
ಬೆಂಗಳೂರು (ಮಾ.8): ನಂಬಿದ ಸ್ನೇಹಿತನೇ ಹಣದ ದುರಾಸೆಗೆ ಬಿದ್ದು, ನಕಲಿ ಪೊಲೀಸ್ ವೇಷಧಾರಿಯೊಬ್ಬನನ್ನ ಕಳಿಸಿ ದರೋಡೆ ಮಾಡಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನ ಹೊಂಬೇಗೌಡ ಎಂಬುವವರ ಮನೆಯಲ್ಲಿ ನಡೆದಿದ್ದ ಈ ರಾಬರಿ ಕೇಸ್‌ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಮಾಸ್ಟರ್ ಮೈಂಡ್ ಅನ್ನು ಜೈಲಿಗಟ್ಟಿದ್ದಾರೆ.
ಹೊಂಬೇಗೌಡರ ಆಪ್ತ ಸ್ನೇಹಿತನಾಗಿದ್ದ 52 ವರ್ಷದ ಸ್ಟಾಂಪ್ ವೆಂಡರ್ ಬೆಟ್ಟೇಗೌಡನೇ ಈ ದರೋಡೆಯ ಮಾಸ್ಟರ್‌ಮೈಂಡ್. ಹೊಂಬೇಗೌಡರು ಇತ್ತೀಚೆಗೆ ಸೈಟ್ ಮಾರಾಟ ಮಾಡಿದ್ದರು. ಈ ವ್ಯವಹಾರದ ಪೇಪರ್ ಕೆಲಸಗಳನ್ನು ಬೆಟ್ಟೇಗೌಡನೇ ಮಾಡಿಕೊಟ್ಟಿದ್ದರು. ಸ್ನೇಹಿತನ ಬಳಿ ಸೈಟ್ ಮಾರಿದ ಹಣವಿದೆ ಎಂಬ ವಿಷಯ ಈತನಿಗೆ ತಿಳಿದಿತ್ತು. ಹಣದ ದುರಾಸೆಗೆ ಬಿದ್ದ ಆರೋಪಿ ಬೆಟ್ಟೇಗೌಡ ಹೇಗಾದರೂ ಅಷ್ಟು ಹಣ ಲಪಟಾಯಿಸಬೇಕು ಯೋಚನೆಗೆ ಬಿದ್ದಿದ್ದಾನೆ. ಅದರಂತೆಯೇ ಪ್ಲಾನ್ ಮಾಡಿದ್ದಾನೆ.
ಗೆಳೆಯನ ಮನೆ ದರೋಡೆ ಮಾಡಲು ಬೆಟ್ಟೇಗೌಡ ಯಾರೊಂದಿಗೆ ಕೈಜೋಡಿಸಿದ್ದಾನೆ ನೋಡಿ. ಅವನೊಬ್ಬ ದೊಡ್ಡ ಕ್ರಿಮಿನಲ್, ಜೈಲಿಂದ ಪೆರೋಲ್ ಮೇಲೆ ಹೊರಬಂದಿದ್ದ ನಾಗೇಂದ್ರ ಎಂಬ ಆರೋಪಿಗೆ ಕರೆ ಮಾಡಿ' ನನ್ನ ಸ್ನೇಹಿತ ಹೊಂಬೇಗೌಡ ಸೈಟ್ ಮಾರಿದ್ದಾನೆ, ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನ ನನ್ನ ಬಳಿಯೇ ಮಾಡಿಸಿದ್ದಾನೆ. ನೀನೀಗ ಅವನ ಮನೆಮೇಲೆ ದಾಳಿ ಮಾಡಿ ಅವನಲ್ಲಿ ಅಷ್ಟು ಹಣವನ್ನು ರಾಬರಿ ಮಾಡು, ಅನಂತರ ಇಬ್ಬರು ಹಂಚಿಕೊಳ್ಳುವ ಎಂಬಂತಹ ಐಡಿಯಾ ಕೊಟ್ಟಿದ್ದನೆ. ಅಷ್ಟೇ ಅಲ್ಲ ಸ್ನೇಹಿತನ ಮನೆಯ ಸಂಪೂರ್ಣ ಮಾಹಿತಿ, ಹಣ ಎಲ್ಲಿದೆ ಎಂಬ ಸುಳಿವನ್ನು ಈತನೇ ನೀಡಿದ್ದ ಎನ್ನಲಾಗಿದೆ.
ಸಿನಿಮಾ ಸ್ಟೈಲ್‌ನಲ್ಲಿ ನಕಲಿ ಸಬ್ ಇನ್ಸ್‌ಪೆಕ್ಟರ್ ಎಂಟ್ರಿ!
ಬೆಟ್ಟೇಗೌಡ ಎಂಥ ಖತರ್ನಾಕ್ ಐಡಿಯಾ ಮಾಡಿದ್ದನೆಂದರೆ ಆರೋಪಿ ನಾಗೇಂದ್ರನಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ಅದು ರಾಬರಿ ಮಾಡಲು ಸಿನಿಮಾ ಸ್ಟೈಲ್‌ನಲ್ಲೇ ಸ್ಕೆಚ್ ಹಾಕಿದ್ದಾನೆ. ಶಿವಾಜಿನಗರಕ್ಕೆ ಹೋಗಿ, ಸಿನಿಮಾ ಶೂಟಿಂಗ್ ಮಾಡಬೇಕಿದೆ ಅಂತಾ ಸುಳ್ಳು ಹೇಳಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಯೂನಿಫಾರ್ಮ್ ಅನ್ನು ಬಾಡಿಗೆಗೆ ತಂದಿದ್ದಾನೆ. ಆ ಯುನಿಫಾರಂ ನೋಡೋಕೆ ಹೇಗಿದೆ ಅಂದ್ರೆ ಅದನ್ನ ತೊಟ್ಟರೆ ಥೇಟ್ ಯಲಹಂಕ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರೀತಿ ಕಾಣುವಂತಿದೆ. ಆ ಯುನಿಫಾರಂ ತಂದು ನಾಗೇಂದ್ರನಿಗೆ ಕೊಟ್ಟಿದ್ದಾನೆ. ಅದನ್ನು ಧರಿಸಿಕೊಂಡು ಆರೋಪಿ ನಾಗೇಂದ್ರ ಅಂಡ ಟೀಂ ಹೊಂಬೇಗೌಡರ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿತ್ತು.
ಖತರ್ನಾಕ್ ಖದೀಮರು ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?
ಈ ಹಿಂದೆ ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಪೊಲೀಸ್ ವೇಷಧಾರಿ ನಾಗೇಂದ್ರ, ಬಚ್ಚನ್ ಎಂಬುವವರನ್ನು ಬಂಧಿಸಿದ್ದರು. ತೀವ್ರ ವಿಚಾರಣೆ ನಡೆಸಿದಾಗ ಈ ದರೋಡೆಯ ಹಿಂದೆ ಹೊಂಬೇಗೌಡರ ಸ್ನೇಹಿತ ಬೆಟ್ಟೇಗೌಡನ ಕೈವಾಡ ಇರುವುದು ಪತ್ತೆಯಾಗಿದೆ. ಸದ್ಯ ಸ್ಟಾಂಪ್ ವೆಂಡರ್ ಬೆಟ್ಟೇಗೌಡನನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು, ಬಂಧಿತರಿಂದ ಒಟ್ಟು 570 ಗ್ರಾಂ ಚಿನ್ನಾಭರಣ ಮತ್ತು 14 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೋಡಿ ಈ ಪ್ರಕರಣದಿಂದ ತಿಳಿದುಬರುವುದೇನೆಂದರೆ ಆಸ್ತಿ, ಹಣಕಾಸು ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಇವನು ನಮ್ಮವನು, ಅಂತವನಲ್ಲ, ಒಳ್ಳೆಯವನು ಹಿಂಗೆಲ್ಲ ಕುರುಡಾಗಿ ನಂಬಿ ವ್ಯವಹಾರ ಮಾಡುವುದಾಗಲಿ, ಹಣಕಾಸಿನ ಮಾಹಿತಿಯನ್ನ ಹಂಚಿಕೊಳ್ಳುವುದಾಗಿ ಮಾಡಿದರೆ ನಂಬಿದವರಿಂದಲೇ ಮೋಸ ಹೋಗುವುದು ಪಕ್ಕಾ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ