
ಕಲಬುರಗಿ (ಜುಲೈ.24): ಕಲಬುರಗಿ ಜಿಲ್ಲೆಯ ಆಭರಣ ಅಂಗಡಿಯೊಂದರಲ್ಲಿ 2.15 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಖದೀಮರ ದರೋಡೆ ಯೋಜನೆ ವಿಫಲಗೊಂಡಿದ್ದು, ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ:
ಜುಲೈ 11ರಂದು, ಅಯೋಧ್ಯಾ ಪ್ರಸಾದ್ ಚೌಹಾಣ್ (48), ಫಾರೂಕ್ ಅಹ್ಮದ್ ಮಲಿಕ್ (40), ಮತ್ತು ಸೊಹೈಲ್ ಶೇಖ್ ಅಲಿಯಾಸ್ ಬಾದ್‌ಶಾ ಎಂಬುವವರು ಮರಾತುಲ್ಲಾ ಮಲಿಕ್‌ಗೆ ಸೇರಿದ ಆಭರಣ ಅಂಗಡಿಗೆ ನುಗ್ಗಿ ಬಹುಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಫಾರೂಕ್ ಎಂಬುವವನು ತನ್ನ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ನಂತರ ಈ ದರೋಡೆಗೆ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.
ದರೋಡೆ ವೇಳೆ, ಫಾರೂಕ್ ಅಂಗಡಿಯ ಹೊರಗೆ ಕಾವಲುಗಾರನಾಗಿ ನಿಂತಿದ್ದರೆ, ಇತರ ಮೂವರು ಒಳಗೆ ಪ್ರವೇಶಿಸಿ ಮಲಿಕ್‌ನ ಕೈಗಳನ್ನು ಕಟ್ಟಿಹಾಕಿ, ಚಿನ್ನ ಮತ್ತು ನಗದನ್ನು ದೋಚಿದ್ದರು. ಸದ್ಯ ಬಂಧಿತರಿಂದ ಸುಮಾರು 2.15 ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ದರೋಡೆಯ ಸಂದರ್ಭದಲ್ಲಿ ಕದ್ದ ಚಿನ್ನದ ಪ್ರಮಾಣವನ್ನು ವರದಿ ಮಾಡದ ಅಂಗಡಿಯ ಮಾಲೀಕರ ವಿರುದ್ಧವೂ ತನಿಖೆ ಆರಂಭವಾಗಿದೆ.
ಪಾವ್‌ಭಜಿ ಆರ್ಡರ್ ಮಾಡಿ ಸಿಕ್ಕಿಬಿದ್ದ ಖದೀಮರು:
ಖದೀಮರು ದರೋಡೆಯ ನಂತರ ಓಡಿಹೋಗುವ ಬದಲು, ಫಾರೂಕ್ ಹತ್ತಿರದ ಅಂಗಡಿಯಲ್ಲಿ ಪಾವ್ ಭಾಜಿ ತಿನ್ನಲು ತೆರಳಿದ್ದಾರೆ. ಆರೋಪಿಗಳು PhonePe ಮೂಲಕ 30 ರೂ. ಪಾವತಿಸಿ ಪಾವ್‌ಭಜಿ ತಿಂದಿದ್ದು ಸಿಕ್ಕಿಬಿಳಲು ಕಾರಣವಾಗಿದೆ. ಪೊಲೀಸರು ತನಿಖೆ ವೇಳೆ ಈ ಡಿಜಿಟಲ್ ವಹಿವಾಟು ಪೊಲೀಸರಿಗೆ ಸುಳಿವು ನೀಡಿತು. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಫಾರೂಕ್‌ನ ಯುಪಿಐ ಪಾವತಿಯ ಮೂಲಕ ಸಂಪರ್ಕ ಸಂಖ್ಯೆಯನ್ನು ಪಡೆದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪೊಲೀಸರು ಈಗ ನಾಲ್ಕನೇ ಆರೋಪಿಯನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಆಭರಣ ಅಂಗಡಿಗಳ ಭದ್ರತೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ