಂಡ ಪತ್ತೆಯಾದ ಘಟನೆ ತಾಲೂಕಿನ ಅವರೊಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ವರದಿಯಾಗಿದೆ. ಕಾಡುಕೋಣವನ್ನು ಕೊಂದ ಆರೋಪದ ಮೇಲೆ ಅವರೊಳ್ಳಿಯ ಗ್ರಾಮದ ಸೋಮನಿಂಗ ಕೊಡೊಳ್ಳಿ ಮತ್ತು ಪ್ರಭು ಕೊಡೊಳ್ಳಿ ಎಂಬಿಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿವರ:
ಅವರೊಳ್ಳಿ ಹಾಗೂ ಸುತ್ತ-ಮುತ್ತಲಿನ ಭಾಗದಲ್ಲಿ ಕಾಡುಕೋಣ, ಕಾಡುಹಂದಿ, ನವಿಲು, ಮಂಗ, ನರಿ ಸೇರಿದಂತೆ ವಿವಿಧ ವನ್ಯಜೀವಿಗಳು ರೈತರ ಕೃಷಿ ಜಮೀನುಗಳಿಗೆ ನುಗ್ಗಿ ರೈತರ ಬೆಳೆಹಾನಿ ಮಾಡುತ್ತಿವೆ. ಈ ವಿಷಯವನ್ನು ರೈತರು ಅರಣ್ಯ ಇಲಾಖೆಗೆ ತಿಳಿಸಿದರೂ ಅರಣ್ಯ ಇಲಾಖೆಯಿಂದ ವನ್ಯಜೀವಿಗಳ ಉಪಟಳ ತಡೆದು ರೈತರ ಬೆಳೆ ರಕ್ಷಿಸುವ ಕಾರ್ಯ ನಡೆದಿಲ್ಲ. ಹೀಗಾಗಿ ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ವನ್ಯಜೀವಿಗಳಿಂದ ರಕ್ಷಿಸಲು ವಿದ್ಯುತ್ ತಂತಿಗಳನ್ನು ಅಳವಡಿಸುತ್ತಿದ್ದಾರೆ. ಇದೇ ರೀತಿ ಬುಧವಾರ ರಾತ್ರಿ ಅವರೊಳ್ಳಿ ಬಳಿಯ ಕೊಡೊಳ್ಳಿ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ಉದ್ದೇಶದಿಂದ ಅಳವಡಿಸಿದ್ದ ವಿದ್ಯುತ್ ಸ್ಪರ್ಶಿಸಿದ ಕಾಡುಕೋಣ ಸ್ಥಳದಲ್ಲೇ ಮೃತಪಟ್ಟಿದ್ದು, ಬೆಳಗ್ಗೆ ತಮ್ಮ ಜಮೀನಿನಲ್ಲಿ ಸತ್ತು ಬಿದ್ದ ಕಾಡುಕೋಣದ ಕಳೇಬರ ಗಮನಿಸಿದ ಸೋಮನಿಂಗ ಮತ್ತು ಪ್ರಭು ಸ್ಥಳೀಯರ ಸಹಾಯದಿಂದ ಅದರ ದೇಹವನ್ನು ರುಂಡದಿಂದ ಬೇರ್ಪಡಿಸಿ ಮಣ್ಣಿನಲ್ಲಿ ಹುಗಿದಿದ್ದಾರೆ.
ಗ್ಯಾರಂಟಿ ಜಾರಿಯಿಂದ ಕರ್ನಾಟಕದ ಜಿಡಿಪಿ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ
ಈ ಘಟನೆಯ ಬಗ್ಗೆ ಖಚಿತ ಮೂಲಗಳಿಂದ ಮಾಹಿತಿ ಪಡೆದ ನಾಗರಗಾಳಿ ಎಸಿಎಫ್ ಮಲ್ಲಿನಾಥ ಕುಸನಾಳ ಮತ್ತು ಗೋಲಿಹಳ್ಳಿ ಆರ್‌ಎಫ್‌ಒ ವಾಣಿಶ್ರೀ ಹೆಗಡೆ ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಕಾಡುಕೋಣದ ರುಂಡ ಪತ್ತೆಯಾಗಿದೆ.
ಈ ಪ್ರಕರಣದ ತನಿಖೆಯಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಅಶೋಕ ಹೂಲಿ, ಸಂಜಯ ಮಗದುಮ್, ಕುಮಾರಸ್ವಾಮಿ ಹಿರೇಮಠ, ವನಪಾಲಕರಾದ ವೀರಪ್ಪ ಕರಲಿಂಗನವರ, ಅಜಯ್ ಭಾಸ್ಕರಿ, ಗಿರೀಶ ಮೆಕ್ಕೆದ, ಬಿ ಎ ಮಾಡಿಕ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.