
ಬೆಂಗಳೂರು (ಜ.06): ಹಳೆಯ ದರೋಡೆ ಸಂಚು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದ ಕಾರಣಕ್ಕೆ ನ್ಯಾಯಾಲಯದ ವಾರೆಂಟ್ ಹಿನ್ನೆಲೆಯಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ಕಾಟನ್‌ಪೇಟೆ ಠಾಣೆಯಲ್ಲಿ ಗುರುವಾರ ನಸುಕಿನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಆದರೆ ಈ ಬಗ್ಗೆ ಮೃತನ ಕುಟುಂಬದವರು ಪೊಲೀಸರ ಹಲ್ಲೆಯಿಂದ ಮೃತ ಪಟ್ಟಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಭಕ್ಷಿ ಗಾರ್ಡನ್ ನಿವಾಸಿ ವಿನೋದ್ (23) ಮೃತ ದುರ್ದೈವಿ. ಆರು ವರ್ಷಗಳ ಹಿಂದಿನ ಪ್ರಕರಣದಲ್ಲಿ ಬುಧವಾರ ಬಂಧಿಸಿದ ಕಾಟನ್ ಪೇಟೆ ಠಾಣೆ ಪೊಲೀಸರು, ಆತನನ್ನು ಠಾಣೆಯ ಸೆಲ್‌ನಲ್ಲಿಟ್ಟಿದ್ದಾಗ ಘಟನೆ ಸಂಭ ವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಐಡಿಗೆ ಪ್ರಕರಣ ವರ್ಗಾವಣೆ: 2017ರಲ್ಲಿ ದರೋಡೆ ಸಂಚು ಪ್ರಕರಣದಲ್ಲಿ ವಿನೋದ್‌ನನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಆತ, ಸಣ್ಣಪುಟ್ಟ ಕೆಲಸ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದ. ಆದರೆ ಪ್ರಕರಣದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ವಿನೋದ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಗೊಳಿಸಿತ್ತು.
ವಿಧಾನಸೌಧದಲ್ಲಿ ಅಧಿಕಾರಿ ಬಳಿ ಸಿಕ್ತು 10 ಲಕ್ಷ ಕ್ಯಾಶ್: ಪಿಡಬ್ಲ್ಯುಡಿ ಎಂಜಿನಿಯರ್ ಬಂಧನ
ಈ ವಾರೆಂಟ್ ಹಿನ್ನೆಲೆಯಲ್ಲಿ ಬುಧವಾರ ಆರೋಪಿಯನ್ನು ಬಂಧಿಸಿದ ಕಾಟನ್‌ಪೇಟೆ ಪೊಲೀಸರು, ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಆತನನ್ನು ಠಾಣೆಯ ಸೆಲ್‌ನಲ್ಲಿಟ್ಟಿದ್ದರು. ಆದರೆ ಮುಂಜಾನೆ ವಿನೋದ್ ಪ್ರಜ್ಞಾಹೀನನಾಗಿರುವುದನ್ನು ಗಮನಿಸಿದ ಪೊಲೀಸರು, ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಆರೋಪಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಪೊಲೀಸರ ಹಲ್ಲೆಯಿಂದ ಸಾವು: ಪೊಲೀಸರ ಹಲ್ಲೆಯಿಂದಲೇ ಲಾಕಪ್‌ನಲ್ಲಿಯೇ ವಿನೋದ್ ಸಾವನ್ನಪ್ಪಿದ್ದಾನೆ. ಇದೊಂದು ಸಹಜ ಸಾವಲ್ಲ. ತಪ್ಪಿತಸ್ಥ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಮೃತ ವಿನೋದ್ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕುಕ್ಕರ್ ಬಾಂಬ್ ಸ್ಫೋಟ ತನಿಖೆ ತೀವ್ರ: ರಾಜ್ಯದ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ
ಕಾನೂನು ಪ್ರಕಾರ ಕಸ್ಟೋಡಿಯಲ್ ಡೆತ್ ಆಗುತ್ತದೆ. ಹಾಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ವರದಿ ಬಳಿಕ ಮೃತನ ಸಾವಿಗೆ ನಿಖರ ಗೊತ್ತಾಗಲಿದೆ.
- ಲಕ್ಷ್ಮಣ್ ನಿಂಬರಗಿ, ಪಶ್ಚಿಮ ವಿಭಾಗದ ಡಿಸಿಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ