ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ ಮೇಲ್: ಬೆದರಿಕೆ ಹಾಕಿದಾತನ ಹತ್ಯೆಗೈದ ದಂಪತಿ!

By Web DeskFirst Published Nov 21, 2019, 7:40 AM IST
Highlights

ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವನ ಹತ್ಯೆಗೈದ ದಂಪತಿ!| ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್‌ ಮೇಲೆ ಮಾಡುತ್ತಿದ್ದ| ಹೊಡೆದು ಹತ್ಯೆಗೈದು ಗೋಣಿಚೀಲದಲ್ಲಿ ಕಟ್ಟಿಎಸೆದಿದ್ದ ಸತಿ ಪತಿ

ಬೆಂಗಳೂರು[ನ.21]: ವ್ಯಕ್ತಿ ಕೊಂದು ಶವವನ್ನು ಗೋಣಿ ಚೀಲದಲ್ಲಿ ಬಿಸಾಡಿ ಹೋಗಿದ್ದ ಕೊಲೆ ಪ್ರಕರಣದ ರಹಸ್ಯ ಭೇದಿಸಿರುವ ನಂದಿನಿ ಲೇಔಟ್‌ ಪೊಲೀಸರು ಆರೋಪಿ ದಂಪತಿಯನ್ನು ಸೆರೆ ಹಿಡಿದಿದ್ದಾರೆ.

ಲಗ್ಗೆರೆ ನಿವಾಸಿಗಳಾದ ದಂಪತಿ ಮಂಜು ಅಲಿಯಾಸ್‌ ಮಗ (35) ಮತ್ತು ಈತನ ಪತ್ನಿ ಸಾವಿತ್ರಿ (28) ಬಂಧಿತರು. ಆರೋಪಿಗಳು ನ.15ರಂದು ಸಂತೋಷ್‌ನನ್ನು ಹತ್ಯೆ ಮಾಡಿದ್ದರು.

ದಂಪತಿ ಮೂಲತಃ ತುಮಕೂರಿನ ಹುಲಿಯೂರು ದುರ್ಗದವರಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮಂಜು ಆಟೋ ಚಾಲಕರಾಗಿದ್ದು, ಚೀಟಿ ವ್ಯವಹಾರ ಕೂಡ ನಡೆಸುತ್ತಿದ್ದ. ದಂಪತಿಗೆ ಮೃತ ಸಂತೋಷ್‌ ಸ್ನೇಹಿತನಾಗಿದ್ದು, ಆಗ್ಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಮಂಜು ಬಳಿ ಸಂತೋಷ್‌ ಚೀಟಿ ಕೂಡ ಹಾಕಿದ್ದ. ದಂಪತಿಗೆ ಗೊತ್ತಿಲ್ಲದಂತೆ ಸಂತೋಷ್‌ ಅವರ ಮನೆಯ ಸ್ನಾನದ ಗೃಹ ಮತ್ತು ಮಲಗುವ ಕೊಠಡಿಯಲ್ಲಿ ಕ್ಯಾಮರಾ ಇಟ್ಟಿದ್ದ. ಸೆರೆ ಹಿಡಿಯಲಾಗಿದ್ದ ದಂಪತಿ ಖಾಸಗಿ ವಿಡಿಯೋವನ್ನು ಅವರಿಗೆ ತೋರಿಸಿ ಬೆದರಿಸಿದ್ದ. ಹಣ ಕೊಡದಿದ್ದರೆ ಇತರರಿಗೆ ವಿಡಿಯೋ ತೋರಿಸುವುದಾಗಿ ಬೆದರಿಕೆವೊಡ್ಡಿದ್ದ. ಮರ್ಯಾದೆಗೆ ಅಂಜಿದ ದಂಪತಿ ಕಳೆದ ನಾಲ್ಕೈದು ವರ್ಷಗಳಿಂದ ಆರೋಪಿಗೆ ಸುಮಾರು ನಾಲ್ಕು ಲಕ್ಷ ಹಣ ನೀಡಿದ್ದರು.

ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನನ್ನು ಕೊಂದ ಮೈದುನ: ವಿಷ ಕುಡಿದು ಸಾವನ್ನಪ್ಪಿದ ಅತ್ತಿಗೆ

ಅಲ್ಲದೆ, ಮಂಜು ಪತ್ನಿ ಬಳಿ ಆರೋಪಿ ಅನುಚಿತವಾಗಿ ವರ್ತಿಸುತ್ತಿದ್ದ. ಆತನ ವರ್ತನೆಯಿಂದ ಬೇಸತ್ತ ದಂಪತಿ ಸಂತೋಷ್‌ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು. ಚೀಟಿ ವ್ಯವಹಾರದ ಬಗ್ಗೆ ಮಾತನಾಡಲು ಸಂತೋಷ್‌ನನ್ನು ನ.15ರಂದು ರಾತ್ರಿ ಮನೆಗೆ ಕರೆಯಿಸಿಕೊಂಡಿದ್ದರು. ಮನೆಗೆ ಬಂದ ಸಂತೋಷ್‌ಗೆ ಮೊದಲೇ ಸಂಚು ರೂಪಿಸಿದಂತೆ ಕೊಡಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದರು. ಬಳಿಕ ಶವವನ್ನು ಚೀಲದಲ್ಲಿ ಹಾಕಿ ಯಾರಿಗೂ ಗೊತ್ತಾಗಬಾರದೆಂದು ಲಗ್ಗೆರೆಯ ಮೌಂಟ್‌ ಸೆನೋರಿಯಾ ಶಾಲಾ ಕಾಂಪೌಂಡ್‌ ಬಳಿ ಬಿಸಾಕಿ ಹೋಗಿದ್ದರು ಎಂದು ಪೊಲೀಸರು ತಿಳಿಸಿದರು.

ಆರೋಪಿ ಮಂಜು ಮೃತನ ಶವವನ್ನು ತನ್ನ ಆಟೋದಲ್ಲಿಯೇ ಹಾಕಿಕೊಂಡು ಬಂದು ಶಾಲಾ ಕಾಂಪೌಂಡ್‌ ಬಳಿ ಬಿಸಾಕಿ ಹೋಗಿದ್ದ. ಸ್ಥಳೀಯ ಸಿಸಿಟಿವಿಗಳಲ್ಲಿ ಆಟೋ ಬಂದು ಹೋಗುವುದು ಮತ್ತು ಮನೆ ಬಳಿಯ ಸಿಸಿಟಿವಿಯಲ್ಲಿ ಸಂತೋಷ್‌ ದಂಪತಿಗೆ ಮನೆಗೆ ಹೋಗಿದ್ದು ಪತ್ತೆಯಾಯಿತು. ಈ ಮೂಲಕ ಆರೋಪಿ ದಂಪತಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಮೃತ ಸಂತೋಷನ ವಿಕೃತ!

ಕೊಲೆಯಾಗಿರುವ ಸಂತೋಷ್‌ನನ್ನು 2013ರಲ್ಲಿ ರಾಜಗೋಪಾಲನಗರ ಪೊಲೀಸರು ಪೋಕ್ಸೋ ಪ್ರಕರಣದಲ್ಲಿ ಬಂಧಿಸಿದ್ದರು. ಸಂತೋಷ್‌ ಪರಿಚಯಸ್ಥರ ಮನೆಗೆ ಹೋಗಿ ಇದೇ ರೀತಿ ಬಾಲಕಿಯ ಖಾಸಗಿತನವನ್ನು ವಿಡಿಯೋ ಮಾಡಿದ್ದ. ವಿಡಿಯೋ ತೋರಿಸಿ ಬಾಲಕಿಯನ್ನು ನನ್ನ ಜತೆ ವಿವಾಹ ಮಾಡಿಸಿಕೊಡುವಂತೆ ಬೆದರಿಕೆವೊಡ್ಡಿದ್ದ. ಈ ಸಂಬಂಧ ಬಾಲಕಿ ತಾಯಿ ಠಾಣೆಗೆ ದೂರು ನೀಡಿದ್ದರು. ಪೋಕ್ಸೋ ಕಾಯ್ದೆಯಡಿ ಸಂತೋಷ್‌ನನ್ನು ಬಂಧಿಸಲಾಗಿತ್ತು. ಆತ ಆರು ತಿಂಗಳು ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದ. ಬಳಿಕ ತಾಯಿ ಆತನಿಗೆ ಬುದ್ಧಿವಾದ ಹೇಳಿ ತನ್ನಪುತ್ರಿಯನ್ನು ಕೊಟ್ಟು ಸಂತೋಷ್‌ನೊಂದಿಗೆ ವಿವಾಹ ಮಾಡಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.

ಪತ್ನಿಯ ರಾಸಲೀಲೆ ಚಿತ್ರೀಕರಿಸಿ ವಿಚ್ಛೇದನ ಪಡೆದ ಪತಿ!

ಡಿಸಿಪಿ ಮನವಿ!

ನಿಮ್ಮ ಖಾಸಗಿ ಬದುಕಿನ ಆಡಿಯೋ ಅಥವಾ ವಿಡಿಯೋ, ಸಂದೇಶಗಳನ್ನು ಬಳಸಿ ಬೆದರಿಕೆವೊಡ್ಡಿದರೆ ಸಾರ್ವಜನಿಕರು ಅಗತ್ಯವಿಲ್ಲ. ಇಂತಹ ವಿಚಾರಗಳ ಬಗ್ಗೆ ಕೂಡಲೇ ಸಂಬಂಧಪಟ್ಟಪೊಲೀಸರಿಗೆ ಮಾಹಿತಿ ನೀಡಿ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಂಬಂಧಪಟ್ಟವಿಡಿಯೋವನ್ನು ನಾಶಗೊಳಿಸಲಾಗುವುದು. ಹೆದರಿ ಹಣ ಕೊಡುವುದು ಬೇಸತ್ತು ಕೊಲೆ ಪ್ರಯತ್ನಗಳಿಗೆ ಕೈ ಹಾಕುವುದು ಸರಿಯಲ್ಲ. ಮೂಲದಲ್ಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಡಿಸಿಪಿ ಶಶಿಕುಮಾರ್‌ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

click me!