
ಬೆಂಗಳೂರು (ಫೆ.05): ಮನೆಯಲ್ಲಿ ಮದುವೆಯಿದೆ ಎಂದು ಹಳೆಯ ಚಿನ್ನದ ಸರವನ್ನು ಮಾರಾಟಕ್ಕೆ ತಂದಿದ್ದ ಗ್ರಾಹಕರಿಂದ ಬರೋಬ್ಬರಿ ೮೦ ಗ್ರಾಂ ಚಿನ್ನದ (ಲಕ್ಷಾಂತರ ರೂ.) ಹಣವನ್ನು ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಬಂಗಾರದ ಅಂಗಡಿ ಮಾಲೀಕನಿಗೆ ಅಜ್ಜಿ ಗ್ಯಾಂಗ್‌ವೊಂದು ನಕಲಿ ಚಿನ್ನ ಕೊಟ್ಟು ಯಾಮಾರಿಸಿದ ಘಟನೆ ಬೆಂಗಳೂರಿನ ಕೆಂಪಾಪುರ ಅಗ್ರಹಾರದಲ್ಲಿ ನಡೆದಿದೆ. ನಕಲಿ ಚಿನ್ನವನ್ನು ಕೊಟ್ಟು ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ಅಸಲಿ ಚಿನ್ನಾಭರಣಗಳನ್ನು ಖರೀದಿಸಿ ಟೋಪಿ ಹಾಕಿದ್ದಾರೆ.
ಅಮೃತಹಳ್ಳಿಯ ಧನಲಕ್ಷ್ಮಿ ಜ್ಯೂವಲರ್ಸ್ ನಲ್ಲಿ 10 ಲಕ್ಷ ಮೌಲ್ಯದ ಚಿನ್ನಾಭರಣ ಶಾಪಿಂಗ್ ಮಾಡಿದ ಅಜ್ಜಿ ಗ್ಯಾಂಗ್ ನಕಲಿ ಚಿನ್ನವನ್ನು ಕೊಟ್ಟು ಅಂಗಡಿ ಮಾಲೀಕನಿಗೆ ಯಾಮಾರಿಸಿದ ಘಟನೆ ನಡೆದಿದೆ. ನನ್ನ ಮಗಳ ಮದುವೆ ಇದೆ. ನನ್ನ ತಾಯಿಯ ಹಳೆ ಆಭರಣ ಕೊಟ್ಟು ಹೊಸ ಒಡವೆ ಖರೀದಿ ಮಾಡಬೇಕು ಎಂದು ಅಜ್ಜಿಯ ಮಗ ರಾಹುಲ್ ಹೇಳಿಕೊಂಡಿದ್ದಾನೆ. ನಾವು ಇಲ್ಲಿಯೇ ನಾಗವಾರದ ನಿವಾಸಿಗಳು ಎಂದು ಅಜ್ಜಿಯನ್ನು ತೋರಿಸಿದ್ದಾನೆ. ನಂತರ ಅಜ್ಜಿ ತನ್ನ ಬ್ಯಾಗಿನಿಂದ 240 ಗ್ರಾಂ. ತೂಕದ ಬಂಗಾರದ ಗುಂಡಿನ ಸರ ತೆಗೆದಿದ್ದಾರೆ. ಆ ಸರವನ್ನು ಅಂಗಡಿ ಮಾಲೀಕನಿಗೆ ಕೊಟ್ಟಿದ್ದಾರೆ.
Gold Silver Price Today: ಭಾನುವಾರ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೇಗಿದೆ ನೋಡಿ..
ಅಸಲಿ ಚಿನ್ನ ತೋರಿಸಿ, ನಕಲಿ ಚಿನ್ನ ಕೈಗಿಟ್ಟರು: ಅಂಗಡಿ ಮಾಲೀಕ ಚಿನ್ನದ ಸರದಲ್ಲಿನ ಒಂದು ಗುಂಡು ಚೆಕ್ ಮಾಡಿದಾಗ ಅಸಲಿ ಚಿನ್ನ ಅನ್ನೋದು ತಿಳಿದು ಬಂದಿದೆ. ಆಗ, ನಾಳೆ ಬಂದು ಚಿನ್ನ ಖರೀದಿ ಮಾಡುತ್ತೇವೆ ಎಂದು ಅಜ್ಜಿ ಹಾಗೂ ರಾಹುಲ್ ಅಲ್ಲಿಂದ ಚಿನ್ನದ ಸರವನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾರೆ. ಮರುದಿನ ನಕಲಿ ಗುಂಡಿನ ಸರ ತೆಗೆದುಕೊಂಡು ಬಂದು ಮಾಲೀಕನಿಗೆ ನೀಡಿದ್ದಾರೆ. ನಿನ್ನೆ ಚೆಕ್ ಮಾಡಿದ ಸರ ಅಲ್ಲವೇ ಎಂದು ಅಂಗಡಿ ಮಾಲೀಕ ಮೋಸ ಹೋಗಿ ಅದನ್ನು ತೂಕ ಹಾಕಿ ತೆಗೆದುಕೊಂಡಿದ್ದಾನೆ. ನಂತರ, ಹಳೆಯ ಚಿನ್ನದ ಮೌಲ್ಯಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಅನುಮತಿಯನ್ನೂ ನೀಡಿದ್ದಾರೆ.
10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿ: ಚಿನ್ನದ ಸರವನ್ನು ತೆಗೆದುಕೊಂಡು ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನವನ್ನು ಖರೀದಿಸಲು ಅನುಮತಿ ನೀಡಿದ್ದಾರೆ. ತಕ್ಷಣವೇ ವಂಚಕ ಅಜ್ಜಿ ಗ್ಯಾಂಗ್ ಧನಲಕ್ಷ್ಮೀ ಜ್ಯುವೆಲ್ಲರ್ಸ್‌ನಲ್ಲಿ ಉಂಗುರ, ಓಲೆ, ಚೈನ್ ಸೇರಿದಂತೆ 168 ಗ್ರಾಂ ತೂಕದ ಅಸಲಿ ಆಭರಣ ಖರೀದಿ ಮಾಡಿದ್ದಾರೆ. ಜೊತೆಗೆ, ಮಗಳು ಗಂಡನ ಮನೆಗೆ ಹೋಗುತ್ತಾಳೆ ಎಂದು ಬೆಳ್ಳಿ ದೀಪ, ಕುಂಕುಮ ಬಟ್ಟಲು, ಕಾಲ್ ಚೈನ್ ಅಂತ ಸಾಲು ಸಾಲು ಶಾಪಿಂಗ್ ಮಾಡಿದ್ದಾರೆ. ಇನ್ನು ನಕಲಿ ವಿಳಾಸ ಮತ್ತು ಮೊಬೈಲ್ ನಂಬರ್ ಕೊಟ್ಟು ಅಜ್ಜಿ ಹಾಗೂ ರಾಹುಲ್ ಅಲ್ಲಿಂದ ಹೊರಟು ಹೋಗಿದ್ದಾರೆ.
ಚಿಕ್ಕಪೇಟೆಯಲ್ಲಿ ನಕಲಿ ಚಿನ್ನವೆಂದು ಪತ್ತೆ: ಇದಾದ ಬಳಿಕ ಚಿನ್ನದ ಅಂಗಡಿ ಮಾಲೀಕ ಚಿಕ್ಕಪೇಟೆಗೆ ಸರ ಮಾರಾಟಕ್ಕೆ ಬಂದಾಗ ಇದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ತಕ್ಷಣವೇ ಜ್ಯುವೆಲರ್ಸ್ ಮಾಲೀಕ ಓಂ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ, ಇಲ್ಲಿ ಚಿನ್ನದ ಅಂಗಡಿ ಮಾಲೀಕರಿಗೇ ಯಾಮಾರಿಸಿದ ಅಜ್ಜಿಗ್ಯಾಂಗ್ ಭಾರಿ ವಂಚನೆ ಮಾಡಿದ್ದು, ಚಿನ್ನದ ಅಂಗಡಿ ಮಾಲೀಕ ಬೆಸ್ತು ಬಿದ್ದಿದ್ದಾನೆ.
ಬಿಎಂಟಿಸಿ ಗುಜರಿ ವಸ್ತು ಮಾರಾಟದಲ್ಲಿ 10 ಕೋಟಿ ರೂ. ಭ್ರಷ್ಟಾಚಾರ..!: ನೋಟಿಸ್ ನೀಡಿ ಸುಮ್ಮನಾದ ನಿಗಮ
ಹಳೆಯ ಚಿನ್ನ ಕಡಿಮೆ ಬೆಲೆಗೆ ಖರೀದಿಸಲು ಹೋಗಿ ಮೋಸ: ನಮ್ಮ ಮನೆಯಲ್ಲಿ ಮಗಳ ಮದುವೆಯಿದ್ದು ಹಳೆಯ ಚಿನ್ನ ಮಾರಾಟ ಮಾಡಿ ಹೊಸ ಚಿನ್ನ ಖರೀದಿಗೆಂದು ಬಂದಿದ್ದವರ ಬಳಿ ಸುಮಾರು 240 ತೂಕ ಇದ್ದ ಹಳೆಯ ಚಿನ್ನದ ಸರವನ್ನು ನೋಡಿದ ಮಾಲೀಕ ಇದು ಹಳೆಯದಾಗಿದ್ದು, ಕರಗಿಸದರೆ ಹೆಚ್ಚು ಲಾಭ ಸಿಗುವುದಿಲ್ಲ ಎಂದು ಹೇಳುತ್ತಾನೆ. ನಿಮಗೆ ಕೇವಲ 168 ಗ್ರಾಂ ಚಿನ್ನಕ್ಕೆ ವಾಪಸ್ ಹಣ ಕೊಡುವುದಾಗಿ ಹೇಳಿದ್ದಾರೆ. ಸುಮಾರು 80 ಗ್ರಾಂ ಚಿನ್ನದ ಹಣ (ಲಕ್ಷಾಂತರ ರೂ.) ಲಾಭ ಮಾಡಿಕೊಳ್ಳಲು ಮುಂದಾಗಿದ್ದ ಅಂಗಡಿ ಮಾಲೀಕನಿಗೆ ಗ್ರಾಹಕರು ಮನೆಯಲ್ಲಿ ಕೇಳಿಕೊಂಡು ನಾಳೆ ಬರುವುದಾಗಿ ಹೇಳಿ ಹೋಗಿದ್ದಾರೆ. ನಂತರ ಮರುದಿನ ಬರುವಾಗ ನಕಲಿ ಚಿನ್ನದ ಸರವನ್ನು ತೆಗೆದು ಮಾಲೀಕನಿಗೆ ಕೊಟ್ಟು ಹಲವು ಚಿನ್ನಾಭರಣ ಖರೀದಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ