ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೇರಸಾ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ನಡೆದ ಘಟನೆ
ಖಾನಾಪುರ(ಆ.27): ನವಜಾತ ಶಿಶುವೊಂದನ್ನು ಮರಕ್ಕೆ ನೇತು ಹಾಕಿದ ಚೀಲದಲ್ಲಿ ಪತ್ತೆಯಾದ ಘಟನೆ ಶುಕ್ರವಾರ ತಾಲೂಕಿನ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನೇರಸಾ ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ನಡೆದಿದೆ. ಗುರುವಾರ ರಾತ್ರಿ ಜನಿಸಿದ ನವಜಾತ ಗಂಡು ಶಿಶುವನ್ನು ಶಿಶುವಿನ ತಾಯಿ ಅಥವಾ ಪೋಷಕರು ಚೀಲದಲ್ಲಿಟ್ಟು ಅಂಗನವಾಡಿ ಬಳಿಯ ಮರಕ್ಕೆ ನೇತುಹಾಕಿ ತೆರಳಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ಬೆಳಿಗ್ಗೆ ದನಕರುಗಳಿಗೆ ಮೇವು ತರಲು ಹೊರಟಿದ್ದ ಸ್ಥಳೀಯರು ಗಿಡದ ಮೇಲೆ ನೇತಾಡುತ್ತಿದ್ದ ಚೀಲವನ್ನು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಘಟನೆಯ ಬಗ್ಗೆ ಸ್ಥಳೀಯರು ನೇರಸಾ ಗ್ರಾಮದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಳಿಸಿದ ಬಳಿಕ ಅವರು ಶಿಶುವನ್ನು ತಂದು ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ಮಗುವಿನ ಆರೋಗ್ಯ ಪರೀಕ್ಷಿಸಿದ ಚಿಕ್ಕಮಕ್ಕಳ ತಜ್ಞ ಡಾ.ಪವನ ಪೂಜಾರ ಮಗುವಿಗೆ ಪ್ರಾಥಮಿಕ ಉಪಚಾರ ನೀಡಿ ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಮಗುವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. 2.5 ಕೆಜಿ ತೂಕದ ಮಗುವಿನ ಆರೋಗ್ಯ ಸ್ಥಿರವಾಗಿದೆ. ಈ ಘಟನೆಯ ಕುರಿತು ಖಾನಾಪುರ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೋಮ್‌ವರ್ಕ್ ಮಾಡಿಲ್ಲ: ಶಿಕ್ಷೆಗೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಆರು ತಿಂಗಳಲ್ಲಿ ಎರಡನೇ ಘಟನೆ:
ಇದೇ ರೀತಿಯ ಘಟನೆ ಕಳೆದ ಆರು ತಿಂಗಳ ಹಿಂದೆ ಖಾನಾಪುರ ಪಟ್ಟಣದಲ್ಲಿ ಸಂಭವಿಸಿತ್ತು. ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ನವಜಾತ ಗಂಡು ಶಿಶುವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ಇಟ್ಟು ಹೋಗಿದ್ದರು. ಬೆಳಗ್ಗೆ ಕರ್ತವ್ಯ ನಿರತ ಪಟ್ಟಣ ಪಂಚಾಯ್ತಿಯ ಸ್ವಚ್ಛತಾ ಕಾರ್ಮಿಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಗಲೂ ಕೂಡ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೂ ಮಗುವಿನ ಪೋಷಕರ ಪತ್ತೆ ಸಿಕ್ಕಿಲ್ಲ. ಈಗ ತಾಲೂಕಿನಲ್ಲಿ ವರದಿಯಾದ ಎರಡನೇ ಘಟನೆ ತಾಲೂಕಿನಲ್ಲಿ ಬಾಲ್ಯವಿವಾಹ ಮತ್ತು ಅನೈತಿಕ ಸಂಬಂಧಗಳಿಂದ ಗರ್ಭಧರಿಸುತ್ತಿರುವ ಪ್ರಕರಣಗಳಿಗೆ ಪುಷ್ಟಿ ನೀಡುತ್ತಿವೆ.