
ಬೆಂಗಳೂರು (ಏ.07): ಬೆಂಗಳೂರಿನಲ್ಲಿ ಪ್ರತಿಷ್ಠಿತ ಏರಿಯಾದಲ್ಲಿ ಇದ್ದ 4 ಕೋಟಿ ರೂ. ಮೌಲ್ಯದ ಮನೆಯನ್ನು ಕೇವಲ 60 ಲಕ್ಷ ರೂ.ಗೆ ಕಬಳಿಸಲು ಮುಂದಾಗಿದ್ದ ಸಿಎಂ ಚಿನ್ನದ ಪದಕ ಪಡೆಯಲು ಆಯ್ಕೆಯಾಗಿದ್ದ ಇನ್ಸ್‌ಪೆಕ್ಟರ್ ಎ.ವಿ. ಕುಮಾರ್ ಸೇರಿದಂತೆ ಅನ್ನ ಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ಹಾಗೂ ಇತರೆ ನಾಲ್ವರು ಖಾಸಗಿ ವ್ಯಕ್ತಿಗಳು ಸೇರಿದಂತೆ 7 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಇನ್ಸ್‌ಪೆಕ್ಟರ್ ಕುಮಾರ್, ಇಬ್ಬರು ಕಾನ್ಸ್‌ಟೇಬಲ್ ಸೇರಿ 7 ಜನರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಇನ್ಸ್‌ಪೆಕ್ಟರ್ ಎ ವಿ ಕುಮಾರ್ ಎ1 ಆರೋಪಿ ಆಗಿದ್ದಾರೆ.ಕಾನ್ಸ್‌ಟೇಬಲ್‌ಗಳಾದ ಉಮೇಶ್ ಹಾಗೂ ಅನಂತ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಮೂವರು ಸರ್ಕಾರಿ ನೌಕರರು, ಹಾಗು ನಾಲ್ವರು ಖಾಸಗಿ ವ್ಯಕ್ತಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ.
ಆಸ್ತಿಯ ಮಾಲೀಕ ಚೆನ್ನೇಗೌಡ ಎನ್ನುವವರು ನೀಡಿದ ದೂರಿನ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 7a ಅಡಿ ಎಫ್‌ಐಆರ್ ಆಗಿದೆ. ಭ್ರಷ್ಟ ಅಥವಾ ಕಾನೂನುಬಾಹಿರ ವಿಧಾನಗಳಿಂದ ವೈಯಕ್ತಿಕ ಪ್ರಭಾವ ಬೀರುವುದು, ಹಾಗೂ ಅನಗತ್ಯ ಪ್ರಯೋಜನ ಪಡೆಯುವ ಅಪರಾಧವನ್ನು 7a ಅಡಿ ಉಲ್ಲೇಖ ಮಾಡಲಾಗಿದೆ. 3 ವರ್ಷಗಳಿಗಿಂತ ಕಡಿಮೆಯಿಲ್ಲದ 7 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡ ಒಳಗೊಂಡ 7a ಸೆಕ್ಷನ್ ಇದಾಗಿದೆ.
ಇದನ್ನೂ ಓದಿ: ಮತ್ತೆ ಅವರೇ ಬಿಜೆಪಿ ಅಧ್ಯಕ್ಷರಾಗಲಿ: ಸಿದ್ದಿವಿನಾಯಕನಿಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರಾರ್ಥನೆ
ಕಳೆದ ವಾರ ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಅನ್ನಪೂರ್ಣೇಶ್ವರಿ ಠಾಣೆ ಮೇಲೆ ದಾಳಿ ಮಾಡಿದ್ದರು. ಇದೇ ವೇಳೆ ಖಾಸಗಿ ಹೋಟೆಲ್ ಮೇಲೆಯೂ ದಾಳಿ ಮಾಡಿದ್ದು, ಅಲ್ಲಿ ₹4 ಕೋಟಿ ಮೌಲ್ಯದ ಕಟ್ಟಡವನ್ನು ಕೇವಲ ₹60 ಲಕ್ಷಕ್ಕೆ ಬರೆಸಿಕೊಳ್ಳಲು ಮುಂದಾಗಿದ್ದ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಪೊಲೀಸರಿಂದಲೇ ಕಟ್ಟಡವನ್ನು ಕಡಿಮೆ ಬೆಲೆಗೆ ಬರೆಸಿಕೊಳ್ಳಲು ಮುಂದಾಗಿರುವುದು ಕಂಡುಬಂದಿದೆ. ಇಬ್ಬರು ಕಾನ್ಸ್‌ಸ್ಟೇಬಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಮೀಟಿಂಗ್ ವೇಳೆ ಲೋಕಾಯುಕ್ತ ಪೊಲೀಸರಿಂದ ಟ್ರ್ಯಾಪ್ ಕಾರ್ಯಾಚರಣೆ ಮಾಡಲಾಗಿತ್ತು.
ಇನ್ನು ದೂರುದಾರ ಚನ್ನೇಗೌಡ ಅವರ ಮನೆಯನ್ನು ತಮಗೆ ಬರೆದುಕೊಡುವಂತೆ ಮನೆಗೆ ನುಗ್ಗಿ ಧಮ್ಕಿ ಹಾಕಿದ್ದ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಲೋಕಾಯುಕ್ತ ಪೊಲೀಸರು ಇದೀಗ ಎಫ್ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಇತ್ತೀಚೆಗೆ ನಡೆದ ಮುಖ್ಯಮಂತ್ರಿ ಚಿನ್ನದ ಪದಕ ಪಡೆಯಲು ಬೆಸ್ಟ್ ಇನ್ಸ್‌ಪೆಕ್ಟರ್ ಎಂಬ ಕೆಟಗರಿ ಅಡಿಯಲ್ಲಿ ಆಯ್ಕೆಯಾಗಿದ್ದ ಇನ್ಸ್‌ಪೆಕ್ಟರ್ ಎ.ವಿ.ಕುಮಾರ್ ದೊಡ್ಡ ಭ್ರಷ್ಟ ಅಧಿಕಾರಿ ಎಂಬ ಆರೋಪ ಕೇಳಿಬಂದಿದೆ. ಇದೀಗ ಲೋಕಾ ದಾಳಿ ಬಳಿಕ ಪದಕ ವಿತರಣೆ ಕಾರ್ಯಕ್ರಮಕ್ಕೆ ಗೈರಾಗಿದ್ದ ಇನ್ಸಪೆಕ್ಟರ್ ಪರಾರಿ ಆಗಿದ್ದಾರೆ.
ಇದನ್ನೂ ಓದಿ: 'ಕಳ್ಳ' ಇನ್ಸ್ಪೆಕ್ಟರ್ ಗೆ ಚಿನ್ನದ ಪದಕ ಕೊಟ್ಟ ಸಿಎಂ? ಲೋಕಾ ದಾಳಿ ಬೆನ್ನಲ್ಲೇ ಮನೆಬಿಟ್ಟು ಪರಾರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ