• ಕೊಲೆ ಕೇಸ್‌ನಲ್ಲಿ ಅಮಾಯಕರ ಬಂಧಿಸಿ 15 ಲಕ್ಷ ವಸೂಲಿ ಆರೋಪ..!
• ಗೋಕಾಕ್ CPI ಗೋಪಾಲ್ ರಾಥೋಡ್, ಪಿಎಸ್ಐ, ಪೇದೆಗಳಿಬ್ಬರ ವಿರುದ್ಧ ದೂರು
• ನ್ಯಾಯಕ್ಕಾಗಿ ವೃದ್ಧ ದಂಪತಿ, ಕುಟುಂಬಸ್ಥರ ಕಣ್ಣೀರು
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಏ.24): ನೀವೆಲ್ಲಾ ತಮಿಳು ನಟ ಸೂರ್ಯ ಅಭಿನಯದ 'ಜೈ ಭೀಮ್' ಸಿನಿಮಾ ನೋಡಿದ್ರೆ ಅದರಲ್ಲಿ ಅಮಾಯಕರ ಮೇಲೆ ಪೊಲೀಸರು ಹೇಗೆಲ್ಲಾ ದೌರ್ಜನ್ಯ ಮಾಡಿ ಕೇಸ್ ಫಿಟ್ ಮಾಡ್ತಾರೆ ಅನ್ನೋದನ್ನ ಎಳೆ-ಎಳೆ ಯಾಗಿ ಬಿಚ್ಚಿಟ್ಟಿದ್ದನ್ನು ನೋಡಿರುತ್ತೀರಿ. ಇದೇ ಮಾದರಿಯ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ನಡೆದಿದೆಯಾ ಎಂಬ ಅನುಮಾನ ಸದ್ಯಕ್ಕೆ ಕಾಡುತ್ತಿದೆ.
ಹೌದು.. ಅಷ್ಟಕ್ಕೂ ಈ ಅನುಮಾನ ಮೂಡಲು ಕಾರಣ ಗೋಕಾಕ್ ನಗರದ ನಿವಾಸಿಗಳಾದ ಬಬಲಿ ಕುಟುಂಬಸ್ಥರು ಮಾಡುತ್ತಿರುವ ಆರೋಪ. ಕೊಲೆ ಪ್ರಕರಣವೊಂದರಲ್ಲಿ ಅಮಾಯಕರನ್ನು ಬಂಧಿಸಿ ಹಂತ ಹಂತವಾಗಿ 15 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆಂದು ಗೋಕಾಕ ಗ್ರಾಮೀಣ ಠಾಣೆ ಸಿಪಿಐ ಗೋಪಾಲ್ ರಾಥೋಡ್, ಪಿಎಸ್ಐ ಖಿಲಾರಿ ಪೇದೆಗಳಾದ ಕಸ್ತೂರಿ ಹಾಗೂ ಪಾಟೀಲ್ ಎಂಬುವರ ವಿರುದ್ಧ ಆರೋಪ ಮಾಡಿದ್ದಾರೆ.
2021ರ ಜುಲೈ 17ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ಹೊರವಲಯ ಮಹಾಂತೇಶ ನಗರ ಬಡಾವಣೆಯಲ್ಲಿ ಮಂಜು ಮುರಕಿಭಾವಿ ಎಂಬ ಯುವಕನ ಕೊಲೆಯಾಗಿತ್ತು. ಕೊಲೆಯಾದ ಮಂಜು ಯುವತಿಯೋರ್ವಳನ್ನ ಪ್ರೀತಿಸುತ್ತಿದ್ದು ಆಕೆ ಮದುವೆಯಾದ ಬಳಿಕವೂ ಅವಳನ್ನು ಭೇಟಿಯಾಗುತ್ತಿದ್ದ ಹಿನ್ನೆಲೆ ಯುವತಿಯ ಸೋದರ ಮಾವಂದಿರು ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಗೋಕಾಕ್ ನಿವಾಸಿ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ, ಅರ್ಜುನ ಬಂಧಿಸಲಾಗಿತ್ತು. ಸದ್ಯ ಈಗ ಪ್ರಕರಣ ನಡೆದು 9 ತಿಂಗಳ ಬಳಿಕ ಮಾಧ್ಯಮಗಳ ಎದುರು ಬಂದಿರುವ ಕುಟುಂಬ ಸದಸ್ಯರು ಗೋಕಾಕ್ ಸಿಪಿಐ, ಪಿಎಸ್ಐ ಇಬ್ಬರು ಪೇದೆಗಳ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಪಂಚಾಯ್ತಿ ಕಟ್ಟೆ ನಂಬಿ ಕೆಟ್ಟಿತಾ ಆ ಕುಟುಂಬ? ಬುದ್ಧಿ ಮಾತು ಹೇಳಿದ್ದಕ್ಕೇ ಕೊಲೆ ಮಾಡಿಬಿಟ್ಟ
ಈ ಸಂಬಂಧ ಗೃಹಸಚಿವ ಅರಗ ಜ್ಞಾನೇಂದ್ರ, ಸಿಎಂ ಬಸವರಾಜ ಬೊಮ್ಮಾಯಿಗೂ ಪತ್ರ ಬರೆದಿದ್ದು ಲೋಕಾಯುಕ್ತ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. 'ಕೊಲೆಯಾದ ಮಂಜುನಾಥ ಮುರಕಿಭಾವಿಗೂ ಹಾಗೂ ಬಂಧಿತ ಕೃಷ್ಣಾ, ಅರ್ಜುನಗೂ ಯಾವುದೇ ಸಂಬಂಧ ಇಲ್ಲ. ವೈಯಕ್ತಿಕವಾಗಿ ಯಾವುದೇ ಮುಖ ಪರಿಚಯ ಆಗಲಿ, ದ್ವೇಷ ಆಗಲಿ ಇರಲಿಲ್ಲ. ಮಂಜು ಬಸಪ್ಪ ರಂಗನಕೊಪ್ಪ ಎಂಬುವರ ಹೇಳಿಕೆ ಆಧಾರದಲ್ಲಿ 2021ರ ಜುಲೈ 19ರಂದು ಮಧ್ಯಾಹ್ನ 1.30ರ ಸುಮಾರಿಗೆ ಕೃಷ್ಣ, ಅರ್ಜುನನ್ನು ಕರೆದುಕೊಂಡು ಚೆನ್ನಾಗಿ ಹೊಡೆದಿದ್ದಾರೆ.
ಬಳಿಕ ಮಾರನೇ ದಿನ ತಂದೆ ಸಿದ್ದಪ್ಪ ಠಾಣೆಗೆ ಹೋದಾಗ ಆತನನ್ನು ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮಕ್ಕಳದ್ದು ಏನು ತಪ್ಪಿಲ್ಲ ಅಂತಾ ಪೊಲೀಸ್ ಠಾಣೆಗೆ ಹೇಳಲು ಹೋದ ವೇಳೆ ಪ್ರಕರಣದಿಂದ ಆಚೆ ತರಲು ಹಣ ಖರ್ಚಾಗುತ್ತದೆ. ನೀವು ಹಣ ವ್ಯವಸ್ಥೆ ಮಾಡಿದ್ರೆ ನಿಮ್ಮ ಮಕ್ಕಳನ್ನು ಆಚೆ ಬಿಡುತ್ತೇವೆ. ಅಷ್ಟೇ ಅಲ್ಲದೇ ನಿಮ್ಮ ಸಂಬಂಧಿಕರಾದ ಸುಷ್ಮಾ, ಲಕ್ಷ್ಮಣ್, ಮಾನಿಂಗ, ರೇಣುಕಾ, ರಾಯವ್ವಾ ಎಂಬ ಐವರ ಮೇಲೆ ಎಫ್ಐಆರ್ ದಾಖಲಾಗಿರುತ್ತೆ. ಅದು ಆಗದಂತೆ ನೋಡಿಕೊಳ್ಳಲು ಹದಿನೈದು ಲಕ್ಷ ರೂಪಾಯಿ ಖರ್ಚಾಗುತ್ತದೆ ಅಂತಾ ಹೇಳಿದ್ದು ಅದರಂತೆ ಹೊಲ, ಚಿನ್ನಾಭರಣ ಅಡವಿಟ್ಟು 15 ಲಕ್ಷ ರೂ. ಹಣ ನೀಡಿದ್ದೇವೆ. ಇಷ್ಟು ಹಣ ನೀಡಿದರೂ ಇನ್ನೂ ಐದು ಲಕ್ಷ ಹಣ ನೀಡಬೇಕು ಅಂತಾ ಹೇಳುತ್ತಿದ್ದು ಇದನ್ನ ಯಾರಿಗಾದರೂ ಹೇಳಿದ್ರೆ ನಿಮ್ಮ ಕುಟುಂಬದಲ್ಲಿ ಯಾರನ್ನೂ ಬಿಡಲ್ಲ ಅಂತಾ ಜೀವ ಬೆದರಿಕೆ ಹಾಕುತ್ತಿದ್ದಾರೆ' ಎಂದು ಸಿಎಂ, ಗೃಹಸಚಿವರಿಗೆ ಬರೆದ ಪತ್ರದಲ್ಲಿ ಕುಟುಂಬಸ್ಥರು ಉಲ್ಲೆಖಿಸಿದ್ದಾರೆ.
ನನ್ನ ಮಕ್ಕಳ ತಪ್ಪಿದ್ರ ಎಲ್ಲರನ್ನೂ ಗಲ್ಲಿಗೇರಿಸ್ರಿ
ಇನ್ನು ಬಂಧಿತ ಆರೋಪಿಗಳಾದ ಕೃಷ್ಣಾ, ಅರ್ಜುನ್ ತಾಯಿ ಕಲ್ಲವ್ವ ಮಾತನಾಡಿ, 'ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ನಾಲ್ಕು ದಿನ ಬಡೆದಿದ್ದಾರೆ. ಪೊಲೀಸರು ರೊಕ್ಕ ಕೊಡಿ ಅಂದ್ರು. ನಮಗೆ ಬಹಳ ಅನ್ಯಾಯವಾಗಿದೆ. ದುಡ್ಯಾವ್ರ ಅಲ್ಲೇ ಹೋಗಿ ಕುಂತ್ರ ನಾವ್ ಏನ್ ತಿನ್ನೋದ್ರಿ? ನ್ಯಾಯ ಸಿಗಲಿಲ್ಲ ಅಂದ್ರ ಎಣ್ಣೆ ತಗೊಂಡ ಸಾಯುದ್ರೀ ನಾವ್. ನಮ್ಮ ಮಕ್ಕಳದ ಏನೂ ತಪ್ಪಿಲ್ರಿ. ನನ್ನ ಮಕ್ಕಳದ ತಪ್ಪಿದ್ರ ನಮ್ಮ ಎಲ್ಲರನ್ನೂ ಸೇರಿಸಿ ಗಲ್ಲಿಗೇರಿಸ್ರಿ. ಕಸ್ತೂರಿ ಪೊಲೀಸ್ ರೊಕ್ಕ ತಗೊಂಡಾನ್ರಿ. ನನ್ನ ಗಂಡನನ್ನು ಬಡೆದಿದ್ದಾರೆ' ಅಂತಾ ಕಣ್ಣೀರಿಟ್ಟಿದ್ದಾರೆ.
'ಆತ್ಮಹತ್ಯೆ ಒಂದೇ ಹಾದಿ, ಪ್ರಕರಣದ ಸಿಬಿಐ ತನಿಖೆ ಮಾಡಲಿ'
ಇನ್ನು ಪ್ರಕರಣ ಕುರಿತು ಮಾತನಾಡಿರುವ ಬಂಧಿತ ಆರೋಪಿಯ ಪತ್ನಿ ಲಕ್ಷ್ಮೀ, 'ಪೊಲೀಸ್ ಇಲಾಖೆಯಿಂದ ನಮಗೆ ಬಹಳ ಅನ್ಯಾಯವಾಗಿದೆ. ಆತ್ಮಹತ್ಯೆ ಒಂದೇ ನಮಗೆ ದಾರಿಯಾದಂತಾಗಿದೆ. ಹದಿನೈದು ಲಕ್ಷ ರೂಪಾಯಿ ಹಣ ನಮ್ಮಿಂದ ಪಡೆದಿದ್ದಾರೆ. ಒಂಬತ್ತು ತಿಂಗಳ ಹಿಂದೆ ಕೊಲೆಯಾಗಿತ್ತು. ಅದಕ್ಕೂ ನನ್ನ ಗಂಡನಿಗೂ ಸಂಬಂಧ ಇಲ್ಲ. ಹೊಲದಲ್ಲಿ ಕೆಲಸ ಮಾಡುವ ನನ್ನ ಗಂಡ, ಭಾವ, ಮಾವನನ್ನು ಕರೆದುಕೊಂಡು ಹೋಗಿದ್ದಾರೆ. ಹದಿನೈದು ಲಕ್ಷ ರೂಪಾಯಿ ಕೊಟ್ರೆ ಬಿಡ್ತೀವಿ ಅಂತಾ ಹೇಳಿ ಹದಿನೈದು ಲಕ್ಷ ರೂಪಾಯಿ ಹಣ ಪಡೆದಿದ್ದಾರೆ. ಸಾಲ ಸೋಲ ಮಾಡಿ ತಾಳಿ ಅಡವಿಟ್ಟು ಹಣ ಪಡೆದಿದ್ದಾರೆ. ಈ ಸಂಬಂಧ ಐಜಿಪಿ, ಲೋಕಾಯುಕ್ತರಿಗೂ ದೂರು ನೀಡಿದ್ದೇವೆ. ಸಿಪಿಐ ಗೋಪಾಲ್ ರಾಠೋಡ್, ಪಿಎಸ್ಐ ನಾಗರಾಜ್, ಪೊಲೀಸ್ ಪೇದೆಗಳಾದ ಕಸ್ತೂರಿ, ಪಾಟೀಲ್ ಹಣ ಪಡೆದಿದ್ದಾರೆ. ಕೇಸ್ ಮುಗಿಸುತ್ತೇವೆ ಅಂತಾ ಹಣ ಪಡೆದಿದ್ದಾರೆ. ಕೊಲೆಯಾದ ಯುವಕನಿಗೂ ನಮಗೂ ಸಂಬಂಧ ಇಲ್ಲ ಬೇಕಾದ್ರೆ ಫೋನ್ ಕಾಲ್ ಡಿಟೇಲ್ ತಗೆಯಿಸಲಿ, ಬೇಕಾದ್ರೆ ಸಿಬಿಐ ತನಿಖೆ ವಹಿಸಲಿ. ಕರೆಂಟ್ ಶಾಕ್ ಕೊಟ್ಟು ಹಲ್ಲೆ ಮಾಡಿ ಕೊಲೆ ಮಾಡಿದ್ದನ್ನು ಒಪ್ಪಿಕೊಳ್ಳೋವರೆಗೂ ಬಿಟ್ಟಿಲ್ಲ' ಅಂತಾ ಆರೋಪಿಸಿದ್ದಾರೆ.
ಕುಟುಂಬಸ್ಥರ ಆರೋಪ ಬಗ್ಗೆ ತನಿಖೆಗೆ ಎಸ್‌ಪಿ ಆದೇಶ
ಇನ್ನು ಗೋಕಾಕ್ ಸಿಪಿಐ ಗೋಪಾಲ್ ರಾಥೋಡ್ ಹಾಗೂ ಇತರ ಸಿಬ್ಬಂದಿ ವಿರುದ್ಧ ಬಬಲಿ ಕುಟುಂಬಸ್ಥರು ಮಾಡಿದ ಆರೋಪ ವಿಚಾರವಾಗಿ ತನಿಖೆಗೆ ಬೆಳಗಾವಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಎಎಸ್‌ಪಿ ಮಹಾನಿಂಗ ನಂದಗಾವಿಗೆ ಆದೇಶಿಸಿದ್ದಾರೆ. ಇಂದು ಗೋಕಾಕ್ ಗ್ರಾಮೀಣ ಠಾಣೆಗೆ ಭೇಟಿ ನೀಡಿದ್ದ ಎಎಸ್‌ಪಿ ಮಹಾನಿಂಗ ನಂದಗಾವಿ ಪಿಎಸ್ಐ ನಾಗರಾಜ್ ಹಾಗೂ ಬಬಲಿ ಕುಟುಂಬಸ್ಥರ ಬಳಿ ಮಾಹಿತಿ ಪಡೆದಿದ್ದಾರೆ. ಇನ್ನು ಬೆಳಗ್ಗೆಯೇ ಠಾಣೆಗೆ ಎಎಸ್‌ಪಿ ಬಂದರೂ ಸಿಪಿಐ ಗೋಪಾಲ್ ರಾಥೋಡ್ ಹಾಗೂ ಪೇದೆಗಳಾದ ಕಸ್ತೂರಿ ಹಾಗೂ ಪಾಟೀಲ್ ಗೈರಾಗಿದ್ರು ಎಂದು ತಿಳಿದು ಬಂದಿದೆ.
ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಎಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದು ಅಷ್ಟಕ್ಕೂ ಕೊಲೆಯಾದ 9 ತಿಂಗಳ ಬಳಿಕ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಬಂದಿದ್ದೇಕೆ? ಬಬಲಿ ಕುಟುಂಬಸ್ಥರು ಮಾಡುತ್ತಿರುವ ಆರೋಪ ನಿಜಾನಾ ಸುಳ್ಳಾ ಎಂಬ ಬಗ್ಗೆ ತನಿಖೆ ಬಳಿಕವಷ್ಟೇ ಹೊರ ಬರಲಿದೆ.