
ಬೆಂಗಳೂರು (ಜು.25): ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಣೆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಮಲ ಮಗಳು, ನಟಿ ರನ್ಯಾ ರಾವ್‌ರ ಮತ್ತೊಬ್ಬ ಸ್ನೇಹಿತನನ್ನು ಕಂದಾಯ ಗುಪ್ತಚರ ಜಾರಿನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಹೈದರಾಬಾದ್ ಮೂಲದ ಭರತ್ ಕುಮಾರ್ ಜೈನ್ ಬಂಧಿತನಾಗಿದ್ದು, ಈತನ ಮೂಲಕ ರನ್ಯಾ ರಾವ್‌ಗೆ ಚಿನ್ನ ಸಾಗಣೆ ಜಾಲದ ಪರಿಚಯವಾಗಿತ್ತು. ಚಿನ್ನ ಮಾರಾಟದಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದು ಬಂದಿದೆ.
ಕಳೆದ ಮಾರ್ಚ್‌ನಲ್ಲಿ ದುಬೈನಿಂದ ಅಕ್ರಮವಾಗಿ 12.5 ಕೋಟಿ ರು. ಮೌಲ್ಯದ 14 ಕೆ.ಜಿ. ಚಿನ್ನ ಸಾಗಿಸುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್‌ರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಆಕೆಯ ವಿಚಾರಣೆ ವೇಳೆ ಕಳ್ಳ ಸಾಗಣೆ ಸಂಪರ್ಕ ಜಾಲ ಬಯಲಾಗಿತ್ತು. ಪ್ರಕರಣದಲ್ಲಿ ಆಕೆಯ ಸ್ನೇಹಿತ ಹಾಗೂ ಉದ್ಯಮಿ ಪುತ್ರ ತರುಣ್ ರಾಜು ಹಾಗೂ ಬಳ್ಳಾರಿ ಚಿನ್ನಾಭರಣ ವ್ಯಾಪಾರಿ ಸಾಹಿಲ್ ಜೈನ್‌ರನ್ನು ಅಧಿಕಾರಿಗಳು ಬಂಧಿಸಿದ್ದರು. ಐದು ತಿಂಗಳ ಅವಧಿಯಲ್ಲಿ ಆರೋಪಿಗಳು 50 ಕೋಟಿ ರು.ಗೂ ಅಧಿಕ ಚಿನ್ನ ಸಾಗಿಸಿರುವುದು ಪತ್ತೆಯಾಗಿತ್ತು. ರನ್ಯಾ ಬಂಧನ ಬಳಿಕ ತಲೆಮರೆಸಿಕೊಂಡಿದ್ದ ಭರತ್ ಕೊನೆಗೂ ಡಿಆರ್‌ಐ ಬಲೆಗೆ ಬಿದ್ದಿದ್ದಾನೆ. ವಿದೇಶದಿಂದ ಅಕ್ರಮವಾಗಿ ತರುತ್ತಿದ್ದ ಚಿನ್ನದ ವಿಲೇವಾರಿಯಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿದು ಬಂದಿದೆ.
ಬಳ್ಳಾರಿ ಚಿನ್ನದ ವ್ಯಾಪಾರಿ ಬಂಧನ: ಡಿಜಿಪಿ ಮಲಮಗಳು ಹಾಗೂ ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಬಳ್ಳಾರಿ ಜಿಲ್ಲೆಯ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಬಂಧಿಸಿದೆ. ಬಳ್ಳಾರಿ ನಗರದ ಬ್ರಾಹ್ಮಿನ್ ರಸ್ತೆಯ ಮಹೇಂದ್ರ ಕುಮಾರ್ ಜೈನ್ ಪುತ್ರ ಸಾಹಿಲ್ ಸಕಾರಿಯಾ ಜೈನ್ ಬಂಧಿತನಾಗಿದ್ದು, ವಿದೇಶದಿಂದ ಕಳ್ಳ ಸಾಗಣೆ ಮೂಲಕ ಚಿನ್ನ ಮಾರಾಟದಲ್ಲಿ ರನ್ಯಾರವರಿಗೆ ಆತ ನೆರವು ನೀಡಿದ್ದ. ಈ ಹಿನ್ನೆಲೆಯಲ್ಲಿ ಸಾಹಿಲ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ಸಲುವಾಗಿ ನಾಲ್ಕು ದಿನಗಳು ಡಿಆರ್‌ಐ ಕಸ್ಟಡಿಗೆ ಪಡೆದಿದೆ ಎಂದು ತಿಳಿದು ಬಂದಿದೆ.
ಹಲವು ವರ್ಷಗಳಿಂದ ಬಳ್ಳಾರಿ ನಗರದಲ್ಲಿ ಚಿನ್ನಾಭರಣ ಮಾರಾಟ ಮಳಿಗೆಯನ್ನು ಸಾಹಿಲ್ ಕುಟುಂಬ ನಡೆಸುತ್ತಿದೆ. ತನ್ನ ಸ್ನೇಹಿತರ ಮೂಲಕ ಆತನಿಗೆ ರನ್ಯಾ ಪರಿಚಯವಾಗಿದೆ. ಹಣದಾಸೆಗೆ ಚಿನ್ನ ಕಳ್ಳ ಸಾಗಣೆ ಕೃತ್ಯಕ್ಕೆ ಆತ ಸಹಕರಿಸಿದ್ದಾನೆ. ಅಂತೆಯೇ ದುಬೈನಿಂದ ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಚಿನ್ನ ತರುತ್ತಿದ್ದ ರನ್ಯಾ, ನಂತರ ಸಾಹಿಲ್ ಮೂಲಕ ಆ ಚಿನ್ನವನ್ನು ವಿಲೇವಾರಿ ಮಾಡಿ ಹಣ ಸಂಪಾದಿಸಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ಸಾಹಿಲ್‌ಗೆ ಕೂಡ ಪಾಲು ಸಿಕ್ಕಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ