
ಬೆಂಗಳೂರು (ಅ.21): ನಿಮ್ಮಪ್ಪನಿಗೆ 30 ಸಾವಿರ ರೂ. ಸಾಲ ಕೊಟ್ಟಿದ್ದೇನೆ. ಅದನ್ನು ವಾಪಸ್ ಕೊಡು ಎಂದು ಮನೆಗೆ ಸಾಲ ವಸೂಲಿ ಮಾಡಲು ಬುರತ್ತಿದ್ದ ಸಾಲಗಾರ, ಸಾಲ ಪಡೆದ ವ್ಯಕ್ತಿಯ ಅಪ್ರಾಪ್ತ ಮಗಳ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿ ವಿಕೃತಿ ಮೆರೆದಿದ್ದಾನೆ.
ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಲಾಗಿದೆ. 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ರವಿಕುಮಾರ್ (39) ಆಗಿದ್ದಾನೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಅಪ್ಪನಿಗೆ ಕೆಲವು ದಿನಗಳ ಹಿಂದೆ 70 ಸಾವಿರ ರೂ. ಹಣವನ್ನು ಆರೋಪಿ ರವಿ ಕುಮಾರ್ ಸಾಲವಾಗಿ ನೀಡಿದ್ದನು. ಸಾಲ ವಸೂಲಿಗಾಗಿ ರವಿ ಕುಮಾರ್ ಆಗಾಗ್ಗೆ ಮನೆಗೆ ಬರುತ್ತಿದ್ದನು. ಆರಂಭದಲ್ಲಿ ಸಾಲ ವಸೂಲಿ ಮಾಡಿಕೊಂಡು ಹೋಗುತ್ತಿದ್ದವನು, ನಂತರದ ದಿನಗಳಲ್ಲಿ ಅವರ ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದನು. ಎಷ್ಟೇ ಆಗಲಿ ಸಾಲ ಕೊಟ್ಟಿದ್ದಾನೆಂದು ಆತ ಮನೆಯಲ್ಲಿ ಕುಳಿತಷ್ಟು ಹೊತ್ತು ಆತನನ್ನು ಗೌರವಯುವತಾಗಿಯೇ ನಡೆಸಿಕೊಳ್ಳಲಾಗುತ್ತಿತ್ತು.
ಇದನ್ನೂ ಓದಿ: ರಾಕೇಶ್ ಸಿದ್ದರಾಮಯ್ಯ ಸಾವಿಗೆ ಬೈರತಿ ಸುರೇಶ್ ಕಾರಣ: ಸಚಿವೆ ಶೋಭಾ ಕರಂದ್ಲಾಜೆ ಆರೋಪ
ಇದಾದ ನಂತರ ಸಾಲ ಪಡೆದುಕೊಂಡ ವ್ಯಕ್ತಿ ಮನೆಯಲ್ಲಿ ಇಲ್ಲದಾಗ ಬಂದು ಮನೆಯ ಬಳಿ ಕುಳಿತುಕೊಳ್ಳುತ್ತಿದ್ದನು. ಆಗ ಮನೆಯಲ್ಲಿ ಇರುತ್ತಿದ್ದ ಆತನ ಅಪ್ರಾಪ್ತ ಮಗಳನ್ನು ಟೀ, ಕಾಫಿ ಕೊಡು ಎಂದೆಲ್ಲಾ ಕೇಳಿ ನಿಮ್ಮಪ್ಪ ಬರುವವರೆಗೂ ನಾನು ಮನೆಯಲ್ಲಿಯೇ ಇರುವುದಾಗಿ ಹೇಳುತ್ತಿದ್ದನು. ಆಗ ಅಪ್ರಾಪ್ತ ಮಗಳಿಗೆ ನಾನು ನಿಮ್ಮಪ್ಪನಿಗೆ ಸಾಲ ಕೊಟ್ಟಿದ್ದೇನೆಂದು ಕೆಲವೊಮ್ಮೆ ಆಕೆಯ ಮೈಮುಟ್ಟಿ ಅನುಚಿತ ವರ್ತನೆ ತೋರಿದ್ದಾನೆ. ಇದನ್ನು ಮನೆಯವರ ಬಳಿ ಹೇಳಿದರೆ ನಿಮ್ಮಪ್ಪನಿಂದ ಸಾಲ ವಸೂಲಿ ಮಾಡುವುದಕ್ಕೆ ಕಿರುಕುಳ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಪ್ಪನಿಗೆ ನನ್ನಿಂದ ಕಷ್ಟ ಆಗಬಾರದು ಎಂದು ಮಗಳು ಸಾಲಗಾರನ ಕಿರುಕುಳ ಸಹಿಸಿಕೊಂಡಿದ್ದಾಳೆ.
ಬಾಲಕಿಯ ಅಪ್ಪ ಪಡೆದಿದ್ದ 70 ಸಾವಿರ ರೂ. ಹಣದಲ್ಲಿ ಹಂತ ಹಂತವಾಗಿ ಕಂತಿನ ರೂಪದಲ್ಲಿ 40 ಸಾವಿರ ರೂ. ಹಣವನ್ನು ವಾಪಸ್ ಕೊಟ್ಟಿದ್ದಾನೆ. ಬಾಕಿ 30 ಸಾವಿರ ರೂ. ಹಣಕ್ಕಾಗಿ ಎಂದಿನಂತೆಯೇ ಮನೆಗೆ ಬರುತ್ತಿದ್ದ ರವಿಕುಮಾರ್, ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆಕೆಯನ್ನು ಬಲವಂತವಾಗಿ ಹಿಡಿದುಕೊಂಡು ಮುತ್ತು ಕೊಟ್ಟಿದ್ದಾನೆ. ಇದೇ ರೀತಿ ಹಲವು ಬಾರಿ ಮಾಡಿದ್ದಾನೆ. ಆಗ ತಾನು ಬಾಲಕಿಗೆ ಮುತ್ತಿಡುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ. ನಂತರ, ಯುವತಿಗೆ ಈ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಪ್ಪನ ಸಾಲಕ್ಕೆ ತೊಂದರೆ ಆಗುತ್ತದೆ ಎಂದು ಮಗಳು ಇದನ್ನು ಸಹಿಸಿಕೊಂಡಿದ್ದಾಳೆ.
ಇದನ್ನೂ ಓದಿ: ಬೆಂಗಳೂರು: ಬೆಡ್‌ಶಿಟ್ ವಿಚಾರದಲ್ಲಿ ಅಕ್ಕನ ಜೊತೆಗೆ ಗಲಾಟೆ, 19 ವರ್ಷದ ತಂಗಿ ಆತ್ಮಹತ್ಯೆ!
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದನ್ನು ತನ್ನ ದೊಡ್ಡಸ್ತಿಕೆ ಎಂದು ತಿಳಿದುಕೊಂಡು ಪುನಃ ಪುನಃ ಸಾಲ ವಸೂಲಿಗೆ ತೆರಳಿ ಬಾಲಕಿಯ ಅಪ್ಪನಿಲ್ಲದ ವೇಳೆ ಆಕೆಯನ್ನು ವಿಡಿಯೋ ಹಾಗೂ ಫೋಟೋ ತೋರಿಸಿ ಪದೇ ಪದೇ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಈತನ ಕಿರುಕುಳ ಹೆಚ್ಚಾದ ನಂತರ ಮನೆಯವರಿಗೆ ಮಾಹಿತಿ ನೀಡಿದ್ದಾಳೆ. ಸಾಲಕ್ಕಾಗಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪಿಯ ವಿರುದ್ಧ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ