Bengaluru: ಗ್ರಾಹಕರ ಮೊಬೈಲ್‌ ಸಂಖ್ಯೆ ಬಳಸಿ ದೋಖಾ: ಆರೋಪಿಯ ಬಂಧನ

By Govindaraj SFirst Published Jan 6, 2023, 8:28 AM IST
Highlights

ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಹಳೆಯ ಗ್ರಾಹಕರ ಮೊಬೈಲ್‌ ಸಂಖ್ಯೆಗಳನ್ನು ಅಕ್ರಮವಾಗಿ ಬಳಸಿ ಲಕ್ಷಾಂತರ ಮೊತ್ತದ ಆನ್‌ಲೈನ್‌ ಶಾಪಿಂಗ್‌ ಮಾಡಿ ವಂಚಿಸಿದ್ದ ಕಂಪನಿಯ ಮಾಜಿ ನೌಕರನನ್ನು ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. 

ಬೆಂಗಳೂರು (ಜ.06): ಪ್ರತಿಷ್ಠಿತ ಖಾಸಗಿ ಕಂಪನಿಯೊಂದರ ಹಳೆಯ ಗ್ರಾಹಕರ ಮೊಬೈಲ್‌ ಸಂಖ್ಯೆಗಳನ್ನು ಅಕ್ರಮವಾಗಿ ಬಳಸಿ ಲಕ್ಷಾಂತರ ಮೊತ್ತದ ಆನ್‌ಲೈನ್‌ ಶಾಪಿಂಗ್‌ ಮಾಡಿ ವಂಚಿಸಿದ್ದ ಕಂಪನಿಯ ಮಾಜಿ ನೌಕರನನ್ನು ಕೇಂದ್ರ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಜೆ.ಪಿ.ನಗರ 6ನೇ ಹಂತ ನಿವಾಸಿ ವಿಕಾಸ್‌ (29) ಬಂಧಿತನಾಗಿದ್ದು, ಈ ವಂಚನೆ ಮಾಡಿ ಸಂಪಾದಿಸಿದ ಹಣದಲ್ಲಿ ಅಮೆಜಾನ್‌ನಲ್ಲಿ 24 ಲಕ್ಷ ರು.ಮೌಲ್ಯದ 39 ಮೊಬೈಲ್‌ಗಳನ್ನು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾನೆ. ಬಜಾಜ್‌ ಫೈನಾನ್ಸ್‌ ಕಂಪನಿಯ ಮಾಜಿ ನೌಕರ ವಿಕಾಸ್‌ ಕಂಪನಿಯ ಗ್ರಾಹಕರ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ಜನರಿಗೆ ವಂಚಿಸಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ.

ಹೇಗೆ ವಂಚನೆ: ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಅಮೃತೂರು ಸಮೀಪದ ಸಣಬಘಟ್ಟದ ವಿಕಾಸ್‌ ಬಿಸಿಎ ಓದು ಅರ್ಧಕ್ಕೆ ಬಿಟ್ಟು ಕೆಲಸ ಅರಸಿ ನಗರಕ್ಕೆ ಬಂದಿದ್ದ. ಮೊದಲು ಬಜಾಜ್‌ ಫೈನಾನ್ಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಈತ, 2017ರಲ್ಲಿ ಅಲ್ಲಿ ಕೆಲಸ ತೊರೆದಿದ್ದ. ಬಳಿಕ ಉದ್ಯೋಗವಿಲ್ಲದೆ ಅಲೆಯುತ್ತಿದ್ದ ವಿಕಾಸ್‌ ಸಾಕಷ್ಟುಸಾಲ ಮಾಡಿಕೊಂಡಿದ್ದ. ಸಾಲದ ಸುಳಿಯಿಂದ ಹೊರಬರಲು ಆತ ಮೋಸದ ಹಾದಿ ತುಳಿದಿದ್ದಾನೆ. ಬಜಾಜ್‌ ಫೈನಾನ್ಸ್‌ನಲ್ಲಿ ಕೆಲಸ ಮಾಡಿದ್ದರಿಂದ ಆತನಿಗೆ ಕಂಪನಿಯ ವಹಿವಾಟಿನ ಬಗ್ಗೆ ಮಾಹಿತಿ ಇತ್ತು. ಈ ಹಿನ್ನೆಲೆಯಲ್ಲಿ ಹಳೆಯ ಗ್ರಾಹಕರ ಮಾಹಿತಿ ಪಡೆದು ವಂಚಿಸಲು ವಿಕಾಸ್‌ ಸಂಚು ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿ ಬಳಿ ಸಿಕ್ತು 10 ಲಕ್ಷ ಕ್ಯಾಶ್‌: ಪಿಡಬ್ಲ್ಯುಡಿ ಎಂಜಿನಿಯರ್‌ ಬಂಧನ

ಕಳೆದ ಜೂನ್‌ನಲ್ಲಿ ಜಯನಗರ ಸಮೀಪ ಪ್ರತಿಷ್ಠಿತ ಮಾರಾಟ ಮಳಿಗೆಗೆ ತೆರಳಿದ ವಿಕಾಸ್‌, ಆ ಮಳಿಗೆಯ ಮಾರಾಟ ಪ್ರತಿನಿಧಿಗೆ ಬಜಾಜ್‌ ಫೈನಾನ್ಸ್‌ ಕಂಪನಿಯ ವ್ಯವಸ್ಥಾಪಕನ ಸೋಗಿನಲ್ಲಿ ಕರೆ ಮಾಡಿ ಕಂಪನಿಯ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ ಪಡೆದಿದ್ದ. ಬಳಿಕ ಬಜಾಜ್‌ ಫೈನಾನ್ಸ್‌ ಕಂಪನಿಯ ಹಳೇ ಗ್ರಾಹಕರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿದ್ದ. ಅವುಗಳಲ್ಲಿ ಗ್ರಾಹಕರು ಬಳಸದೆ ಬೇರೆಯವರಿಗೆ ಹಂಚಿಕೆಯಾಗಿರುವ ಸಂಖ್ಯೆಗಳನ್ನು ಪತ್ತೆ ಹಚ್ಚಿದ. ಅದರಲ್ಲೂ ವೋಡಾಫೋನ್‌ ನಂಬರ್‌ಗಳನ್ನು ಗುರಿಯಾಗಿರಿಸಿಕೊಂಡಿದ್ದನು. 

ಆಗ ಆನ್‌ಲೈನ್‌ ಮೂಲಕವೇ ಸಿಮ್‌ ಖರೀದಿಸಿ ಆರೋಪಿ, ಬಜಾಜ್‌ ಫೈನಾನ್ಸ್‌ನಲ್ಲಿ ಲಾಗಿನ್‌ ಆಗಿ ಗ್ರಾಹಕರ ವಿವರದಲ್ಲಿ ಹೊಸ ಮೊಬೈಲ್‌ ನಂಬರ್‌ ಅಪ್‌ಡೇಟ್‌ ಮಾಡಿದ. ಆ ಸಂಖ್ಯೆಗೆ ಬೇರೊಬ್ಬ ಗ್ರಾಹಕರ ವಿವರ ಹಾಗೂ ಬಜಾಜ್‌ ಫೈನಾನ್ಸ್‌ ಕಂಪನಿಯ ಐಡಿ ಕಾರ್ಡ್‌ಗಳಿದ್ದರೆ ಅಂತಹ ಗ್ರಾಹಕರ ಆಧಾರ್‌ ಮತ್ತು ಪಾನ್‌ ನಂಬರ್‌ ಅನ್ನು ಫೋಟೋ ತೆಗೆದುಕೊಳ್ಳುತ್ತಿದ್ದ. ಈ ವಿವರ ಬಳಸಿಕೊಂಡು ಅಮೆಜಾನ್‌ನಲ್ಲಿ ಆತ ವಸ್ತುಗಳನ್ನು ಖರೀದಿಸುತ್ತಿದ್ದ. ಪಾರ್ಸೆಲ್‌ ಕೊಡಲು ಬಂದಾಗ ಮನೆ ಬಳಿಗೆ ಕರೆಸಿಕೊಳ್ಳದೆ ಮಾರ್ಗಮಧ್ಯೆಯೇ ಭೇಟಿ ಆತ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?: ಇತ್ತೀಚಿಗೆ ತಾವು ಸಂಪೂರ್ಣವಾಗಿ ಸಾಲ ತೀರಿಸಿದ ಬಳಿಕವೂ ಇಬ್ಬರು ಗ್ರಾಹಕರಿಗೆ ಇಎಂಐ ಪಾವತಿಸುವಂತೆ ಬಜಾಜ್‌ ಫೈನಾನ್ಸ್‌ ಕಂಪನಿಯಿಂದ ಸಂದೇಶ ಹೋಗಿದೆ. ಇದರಿಂದ ಗಾಬರಿಗೊಂಡ ಆ ಗ್ರಾಹಕರು, ಕೂಡಲೇ ಬಜಾಜ್‌ ಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಿ ವಿಚಾರಿಸಿದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಬಜಾಜ್‌ ಫೈನಾನ್ಸ್‌ ಕಂಪನಿ ಅಧಿಕಾರಿಗಳು, ಆಂತರಿಕವಾಗಿ ವಿಚಾರಣೆ ನಡೆಸಿದಾಗ ತಮ್ಮ ಕಂಪನಿಯ ಹಳೇ ಗ್ರಾಹಕರ ಮೊಬೈಲ್‌ ನಂಬರ್‌ಗಳನ್ನು ಬಳಸಿಕೊಂಡು ಆನ್‌ಲೈನ್‌ ಶಾಂಪಿಂಗ್‌ ಮಾಡಿದ್ದರಿಂದ 14.21 ಲಕ್ಷ ರು.ಕಂಪನಿಗೆ ನಷ್ಟವಾಗಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಕೇಂದ್ರ ಸಿಇಎನ್‌ ಠಾಣೆಗೆ ಕಂಪನಿ ಪರವಾಗಿ ಅಧಿಕಾರಿ ಅಶೋಕ್‌ ದೂರು ದಾಖಲಿಸಿದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್‌ ಎಸ್‌.ಪಿ.ವಿನೋದ್‌ ರಾಜ್‌ ತಂಡ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಕ್ಕರ್‌ ಬಾಂಬ್‌ ಸ್ಫೋಟ ತನಿಖೆ ತೀವ್ರ: ರಾಜ್ಯದ ಇಬ್ಬರು ಶಂಕಿತ ಐಸಿಸ್‌ ಉಗ್ರರ ಬಂಧನ

ಓಎಲ್‌ಎಕ್ಸ್‌ನಲ್ಲಿ ಮಾರಾಟ: ಅಮೆಜಾನ್‌ನಲ್ಲಿ ಖರೀದಿಸಿದ ಹೊಸ ಮೊಬೈಲ್‌ಗಳನ್ನು ಓಎಲ್‌ಎಕ್ಸ್‌ನಲ್ಲಿ ಮಾರಾಟ ಮಾಡಿ ಆರೋಪಿ ಹಣ ಸಂಗ್ರಹಿಸುತ್ತಿದ್ದ. ಸುಮಾರು 24 ಗ್ರಾಹಕರ ಹೆಸರಿನಲ್ಲಿ 39 ಮೊಬೈಲ್‌ ಖರೀದಿಸಿ ಮಾರಾಟ ಮಾಡಿರುವುದು ಪೊಲೀಸ್‌ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿಂದೆ ಇದೇ ಮಾದರಿಯ ವಂಚನೆ ಕೃತ್ಯ ಸಂಬಂಧ ವಿಕಾಸ್‌ನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

click me!