2013ರಲ್ಲಿ ನಡೆದಿದ್ದ ಬೆಚ್ಚಿ ಬೀಳಿಸುವ ಎಟಿಎಂ ಹಲ್ಲೆ ಕೇಸ್ : ದೋಷಿಗೆ ಶಿಕ್ಷೆ

By Kannadaprabha NewsFirst Published Feb 2, 2021, 11:01 AM IST
Highlights

ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿ ಮಧುಕರ್‌ ರೆಡ್ಡಿನನ್ನು ನಗರದ 65ನೇ ಸೆಷನ್ಸ್‌ ನ್ಯಾಯಾಲಯ ದೋಷಿ ಪ್ರಕಟಿಸಿದೆ.
 

ಬೆಂಗಳೂರು (ಫೆ.02):  ಇಡೀ ದೇಶವನ್ನು ತಲ್ಲಣಗೊಳಿಸಿದ್ದ ಎಟಿಎಂನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣದ ಆರೋಪಿ ಮಧುಕರ್‌ ರೆಡ್ಡಿಯನ್ನು ನಗರದ 65ನೇ ಸೆಷನ್ಸ್‌ ನ್ಯಾಯಾಲಯ ದೋಷಿ ಪ್ರಕಟಿಸಿದೆ.

ಎಂಟು ವರ್ಷದ ಹಿಂದೆ ನಗರದ ಕಾರ್ಪೊರೇಷನ್‌ ವೃತ್ತದ ಎಟಿಎಂ ಕೇಂದ್ರದಲ್ಲಿ ಮಹಿಳಾ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಅವರ ಮೇಲೆ ಮಧುಕರ್‌ ರೆಡ್ಡಿ ಭೀಕರ ಹಲ್ಲೆ ನಡೆಸಿದ ಆರೋಪ ಹೊತ್ತಿದ್ದ. ಈ ಪ್ರಕರಣ ಸಂಬಂಧ ಸುದೀರ್ಘ ವಿಚಾರಣೆ ನಡೆಸಿರುವ 65ನೇ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಅವರು, ಮಧುಕರ್‌ ರೆಡ್ಡಿಯನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ಪ್ರಮಾಣವನ್ನು ಬುಧವಾರ ಪ್ರಕಟಿಸುವುದಾಗಿ ತಿಳಿಸಿದರು.

ಪ್ರಕರಣ ಸಂಬಂಧ ಆರೋಪಿಯ ವಿರುದ್ಧ ತನಿಖಾಧಿಕಾರಿಗಳು ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಅಂಶಗಳನ್ನು ಪರಿಗಣಿಸಿರುವ ನ್ಯಾಯಾಧೀಶರು ಆರೋಪಿಯನ್ನು ದೋಷಿ ಎಂದು ಘೋಷಣೆ ಮಾಡಿದ್ದಾರೆ. ಪ್ರಾಸಿಕ್ಯೂಷನ್‌ ಪರವಾಗಿ ಎಂ.ವಿ.ತ್ಯಾಗರಾಜ್‌ ವಾದ ಮಂಡಿಸಿದ್ದರು.

ಆರೋಪಿ ಪತ್ತೆಗೆ ಲಕ್ಷಾಂತರ ರುಪಾಯಿ ವೆಚ್ಚ:  ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಜೆ ಪಾರ್ಕ್ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಸಾಕಷ್ಟುಹುಡುಕಾಟ ನಡೆಸಿದ್ದರು. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಶೋಧ ಕಾರ್ಯ ನಡೆಸಿದ್ದರು.  4 ಲಕ್ಷ ಖರ್ಚು ಮಾಡಿ ಪ್ರಯತ್ನ ನಡೆಸಿದರೂ ಆರೋಪಿಯ ಹೆಸರು, ಗುರುತು ಯಾವುದೂ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಈ ಹಿಂದೆ ‘ಸಿ’ ರಿಪೋರ್ಟ್‌ ಸಲ್ಲಿಸಿದ್ದರು. ಆರೋಪಿ ಪತ್ತೆ ಹಚ್ಚುವ ಹಠಕ್ಕೆ ಬಿದ್ದಿದ್ದ ಪೊಲೀಸ್‌ ಇಲಾಖೆಯು ಸುಳಿವು ನೀಡಿದವರಿಗೆ  12 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

ಎಟಿಎಂ ಎದುರು ಮಾಟಗಾತಿ ಸುಂದರಿ.. ಮಂತ್ರಕ್ಕೆ ಬಂದಿದ್ದು 20 ಲಕ್ಷ!

ಕೋರ್ಟ್‌ ಎದುರು ತಪ್ಪೊಪ್ಪಿಕೊಂಡಿದ್ದ :  ಕೋರ್ಟ್‌ ವಿಚಾರಣೆ ವೇಳೆ ಜ್ಯೋತಿ ಉದಯ್‌ ಅವರ ಮೇಲೆ ಹಲ್ಲೆ ನಡೆಸಿದ್ದು ನಾನೇ ಎಂದು ಒಪ್ಪಿಕೊಂಡಿದ್ದ ರೆಡ್ಡಿ, ಈ ಪ್ರಕರಣದಲ್ಲಿ ವಿಚಾರಣೆಯ ಅಗತ್ಯವಿಲ್ಲ. ಇಂದೇ ನನ್ನ ತಪ್ಪಿಗೆ ಶಿಕ್ಷೆ ನೀಡಿ. ನನ್ನ ಪರವಾಗಿ ಯಾವುದೇ ವಕೀಲರು ವಾದ ಮಂಡಿಸುವುದು ಬೇಡ. ನನಗೆ ಹೆಂಡತಿ ಮಕ್ಕಳಿದ್ದು, ಆದಷ್ಟುಬೇಗ ವಾಪಸು ಹೋಗಬೇಕು. ಹೀಗಾಗಿ ಕೂಡಲೇ ನನಗೆ ಶಿಕ್ಷೆ ನೀಡಿ ಎಂದು ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದ.

ವೃತ್ತಿಪರ ಅಪರಾಧಿ:  2017ರ ಫೆಬ್ರವರಿ ಕೊನೆ ವಾರದಲ್ಲಿ ಆಂಧ್ರದ ಮದನಪಲ್ಲಿ ಠಾಣೆ ಪೊಲೀಸರು ಮಧುಕರ್‌ ರೆಡ್ಡಿಯನ್ನು ಕೊಲೆ ಪ್ರಕರಣವೊಂದರಲ್ಲಿ ಬಂಧಿಸಿದ್ದರು. ಆಂಧ್ರ ಮತ್ತು ತೆಲಂಗಾಣದಲ್ಲಿ ನಡೆದ ಮೂರು ಕೊಲೆ ಮತ್ತು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮಧುಕರ್‌, ಹೈದ್ರಾಬಾದ್‌, ಕಡಪ, ಅನಂತಪುರ, ಕೇರಳ ಹೀಗೆ ಐದಾರು ತಿಂಗಳಿಗೆ ಒಮ್ಮೆ ಸ್ಥಾನ ಬದಲಿಸುತ್ತಿದ್ದ. ಅಂತಿಮವಾಗಿ ಮದನಪಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದ. ಅನಂತರ ರೆಡ್ಡಿಯನ್ನು ರಾಜ್ಯದ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

"

ಹಣಕ್ಕಾಗಿ ಕೃತ್ಯ :  2013ರ ನವೆಂಬರ್‌ 19ರ ಬೆಳಗ್ಗೆ 7ರ ಸುಮಾರಿಗೆ ನಗರದ ಕಾರ್ಪೊರೇಷನ್‌ ಸರ್ಕಲ್‌ನಲ್ಲಿರುವ ಬ್ಯಾಂಕ್‌ ಎಟಿಎಂನಲ್ಲಿ ಮಗಳ ಜನ್ಮ ದಿನಾಚರಣೆಗಾಗಿ ಹಣ ತೆಗೆದು ಕೊಳ್ಳಲು ಜ್ಯೋತಿ ಉದಯ್‌ ಎಟಿಎಂ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಒಳ ನುಗ್ಗಿದ್ದ ಆರೋಪಿ ಜ್ಯೋತಿ ಉದಯ್‌ ಮೇಲೆ ಹಣ ನೀಡುವಂತೆ ಬೆದರಿಸಿದ್ದ. ಇದಕ್ಕೆ ನಿರಾಕರಿಸಿದಾಗ ಭೀಕರವಾಗಿ ಮಚ್ಚಿನಿಂದ ಹಲ್ಲೆ ನಡೆಸಿ, ಪರಾರಿಯಾಗಿದ್ದ. ಈ ದೃಶ್ಯಗಳು ಎಟಿಎಂನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸುದೀರ್ಘ ಚಿಕಿತ್ಸೆ ನಂತರ ಜ್ಯೋತಿ ಉದಯ್‌ ಗುಣಮುಖರಾಗಿದ್ದರು.

click me!