ರಾಜ್ಯದಲ್ಲಿ ಕೊಲೆ ಬೆದರಿಕೆಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಸರಿಯಾಗಿದೆಯಾ ಎಂಬ ಸಂದೇಹ ಮೂಡುತ್ತಿದೆ. ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಸೇರಿದಂತೆ ಇಬ್ಬರು ಶಾಸಕರುಗಳಿಗೆ ಕೊಲೆ ಬೆದರಿಕೆ ಬಂದಿರುವ ವಿಚಾರ ಆತಂಕ ಸೃಷ್ಟಿಸಿದೆ. ಈ ಕುರಿತ ಶ್ರೀಗಳು ಎಸ್ಪಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಮನವಿ ಮಾಡಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.16) ಚಿತ್ರದುರ್ಗದ ಪ್ರಸಿದ್ದ ಮಠಗಳಲ್ಲಿ ಒಂದಾಗಿರುವ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಸೇರಿದಂತೆ ಜಿಲ್ಲೆಯ ಇಬ್ಬರು ಶಾಸಕರಿಗೆ ಕೊಲೆ ಬೆದರಿಕೆ ಬಂದಿರುವ ವಿಷಯ ಬೆಳಕಿಗೆ ಬಂದಿದೆ. ಬೋವಿ ಸಮುದಾಯದ ಇಬ್ಬರು ಶಾಸಕರಾದ ಹೊಸದುರ್ಗದ ಕ್ಷೇತ್ರದ ಗೂಳಿಹಟ್ಟಿ ಡಿ ಶೇಖರ್, ಹಾಗೂ ಹೊಳಲ್ಕೆರೆಯ ಎಂ.ಚಂದ್ರಪ್ಪ ಸೇರಿದಂತೆ ಮೂವರಿಗೆ ಕೊಲೆ ಬೆದರಿಕೆ ಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ KSP ಆಪ್ ಮೂಲಕ ಜಿಲ್ಲಾ ಪೊಲೀಸ್ (Police) ಕಚೇರಿಗೆ ಈ ಸಂದೇಶ ಬಂದಿದೆ. ಶಾಸಕರು ಮತ್ತು ಇಮ್ಮಡಿ ಶ್ರೀಗಳ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ಅನಾಮಧೇಯ ವ್ಯಕ್ತಿಯಿಂದ ಸಂದೇಶವನ್ನು ರವಾನಿಸಲಾಗಿದೆ. ಕೂಡಲೇ ಅದನ್ನು ಪರಿಶೀಲಿಸಿದ ಎಸ್ಪಿ ಕೆ ಪರಶುರಾಮ (K Parashuram) ಈ ಕೇಸ್ ನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಈ ಪ್ರಕರಣ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿಗಳ ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ತೀವಿ ಎಂದು ಎಸ್ಪಿ ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಅಮ್ಮನ ಹುಟ್ಟುಹಬ್ಬದಂದು ಸೂಸೈಡ್ ಮಾಡಿಕೊಂಡ ಮಗ, ವಿಶ್ವದ ಬೆಸ್ಟ್ ಗಿಫ್ಟ್ ಎಂದು ಡೆತ್‌ನೋಟ್!
ಇನ್ನೂ ಈ ಬೆದರಿಕೆ ವಿಚಾರದ ಕುರಿತು ಎಸ್ಪಿ ಅವರಿಗೆ ಭೋವಿ ಗುರುಪೀಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಯವರು ಪತ್ರ ಬರೆದಿದ್ದಾರೆ. ಪತ್ರದ ಸಂಪೂರ್ಣ ಸಾರಾಂಶ ಇಂತಿದೆ;
ಮಾನ್ಯರೇ,
ವಿಷಯ: ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಗೆ ಮತ್ತು ಮಠದ ಆಸ್ತಿಗಳಿಗೆ ರಕ್ಷಣೆ ಒದಗಿಸುವ ಬಗ್ಗೆ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಭೋವಿಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರಿಗೆ ಮತ್ತು ಮಠದ ಆಸ್ತಿಗಳಿಗೆ ಕೆಲವು ದುಷ್ಕರ್ಮಿಗಳಿಂದ ಅಪಾಯವಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿರುತ್ತದೆ.
ಇದನ್ನೂ ಓದಿ: ವೃದ್ಧರಿಗೆ ಮಸಾಜ್ ಆಸೆ ತೋರಿಸಿ ಚಿನ್ನ ದೋಚುತ್ತಿದ್ದ ಮಹಿಳೆ ಅಂದರ್
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ನಿರಂತರವಾಗಿ ಸಮಾಜವನ್ನು ಸಂಘಟಿಸಲು ರಾಜ್ಯದ ನಾನಾ ಭಾಗಗಳಿಗೆ ಸಂಚರಿಸುತ್ತಿರುತ್ತಾರೆ. ಜುಲೈ-18 ರಂದು ಭೋವಿ ಜನೋತ್ಸವ ಸರಳವಾಗಿ ಬೋವಿ ಗುರುಪೀಠದಲ್ಲಿ ನಡೆಯುತ್ತದೆ. ಆಗಸ್ಟ್-1 ರಂದು ದಾವಣಗೆರೆಯಲ್ಲಿ ಶ್ರೀ ಸಿದ್ಧರಾಮೇಶ್ವರರ 60ನೇ ರಥೋತ್ಸವ ಬೃಹತ್ತಾಗಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಜನರನ್ನು ಸಂಘಟಿಸುವ ಉದ್ದೇಶಕ್ಕೆ ಹಳ್ಳಿಗಳಿಗೆ ಶ್ರೀಗಳು ಸಂಚರಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳನ್ನು ನೋಡಿದಾಗ ಮಠದ ಆಸ್ತಿಗೆ ಮತ್ತು ಶ್ರೀಗಳಿಗೆ ದುಷ್ಕರ್ಮಿಗಳಿಂದ ಹಲ್ಲೆ ಅಥವಾ ಇತರೆ ಚಟುವಟಿಕೆಗಳಿಂದ ಯಾವುದೇ ತೊಂದರೆಯಾಗದಂತೆ ರಕ್ಷಣೆಯನ್ನು ಒದಗಿಸಬೇಕಾಗಿ ತಮ್ಮಲ್ಲಿ ಕೋರಿಕೊಳ್ಳುತ್ತೇವೆ.
ಈ ರೀತಿ ಸವಿವರವಾಗಿ ಪೊಲೀಸರಲ್ಲಿ ಶ್ರೀಗಳು ಮನವಿ ಮಾಡಿಕೊಂಡಿದ್ದಾರೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಅನಾಮಧೇಯ ವ್ಯಕ್ತಿಯಿಂದ ಬಂದಿರೋ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಆರೋಪಿಗಳಿಗೆ ಎಡೆಮುರಿಕಟ್ಟಬೇಕಿದೆ.