ಪೇ ಮಾಡಿದ್ದು ₹2, ಕಟ್ ಆಗಿದ್ದು ಬರೋಬ್ಬರಿ ₹56000! ಸೈಬರ್ ಖದೀಮರು ಮಹಿಳೆಗೆ ವಂಚಿಸಿದ್ದು ಹೇಗೆ?

By Ravi JanekalFirst Published Apr 1, 2024, 11:29 PM IST
Highlights

ಪಾರ್ಸೆಲ್‌ ರಿಸೀವ್ ಮಾಡಲು ಎರಡು ರೂಪಾಯಿ ಯುಪಿಐ ಮಾಡುವಂತೆ ಹೇಳಿ ಸೈಬರ್ ವಂಚಕರು ಮಹಿಳೆಯೋರ್ವಳಿಗೆ ಬರೋಬ್ಬರಿ 56 ಸಾವಿರ ರೂಪಾಯಿ ವಂಚಿಸಿದ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಏ.1): ಮೊದಲೆಲ್ಲ ಕಷ್ಟಪಟ್ಟು ದುಡಿದ ನಗದು ಹಣ ಮನೆಯಲ್ಲಿಡುತ್ತಿದ್ದರಿಂದ ರಾತ್ರಿವೇಳೆ ಕಳ್ಳರ ಕಾಟ ವಿಪರೀತವಾಗಿತ್ತು. ದುಡಿದ ಹಣ ಕಾಪಾಡಿಕೊಳ್ಳುವುದೇ ಚಿಂತೆಯಾಗಿತ್ತು. ಆದರೀಗ ಮೊದಲಿನಂತೆ ಮನೆಯಲ್ಲಿ ಹಣವಿಡುವುದಿಲ್ಲ. ಬ್ಯಾಂಕ್ ಅಕೌಂಟ್‌ ನಲ್ಲಿ ಇಡುತ್ತೇವೆ. ಬ್ಯಾಂಕ್‌ನಿಂದ ಹಣ ಕದಿಯುವುದು ಸುಲಭವಲ್ಲ. ಆದರೆ ಯಾವಾಗ ಮೊಬೈಲ್ ಕ್ರಾಂತಿಯಾಗಿ ಬ್ಯಾಂಕಿಂಗ್ ಸಹ ಮೊಬೈಲ್‌ನಲ್ಲಿ ಬಳಕೆ ಮಾಡಲು ಸಾಧ್ಯವಾಯಿತೋ ಆಗಿನಿಂದ ಮನೆಗಳ್ಳರ ಕಾಟ ತಪ್ಪಿ ಸೈಬರ್ ಕಳ್ಳರ ಹೊಸ ಕಾಟ ಶುರುವಾಗಿದೆ.

ಇಂದು ಪ್ರತಿಯೊಬ್ಬರ ಮೊಬೈಲ್ನಲ್ಲಿ ಬ್ಯಾಂಕಿಂಗ್ ಸೇವೆ ಲಭ್ಯವಾಗಿದೆ. ಏನೇ ಖರೀದಿ ಮಾಡಿದರೂ ಫೋನ್‌ ಪೇ ಮೂಲಕ ಮೊಬೈಲ್‌ನಿಂದ ಕೊಡು ಕೊಳ್ಳುವಿಕೆಯ ವ್ಯವಹಾರ ಮಾಡಲಾಗುತ್ತಿದೆ. ಫೋನ್‌ಪೇ ಮಾಡುವಾಗ ಸ್ವಲ್ಪ ಯಾಮಾರಿದರೂ ಅಷ್ಟು ಹಣ ಸೈಬರ್ ವಂಚಕರ ಪಾಲಾಗುತ್ತದೆ ಎಂಬುದಕ್ಕೆ ಇಲ್ಲೊಂದು ವಂಚನೆ ಪ್ರಕರಣ ಎಚ್ಚರಿಕೆ ಗಂಟೆಯಾಗಿದೆ.

ವ್ಯಾಟ್ಸ್ಆ್ಯಪ್ ಕರೆ ಮೂಲಕ ವಂಚನೆ ಜಾಲ ಬಯಲು, ಮೊಬೈಲ್ ಬಳಕೆದಾರರಿಗೆ ಸರ್ಕಾರದ ಅಲರ್ಟ್!

ಪಾರ್ಸೆಲ್‌ ರಿಸೀವ್ ಮಾಡಲು ಎರಡು ರೂಪಾಯಿ ಯುಪಿಐ ಮಾಡುವಂತೆ ಹೇಳಿ ಸೈಬರ್ ವಂಚಕರು ಮಹಿಳೆಯೋರ್ವಳಿಗೆ ಬರೋಬ್ಬರಿ 56 ಸಾವಿರ ರೂಪಾಯಿ ವಂಚಿಸಿದ ಘಟನೆ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಧುರಿ ಜೈಪುರ್, ವಂಚನೆಗೊಳಗಾದ ಮಹಿಳೆ. ಸೈಬರ್ ವಂಚಕರು ಮಹಿಳೆಯ ನಂಬರ್ ಕಲೆಕ್ಟ್ ಮಾಡಿದ್ದಾರೆ. ಬಳಿಕ ಪಾರ್ಸೆಲ್ ರಿಸೀವ್ ಮಾಡಲು ಎರಡು ರೂಪಾಯಿ ಯುಪಿಐ ಮಾಡುವಂತೆ ಹೇಳಿದ್ದಾರೆ. ವಂಚಕರ ಮಾತು ನಂಬಿದ ಮಹಿಳೆ ಎರಡು ರೂಪಾಯಿ ಯುಪಿಐ ಮಾಡಿದ್ದಾರೆ. ಪೇ ಮಾಡಿದ ಬಳಿಕ ಪಾರ್ಸೆಲ್ ಈಗ ಬರಬಹುದು, ಆಗ ಬರಬಹುದು ಎಂದು ಕಾದಿದ್ದ ಮಹಿಳೆಗೆ ಬಂದಿದ್ದು ಪಾರ್ಸೆಲ್ ಅಲ್ಲ, ಮತ್ತೊಂದು ಕಾಲ್!

ಫ್ರಾಡ್ ಮಾನಿಟರಿಂಗ್ ಸೆಲ್ ಹೆಸರಿನಲ್ಲಿ ಮಹಿಳೆಗೆ ಕಾಲ್ ಮಾಡಿದ ವಂಚಕರು. ನಿಮ್ಮ ಖಾತೆಯಲ್ಲಿ 56 ಸಾವಿರ ರೂಪಾಯಿ ಕಟ್ ಆಗಿದೆ ಎಂದು ಮಹಿಳೆಗೆ ಅಲರ್ಟ್ ಮಾಡಿದ್ದಾರೆ. ಶಾಕ್‌ಗೆ ಒಳಗಾದ ಮಹಿಳೆ ಅಲರ್ಟ್ ಕಾಲ್ ಎಂದು ಬ್ಯಾಂಕ್ ಖಾತೆ ಚೆಕ್ ಮಾಡಿದ್ದಾರೆ. ಖಾತೆಯಲ್ಲಿ ಹಣ ಕಟ್ ಆಗಿರುವುದು ಬೆಳಕಿಗೆ ಬಂದಿದೆ. ಸೈಬರ್ ವಂಚಕರು ಕಾಲ್ ಕಟ್ ಮಾಡುತ್ತಿದ್ದಂತೆ 56 ಸಾವಿರ ರೂಪಾಯಿ ಹಣವೂ ಕಟ್ ಆಗಿದೆ. ಯುಪಿಎ ಮೂಲಕ ಎರಡು ರೂಪಾಯಿ ಫೋನ್‌ ಪೇ ಮಾಡಿಸಿಕೊಂಡು ಮಹಿಳೆಗೆ ವಂಚಿಸಿರುವ ಖತರ್ನಾಕ್ ವಂಚಕರು. 

 

ಕಾಂಬೋಡಿಯಾದಲ್ಲಿ 5000 ಭಾರತೀಯರ ಕೂಡಿಹಾಕಿ ಸೈಬರ್‌ ವಂಚನೆ..!

ಸದ್ಯ ಹಣ ಕಳೆದುಕೊಂಡು ಕಂಗಲಾಗಿರುವ ಮಹಿಳೆ. ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿರುವ ಪೊಲೀಸರು. ಒಟ್ಟಿನಲ್ಲಿ ಮೊಬೈಲ್‌ ಬ್ಯಾಂಕಿಂಗ್, ಅಪರಿಚಿತರಿಗೆ ಫೋನ್‌ಪೇ ಮಾಡುವುದು ಕೂಡ ಇದೀಗ ಅಪಾಯಕಾರಿ. ಸೈಬರ್ ವಂಚಕರು ಯಾವಾಗ ಯಾರ ಹೆಸರಲ್ಲಿ ಕಾಲ್ ಮಾಡುತ್ತಾರೋ ತಿಳಿಯದು. ಆದಷ್ಟು ಅಪರಿಚಿತ ಕರೆಗಳನ್ನ ಸ್ವೀಕರಿಸದಿರುವುದು. ಒಟಿಪಿ ಶೇರ್ ಮಾಡದೆ ಇರುವುದು ಒಳಿತು.

click me!