ಬೆಳಗಾವಿಯ ಕೆಎಎಸ್ ಅಧಿಕಾರಿಯ ಪತಿಯಾಗಿದ್ದ ಹಾಗೂ ಎಫ್‌ಡಿಎ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೃತದೇಹ ಇಂದು ಮಧ್ಯಾಹ್ನ ಮನೆಯಲ್ಲಿ ಪತ್ತೆಯಾಗಿದೆ.
ಬೆಳಗಾವಿ (ಫೆ.13): ಇವನು ಪ್ರಥಮ ದರ್ಜೆ ಸಹಾಯಕ. ಜೊತೆಗೆ, ಜಿಮ್ ಮಾಡಿಕೊಂಡು ದೇಹವನ್ನು ಕಟ್ಟುಮಸ್ತಾಗಿ ಬೆಳೆಸಿಕೊಂಡು ಹತ್ತು ಜನರು ಬಂದರೂ ಬಗ್ಗುಬಡಿಯುವ ಸಿನಿಮಾ ಹೀರೋ ರೀತಿ ಕಾಣುತ್ತಿದ್ದ. ಇಷ್ಟಲ್ಲದೇ ಇವನಿಗೆ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯಾಗಿರುವ ಮುದ್ದಾದ ಹೆಂಡತಿಯೂ ಇದ್ದಳು. ಆದರೆ, ಜೀವನದಲ್ಲಿ ಏನು ಕಡಿಮೆಯಾಗಿತ್ತೋ ಗೊತ್ತಿಲ್ಲ. ಇಂದು ಮಧ್ಯಾಹ್ನ ಈತನ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೆಳಗಾವಿ ನಗರದಲ್ಲಿ ಜಿಮ್ ಮಾಡುತ್ತಾ ದೇಹವನ್ನು ಹುರಿಗೊಳಿಸಿಕೊಂಡು ದಷ್ಟಪುಷ್ಟವಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೈತುಂಬಾ ಸಂಬಳ ಬರುವಂತೆ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಆಗಿ ಕೆಲಸವನ್ನೂ ಮಾಡುತ್ತಿದ್ದನು. ಅದಕ್ಕಿಂತಲೂ ಮಿಗಿಲಾಗಿ ಈತನ ಹೆಂಡತಿಯೂ ಕೂಡ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಕಾರಿಯಾಗಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರದ್ದೂ ಮುದ್ದಾದ ಜೋಡಿಯಾಗಿದೆ. ಈ ಜೋಡಿಯನ್ನು ನೋಡಿದರೆ ದೃಷ್ಟಿ ಆಗುತ್ತದೆ ಎನ್ನುವಂತೆ ಇತ್ತು. ಆದರೆ, ಜೀವನದಲ್ಲಿ ಇಬ್ಬರ ನಡುವೆ ವೈಮನಸ್ಸು ಇತ್ತೋ ಅಥವಾ ಬೇರೆ ವ್ಯಕ್ತಿಗಳಿಂದ ಸಮಸ್ಯೆ ಎದುರಾಗಿತ್ತೋ ಅಥವಾ ಆರೋಗ್ಯದಲ್ಲಿ ಯಾವುದಾದರೂ ಸಮಸ್ಯೆ ಇತ್ತೋ ಗೊತ್ತಿಲ್ಲ. ಇಂದು ಇದ್ದಕ್ಕಿದ್ದಂತೆ ಅಜಾನುಬಾಹು ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
Ramanagara: ಬ್ಯಾಂಕ್ ನೋಟಿಸ್‌ಗೆ ಹೆದರಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ: ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಎಫ್‌ಡಿಎ ಜಾಫರ್ ಫೀರ್ಜಾದೆ (39) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಾಫರ್ ಫೀರ್ಜಾದೆ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಡಿಟಿಐನಲ್ಲಿ ಎಫ್‌ಡಿಎ ತರಬೇತಿಯಲ್ಲಿದ್ದನು. ಎಫ್‌ಡಿಎ ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಬೆಂಗಳೂರಿಗೆ ತೆರಳಿದ್ದ ಪತ್ನಿ: ಇನ್ನು ಕೆಎಎಸ್ ಅಧಿಕಾರಿಯಾಗಿರುವ ಪತ್ನಿ ರೇಷ್ಮಾ ತಾಳಿಕೋಟೆ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಹಿಡಕಲ್ ಡ್ಯಾಂ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಷ್ಮಾ ತಾಳಿಕೋಟೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೆಯಲ್ಲಿ ಇವರ ಪತಿ ಜಾಫರ್ ಪಿರ್ಜಾದೆ ಸಾವನ್ನಪ್ಪಿದ್ದು, ರೇಷ್ಮಾ ತಾಳಿಕೋಟಿ ಆಗಮನಕ್ಕಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ. ಈ ಘಟನೆ ಕುರಿತಂತೆ ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.