ಮೊಬೈಲ್ ಬದಲಿಗೆ ಸೋನ್ ಪಾಪಡಿ ಕಳುಹಿಸಿ ರೈತನಿಗೆ ಮೋಸ

By Suvarna NewsFirst Published Aug 1, 2022, 5:25 PM IST
Highlights

ವಿವೋ ಕಂಪನಿ ಎಂದು ಸುಳ್ಳು ಹೇಳಿ ರೈತನಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.  ತನ್ನ ಪಾಡಿಗೆ ತಾನು ಮನೆಯ ಬಳಿ ಕೆಲಸ ಮಾಡಿಕೊಂಡಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ರೈತನಿಗೆ ಬೆಂಗಳೂರಿನ ಖಾಸಗಿ ಕಂಪನಿ ವಂಚಿಸಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಆಗಸ್ಟ್.01):
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಿಂದ ಜನರು ಮೋಸ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಅದೇ ರೀತಿ ಗ್ರಾಮೀಣ ಭಾಗದ ಜನರಿಗೆ ಯಾವುದೋ ದೂರದ ಊರಲ್ಲಿ ಕುಳಿತುಕೊಂಡು ಕರೆ ಮಾಡಿ ಮೋಸ ಮಾಡುವವರ ಪ್ರಕರಣಗಳು ನಿನ್ನೆ ಮೊನ್ನೆಯದೇನಲ್ಲ ಬಿಡಿ. ಅದಕ್ಕೆ ಮತ್ತೊಂದು ಪುಷ್ಟಿಕೊಡುವಂತೆ ಕೋಟೆನಾಡಿನ ರೈತನೋರ್ವನಿಗೆ ವಿವೋ ಕಂಪನಿಯವರು ಎಂದು ಸುಳ್ಳು ಹೇಳಿ ಬೆಂಗಳೂರಿನ ಖಾಸಗಿ ಕಂಪನಿಯೊಂದು ಯಾಮಾರಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿನ್ನೆ(ಭಾನುವಾರ) ಬೆಳಗ್ಗೆ ತನ್ನ ಪಾಡಿಗೆ ತಾನು ಮನೆಯ ಬಳಿ ಕೆಲಸ ಮಾಡಿಕೊಂಡಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬಾತನಿಗೆ ಒಂದು ಅನಾಮಧೇಯ ಕರೆ ಬರುತ್ತದೆ. ನಾವು ವಿವೋ ಕಂಪನಿಯವರು ನಿಮ್ಮ ಮೊಬೈಲ್ ನಂಬರ್ ಗೆ ನಮ್ಮ ಕಂಪನಿಯಿಂದ ಒಂದು ಹೊಸ ಮೊಬೈಲ್ ಗಿಫ್ಟ್ ಆಗಿ ಸಿಗಲಿದೆ ಎಂದು ರೈತನಿಗೆ ಆಸೆ ಹುಟ್ಟಿಸುತ್ತಾರೆ. ಕೇವಲ 1880 ಕಟ್ಟಿದ್ರೆ ಸಾಕು ನಿಮಗೆ ಹೊಸ ಮೊಬೈಲ್ ದೊರಕಲಿದೆ ಎಂದು ತಿಳಿಸಿದ್ದಾರೆ. ಆದ್ರೆ ಇದ್ರಿಂದ ಆಸೆ ಪಟ್ಟು ಖುಷಿಯಿಂದ ರೈತ ಮಂಜುನಾಥ್ ಹೌದಾ ಒಕೆ, ಎಂದು ಒಪ್ಪಿದ್ದಾರೆ.

ಮದ್ವೆಯಾಗಿ ಮೂರೇ ದಿನಕ್ಕೆ ಮನೆ ದರೋಡೆ ಮಾಡಿ ಪರಾರಿ: ಕಿಲಾಡಿ ವಧು ಅಂದರ್

ನಂತರ ಒಂದು ಬೆಳಗ್ಗೆ 11 ಗಂಟೆ ಸುಮಾರಿಗೆ ರೈತನಿಗೆ ಅದೇ ವಿವೋ ಕಂಪನಿ ಎಂದು ವಂಚಿಸಿದ್ದ ಪೋನ್ ನಂಬರ್ ನಿಂದ ಮತ್ತೊಮ್ಮೆ‌ ಕರೆ ಬಂದಿದೆ. ನಿಮ್ಮ ಪೋನ್ ಅನ್ನು ನಾವು ಈಗಾಗಲೇ ಪೋಸ್ಟ್‌ ಮೂಲಕ ಕಳಿಸಿದ್ದೀವಿ 1880 ಕೊಟ್ಟು ಪಡೆದುಕೊಳ್ಳಿ ಎಂದಿದ್ದಾರೆ. ಇದರಿಂದ ಸಿಕ್ಕಾಪಟ್ಟೆ ಖುಷಿ ಪಟ್ಟ ರೈತ ಮಂಜುನಾಥ್ ಕೇವಲ 1800 ಕ್ಕೆ ಒಂದು ಹೊಸ ವಿವೋ ಕಂಪನಿ ಮೊಬೈಲ್ ಸಿಗುತ್ತಲ್ಲ ಎಂದು ಖುಷಿಯಿಂದಲೇ ಪೋಸ್ಟ್ ಆಫೀಸ್ ನತ್ತ ಹೆಜ್ಜೆ ಹಾಕಿದ್ದಾರೆ. ನಂತರ ಪೋಸ್ಟ್ ಮಾಸ್ಟರ್ ಕೂಡ ನಿಮಗೊಂದು ಪಾರ್ಸಲ್ ಬಂದಿದೆ ಎಂದು ತಿಳಿಸಿದ್ದಾರೆ. ಹೌದು ನನ್ನದೇ ಮೊಬೈಲ್ ಅದು ಎಂದು ಪಾರ್ಸಲ್  ರಿಸೀವ್ ಮಾಡಿಕೊಂಡಿದ್ದಾನೆ.

ಖುಷಿಯಿಂದಲೇ‌ ಪ್ಯಾಕಿಂಗ್ ಆಗಿರೋ ಮೊಬೈಲ್ ಬಾಕ್ಸ್ ಅನ್ನು ತೆಗೆದುಕೊಂಡು ಮನೆಗೆ ಬಂದು ಕುಟುಂಬಸ್ಥರೊಂದಿಗೆ ಓಪನ್ ಮಾಡಿದಾಗ ರೈತನಿಗೆ ಶಾಕ್ ಕೊಟ್ಟಿದ್ರು ಖದೀಮರು. ಮೊಬೈಲ್ ಪೋನ್ ಬದಲಾಗಿ ಒಂದು ಕವರ್ ನಲ್ಲಿ ಅರ್ಧ ಕೆಜಿಯಷ್ಟು ಸೋನ್ ಪಾಪಡಿ ಹಾಗೂ ಒಂದು ಸಿಂಗಲ್ ಏರ್ ಫೋನ್ ಇಟ್ಟು ಮಂಜುನಾಥ್ ಗೆ ಯಾಮಾರಿಸಿದ್ದಾರೆ. ಇದ್ರಿಂದ ದಿಗ್ಬ್ರಮೆಗೊಂಡಿರೋ ರೈತನ ಕುಟುಂಬ ಮೋಸ ಮಾಡಿದವರ ವಿರುದ್ದ ಹಿಡಿಶಾಪ ಹಾಕ್ತಿದ್ದಾರೆ.

ಬೆಂಗಳೂರಿನ ಆಕಾಂಕ್ಷ ಮಾರ್ಕೆಟಿಂಗ್ ವಜರಹಳ್ಳಿ ನೆಲಮಂಗಲ ವಿಳಾಸದಿಂದ ರೈತ ಮಂಜುನಾಥ್ ಗೆ ವಂಚನೆ ಮಾಡಲಾಗಿದೆ. ಕೂಡಲೇ ಪೋನ್ ಬಂದಿದ್ದ ನಂಬರ್ ಗೆ ಕರೆ ಮಾಡಿ ಮೋಸ ಮಾಡಿದ್ದವರಿಗೆ ರೈತ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾನೆ. ಆ ವೇಳೆ ಇಲ್ಲ ನಿಮ್ಮ‌ ಮೊಬೈಲ್‌ ಇನ್ನೊಂದು ಎರಡು ದಿನಗಳಲ್ಲಿ ಬರುತ್ತದೆ ಎಂದು ಪುನಃ ಖದೀಮರು ಸುಳ್ಳು ಹೇಳಿದ್ದಾರೆ. ಇದ್ರಿಂದ ಆಕ್ರೋಶಗೊಂಡ ರೈತ ನಾನು ಪೊಲೀಸ್ ಗೆ ದೂರು ನೀಡ್ತೀನಿ ನನ್ನ ಹಣ ವಾಪಾಸ್ ಕೊಟ್ರೆ ಸರಿ ಎಂದು ಅವಾಜ್ ಹಾಕಿದ್ದಕ್ಕೆ ಕೂಡಲೇ ಫೋನ್ ಕಟ್ ಮಾಡಿದ್ದಾರೆ. ನಂತರ ಆ ರೈತನ ಕರೆಯನ್ನೇ ಸ್ವೀಕರಿಸದೇ ಮೋಸ ಮಾಡ್ತಿದ್ದಾರೆ ಎಂದು ಮಂಜುನಾಥ್ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

click me!