ಬ್ಯಾಂಕಿಗೆ ನಕಲಿ ನೋಟು ಹಾಕಿ ಹೊಸ ನೋಟು ಕೇಳಿದವಳ ಬಂಧನ

By Kannadaprabha NewsFirst Published Aug 24, 2022, 4:00 AM IST
Highlights

100 ಮುಖ ಬೆಲೆಯ 117 ನೋಟುಗಳನ್ನು ಜಮೆ ಮಾಡಿ ಹೊಸ ನೋಟು ಕೊಡುವಂತೆ ಮನವಿ ಮಾಡಿದ್ದ ಬಂಧಿತ ಆರೋಪಿ

ಬೆಂಗಳೂರು(ಆ.24):  ಬ್ಯಾಂಕಿಗೆ ಖೋಟಾ ನೋಟು ಜಮೆ ಮಾಡಿ ಹೊಸ ನೋಟುಗಳಿಗೆ ಮನವಿ ಮಾಡಿದ್ದ ಚಾಲಾಕಿ ಮಹಿಳೆಯನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರಪ್ಪನಪಾಳ್ಯದ ಶೀಲಾ (36) ಬಂಧಿತ ಆರೋಪಿ. ವೃತ್ತಿಯಲ್ಲಿ ಬ್ಯೂಟಿಷಿಯನ್‌ ಆಗಿರುವ ಈಕೆಯಿಂದ .100 ಮುಖ ಬೆಲೆಯ 117 ನೋಟುಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ನೋಟಿನ ಮೂಲದ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ವಿಡಿಯೋ ಚಿತ್ರೀಕರಿಸ್ತಿದ್ದ ಕಾಮುಕ ಅರೆಸ್ಟ್‌

ಆರೋಪಿ ಶೀಲಾ ಆ.10ರಂದು ಮಧ್ಯಾಹ್ನ 3.45ರ ಸುಮಾರಿಗೆ ಜಯನಗರ 9ನೇ ಬ್ಲಾಕ್‌ನಲ್ಲಿ ಇರುವ ಕರ್ನಾಟಕ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿದ್ದಳು. .100 ಮುಖ ಬೆಲೆಯ 117 ನೋಟುಗಳನ್ನು ಜಮೆ ಮಾಡಿ ಹೊಸ ನೋಟು ಕೊಡುವಂತೆ ಮನವಿ ಮಾಡಿದ್ದಳು. ನೋಟುಗಳ ಬಗ್ಗೆ ಅನುಮಾನಗೊಂಡು ಬ್ಯಾಂಕ್‌ ಸಿಬ್ಬಂದಿ ಪರಿಶೀಲಿಸಿದಾಗ ಆ ನೋಟು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಪ್ರಶ್ನೆ ಮಾಡಿದಾಗ ಶೀಲಾ ಬ್ಯಾಂಕ್‌ನಿಂದ ಜಾಗ ಖಾಲಿ ಮಾಡಿದ್ದಳು.

ಈ ಸಂಬಂಧ ಬ್ಯಾಂಕ್‌ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪೊಲೀಸರು ಬ್ಯಾಂಕಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಹಿಳೆಯ ಚಹರೆ ಗುರುತಿಸಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಶೀಲಾಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ತನಿಖೆಯಿಂದ ಈ ನಕಲಿ ನೋಟುಗಳ ರಹಸ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!