ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಸಾರ್ವಜನಿಕವಾಗಿ ಬಟ್ಟೆ ಹರಿದು ಮಹಿಳೆ ಮೇಲೆ ಹಲ್ಲೆ

By Kannadaprabha News  |  First Published Jan 3, 2024, 8:00 PM IST

ಈ ಕುರಿತು ದೂರು ನೀಡಲು ಹೋದರೆ ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನೊಂದ ಮಹಿಳೆ 


ಬೆಳಗಾವಿ(ಜ.03): ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆಯನ್ನು ಸಾರ್ವಜನಿಕವಾಗಿ ಬಟ್ಟೆ ಹರಿದು, ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ 20 ಜನರ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಮಾವನ ಹೆಸರಿನಲ್ಲಿದ್ದ ಜಮೀನಿನ ಪೈಕಿ ಕೆಲವು ಭಾಗ ಜಮೀನನ್ನು ಗ್ರಾಮಸ್ಥರಿಗೆ ಮೇವಿನ ಬಣವಿ ಹಾಕಲು ಖರೀದಿಕೊಟ್ಟಿದ್ದರು. ಕೆಲವರು ಸೇರಿಕೊಂಡು ದೂರುದಾಳ ಮಹಿಳೆಯ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ. ಕೆಲವರು ಮನೆಗಳನ್ನು ಕಟ್ಟಿದ್ದು, ಇನ್ನೂ ಕೆಲವರು ಖುಲ್ಲಾ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಕುರಿತು ಬೈಲಹೊಂಗಲ ನ್ಯಾಯಾಲಯದಲ್ಲಿ ಹಾಗೂ ತಾಲೂಕು ಪಂಚಾಯತಿಯಲ್ಲಿ ದಾವೆ ಹೂಡಿದ್ದ ನೊಂದ ಮಹಿಳೆಯ ಪರವಾಗಿ ತೀರ್ಪು ಬಂದಿದೆ. ಇದರಿಂದ ಆರೋಪಿಗಳೆಲ್ಲರೂ ಅಸಮಾಧಾನಗೊಂಡಿದ್ದರು.

Tap to resize

Latest Videos

ಬೆಳಗಾವಿ: ಪ್ಲಾಸ್ಟಿಕ್‌ ಬಾಟಲ್‌ ಆಯುವನನ್ನ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಅಲ್ಲದೇ ದೂರುದಾಳ ಜಮೀನಿನ ಪಕ್ಕದಲ್ಲಿ ಹಾದುಹೋಗಿರುವ ಕೋಡಿಯಲ್ಲಿ ಆರೋಪಿಗಳ ನಿಯಮಬಾಹಿರವಾಗಿ ಪೈಪ್‌ಲೈನ್ ಹಾಕಿದ್ದರು. ಇದರಿಂದ ಮಳೆಗಾಲದಲ್ಲಿ ಪೈಪ್‌ಲೈನ್‌ನಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತಿತ್ತು. ಹೀಗಾಗಿ ಹೆಚ್ಚಿನ ಪ್ರಮಾಣದ ನೀರು ಜಮೀನಿಗೆ ನುಗ್ಗುತ್ತಿತ್ತು. ಹಾನಿಯಾಗುತ್ತಿರುವುದರಿಂದ ಮಹಿಳೆ ವಿರೋಧ ವ್ಯಕ್ತಪಡಿಸಿ, ಪೈಪ್‌ಲೈನ್‌ ತೆಗೆಯುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ಅಧಿಕಾರಿಗಳು ಸ್ಥಳಕ್ಕೆ ಬಂದು ಪೈಪ್‌ಲೈನ್ ತೆಗೆಯುತ್ತಿರುವ ವೇಳೆ ಆರೋಪಿಗಳು ನ.11 ರಂದು ದೂರುದಾಳ ಮಹಿಳೆ ಜಮೀನಿನ ಹತ್ತಿರ ಬಂದು ನಾವು ಹಾಕಿರುವ ಪೈಪ್‌ಲೈನ್ ಏಕೆ ತೆಗೆಸಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ದೂರುದಾಳ ಮಹಿಳೆ ತೊಟ್ಟಿದ್ದ ಬಟ್ಟೆಯನ್ನು ಎಳೆದಾಡಿ ಹರಿದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗುತ್ತಿದ್ದ ಸಮಯದಲ್ಲಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ನಿಂತಿದ್ದ ಆರೋಪಿಗಳು ಮತ್ತೆ ಜಗಳ ತೆಗೆದು ಹಲ್ಲೆ ನಡೆಸಿ, ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ₹1.5 ಲಕ್ಷ ನಗದು ಹಾಗೂ ಮೊಬೈಲ್ ತೆಗೆದುಕೊಂಡು ಹಲ್ಲೆ ಮಾಡಿದ್ದಾರೆ. 

ನೀನು ತೆಗೆಸಿದ ಪೈಪಲೈನ್ ಮರಳಿ ಹಾಕಿಸದಿದ್ರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಗೂಡ್ಸ್ ವಾಹನದಲ್ಲಿ ಪಂಚಾಯತಿಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಬಳಿಕ ಬಿಳಿ ಹಾಳೆ ಹಾಗೂ ಕೆಲವು ಬಾಂಡ್ ಪೇಪರ್‌ಗಳ ಮೇಲೆ ಸಹಿ ಮಾಡಿಕೊಂಡಿಸಿದ್ದಾರೆ. ಅಲ್ಲದೇ ಈ ಕುರಿತು ದೂರು ನೀಡಲು ಹೋದರೆ ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

click me!