
ಬಳ್ಳಾರಿ (ಮಾ.9): ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಗುರುಕುಲ ವಸತಿ ಶಾಲೆಯಲ್ಲಿ ಶನಿವಾರ ರಾತ್ರಿ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಹುಚ್ಚಾಟ ಮೆರೆದಿದ್ದು, ಮಲಗಿದ್ದ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ರಾಡ್‌ನಿಂದ ಏಕಾಏಕಿ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಆಂಧ್ರಪ್ರದೇಶದ ಹೊಳಲಗುಂದಿ ಮಂಡಲದ ಸಮ್ಮತಾಗೇರಿ ನಿವಾಸಿ ಡಿ.ಹೇಮಂತ್ (15) ಸಾವಿಗೀಡಾದ ವಿದ್ಯಾರ್ಥಿ. ದಾಳಿಯಲ್ಲಿ ವಸತಿ ಶಾಲೆಯ ಮಹಿಳಾ ವಾರ್ಡನ್, 9ನೇ ತರಗತಿಯ ಬಾಲಕಿ ಹಾಗೂ ಇತರ 7 ಬಾಲಕರು ಗಾಯಗೊಂಡಿದ್ದು, ಆ ಪೈಕಿ ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ದಾಳಿಗೊಳಗಾದವರೆಲ್ಲರೂ 9ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಗಾಯಾಳುಗಳಿಗೆ ನಗರದ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆಸಿದ ವಿದ್ಯಾರ್ಥಿ ಪರಾರಿಯಾಗಿದ್ದಾನೆ.
ಗುರುಕುಲ ವಸತಿ ಶಾಲೆಯ ಮೊದಲ ಮಹಡಿಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ರಾತ್ರಿ 7.30ಕ್ಕೆ ಎಲ್ಲರೂ ಊಟ ಮಾಡಿದ್ದರು. ಊಟವಾದ ಬಳಿಕ 9 ಗಂಟೆಗೆ ಎಲ್ಲರೂ ಮಲಗಿಕೊಂಡಿದ್ದರು. ಸುಮಾರು 9.30ರ ವೇಳೆಗೆ ಈ ವಿದ್ಯಾರ್ಥಿ ಹುಚ್ಚಾಟ ನಡೆಸಿದ್ದು, ಕೈಯಲ್ಲಿ ಸಿಕ್ಕ ರಾಡ್, ಚಾಕು ಹಿಡಿದು, ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿದ್ದಾನೆ. ಬಳಿಕ, ಮತ್ತೊಂದು ಮಹಡಿಯತ್ತ ದಾಳಿ ಮಾಡಲು ನುಗ್ಗಿದ್ದಾನೆ. ಈ ವೇಳೆ, ಅಲ್ಲಿನ ವಿದ್ಯಾರ್ಥಿಗಳು ಕೋಣೆಯ ಬಾಗಿಲು ಹಾಕಿಕೊಳ್ಳಲು ಮುಂದಾದರೂ ಬಾಗಿಲು ದೂಡಿ, ಒಳಗೆ ನುಗ್ಗಿ ದಾಳಿ ಮುಂದುವರಿಸಿದ್ದಾನೆ. ಕಂಗಾಲಾದ ವಿದ್ಯಾರ್ಥಿಗಳು ಕೂಗಾಟ, ಅರಚಾಟ ನಡೆಸಿದರು. ಈ ವೇಳೆ ವಿದ್ಯಾರ್ಥಿಯನ್ನು ತಡೆಯಲು ಹೋದ ಮಹಿಳಾ ವಾರ್ಡನ್ ಹಾಗೂ ವಾರ್ಡನ್ ಜೊತೆಗಿದ್ದ 9ನೇ ತರಗತಿಯ ಬಾಲಕಿ ಮೇಲೂ ದಾಳಿ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಬಾಲಕ ದಿಢೀರನೇ ದಾಳಿ ಮಾಡಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಗಾಯಗೊಂಡಿರುವ ಬಾಲಕರು ಘಟನೆಯ ಶಾಕ್‌ನಲ್ಲಿದ್ದಾರೆ. ಹೀಗಾಗಿ, ತನಿಖೆ ಬಳಿಕವಷ್ಟೇ ನಿಜಾಂಶ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಗಾಂಜಾ ಸೇವನೆಯ ಮತ್ತಿನಲ್ಲಿ ಆತ ಈ ಕೃತ್ಯ ಎಸಗಿದ್ದಾನೆ ಎಂದು ಮೃತ, ದಾಳಿಗೊಳಗಾದ ಬಾಲಕರ ಪೋಷಕರು ಆಪಾದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದ ಬಾಲಕ ಹಾಗೂ ಗುರುಕುಲ ವಸತಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿದ್ಯಾರ್ಥಿಯ ಪತ್ತೆಗೆ ಬಲೆ ಬೀಸಲಾಗಿದೆ
ನಗರದ ಶಾಲಾ-ಕಾಲೇಜುಗಳಲ್ಲಿ ಗಾಂಜಾ ಬಳಕೆಯಾಗುತ್ತಿದೆ ಎಂಬ ಆರೋಪಗಳು ದಟ್ಟವಾಗಿವೆ. ನಗರದ ಖಾಸಗಿ ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಗಳು ಗಾಂಜಾ ಬಳಕೆ ಮಾಡುತ್ತಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಇತ್ತೀಚೆಗಷ್ಟೇ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ