ಕೇಂದ್ರದ ಗುಪ್ತಚರ ಇಲಾಖೆ ಹಾಗೂ ರಾಜ್ಯ ಪೊಲೀಸರು ಏಕಾಏಕಿ ದಾಳಿ ನಡೆಸಿ ಶಿರಸಿಯಲ್ಲಿ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಎಸ್‌ಡಿಪಿಐ- ಪಿಎಫ್‌ಐ ಮುಖಂಡನೋರ್ವನನ್ನು ಬಂಧಿಸಿದ್ದು, ಈತನ ಸಹೋದರ ತಲೆ ಮರೆಸಿಕೊಂಡಿದ್ದಾನೆ.
ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್
ಕಾರವಾರ (ಸೆ.22): ಉತ್ತರಕನ್ನಡ ಜಿಲ್ಲೆಯ ಟಿಪ್ಪು ನಗರಕ್ಕೆ ಬೆಳ್ಳಂಬೆಳಗ್ಗೆ ಎಂಟ್ರಿಕೊಟ್ಟಿದ್ದ ಕೇಂದ್ರ ಗುಪ್ತಚರ ಇಲಾಖೆ ಹಾಗೂ ರಾಜ್ಯ ಪೊಲೀಸರ ತಂಡ ದೇಶ ದ್ರೋಹದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿ ಎಸ್.ಡಿ.ಪಿ.ಐ. ಹಾಗೂ ಪಿಎಫ್‌ಐ ಮುಖಂಡ ಅಝೀಝ್ ಅಬ್ದುಲ್ ಶುಕುರ್ ಹೊನ್ನಾವರ್ (45)ನನ್ನು ಬಂಧಿಸಿದ್ದಾರೆ. ಈತನ ಸಹೋದರ ಎಸ್.ಡಿ.ಪಿ.ಐ. ಪ್ರಾಂತೀಯ ಅಧ್ಯಕ್ಷ ಮೌಸೀನ್ ಅಬ್ದುಲ್ ಶುಕುರ್ ಹೊನ್ನಾವರ್ ಮನೆಗೂ ದಾಳಿ ನಡೆಸಲಾಗಿದ್ರೂ, ಅಷ್ಟರಲ್ಲಾಗಲೇ ಆತ ಮರೆಸಿಕೊಂಡಿದ್ದ. ಈ ಹಿನ್ನೆಲೆ ಆತನ ಪತ್ನಿಯ ಕೈಯಲ್ಲಿದ್ದ ಆತನ ಮೊಬೈಲ್ ಫೋನ್ ಪಡೆದುಕೊಂಡು ಅಧಿಕಾರಿಗಳು ತೆರಳಿದ್ದಾರೆ. ದೇಶ ದ್ರೋಹದ ಚಟುವಟಿಕೆ, ಭಾಷಣ ಹಾಗೂ ಯುವಕರನ್ನು ಸಮಾಜಘಾತುಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿದ್ದ ಆರೋಪಿಗಳಾದ ಅಝೀಝ್ ಹಾಗೂ ಮೌಸೀನ್ ವಿರುದ್ಧ ಬೆಂಗಳೂರಿನ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಒಟ್ಟು19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿವಿಧೆಡೆ ಎನ್‌ಐಎ, ಐಬಿ ಹಾಗೂ ರಾಜ್ಯ ಪೊಲೀಸರು ತಂಡ ರಚಿಸಿ ಬಂಧಿಸಿದ್ದಾರೆ. ಶಿರಸಿಯಲ್ಲಿ ಐಬಿ ಹಾಗೂ ರಾಜ್ಯ ಪೊಲೀಸರು ನಡೆಸಿದ ದಾಳಿಯಲ್ಲಿ ಮೌಸೀನ್ ತಪ್ಪಿಸಿಕೊಂಡಿರುವ ಕಾರಣ ಆತನ ಅಣ್ಣ ಅಝೀಝ್ ಮಾತ್ರ ಬಂಧನಕ್ಕೊಳಗಾಗಿದ್ದಾನೆ.
ಈತನ ಮನೆಯ ಗೋಡೆಯಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ರಿಜೆಕ್ಟ್ ಮಾಡಬೇಕೆಂದು ಬರೆದುಕೊಂಡಿದ್ದಾನೆ. ಬಂಧಿತನಿಂದ ಒಂದು ಲ್ಯಾಪ್‌ಟಾಪ್, 2 ಮೊಬೈಲ್, ಒಂದು ಪುಸ್ತಕ ಹಾಗೂ ಒಂದು ಸಿಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಿರಸಿಯನ್ನು ಗುಪ್ತ ಸ್ಥಳದಲ್ಲಿ ಆರೋಪಿಯ ವಿಚಾರಣೆ ನಡೆಸಿದ ಅಧಿಕಾರಿಗಳು, ಬಳಿಕ ಬಂಧಿಸಿ ಬೆಂಗಳೂರಿಗೆ ಕೊಂಡೊಯ್ದಿದ್ದು, ಪೊಲೀಸ್ ತನಿಖೆ ಮುಗಿದ ಬಳಿಕ ಎನ್‌ಐಯವರಿಗೆ ಹಸ್ತಾಂತರಿಸಲಿದ್ದಾರೆ.
ಇನ್ನು ತಲೆ ಮರೆಸಿಕೊಂಡಿರುವ ಬಂಧಿತ ಆರೋಪಿಯ ಸಹೋದರ ಎಸ್.ಡಿ.ಪಿ.ಐ. ಪ್ರಾಂತೀಯ ಅಧ್ಯಕ್ಷ ಮೌಸೀನ್ ಅಬ್ದುಲ್ ಶುಕುರ್ ಹೊನ್ನಾವರ್‌ನನ್ನು ಪೊಲೀಸರು ಹಾಗೂ ಕೇಂದ್ರದ ಅಧಿಕಾರಿಗಳು ಹುಡುಕಾಡುತ್ತಿದ್ದಾರೆ. ಎಸ್‌ಡಿಪಿಐ ಸಂಘಟನೆಯನ್ನು ಬೆಳೆಸಲು ಹಾಗೂ ಯುವಕರನ್ನು ದೇಶವಿರೋಧಿ ಚಟುವಟಿಕೆಗೆ ಪ್ರೇರೇಪಿಸುತ್ತಿದ್ದ ಈತ ಈ ಹಿಂದೆ ಕೊಲೆ ಯತ್ನದ ಪ್ರಕರಣದಲ್ಲೂ ಭಾಗಿಯಾಗಿದ್ದ. ಸ್ಥಳೀಯ ಮುಸ್ಲಿಂ ಮುಖಂಡ ಹಾಗೂ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷನಾಗಿರುವ ಅನೀಸ್ ತಹಶೀಲ್ದಾರ್ ಬಿಜೆಪಿ ಸೇರಿದ್ದಕ್ಕೆ ಸಿಟ್ಟಾಗಿದ್ದ ಈತ 2019 ಏಪ್ರಿಲ್ 23 ರಂದು ತಂಡದ ಜತೆ ಆತನ ಹತ್ಯೆಗೆ ಯತ್ನಿಸಿದ್ದ. ಈ ಕುರಿತು ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದ್ದು, ಈತನನ್ನು ನಾಲ್ಕನೇ ಆರೋಪಿಯನ್ನಾಗಿ ಮಾಡಲಾಗಿತ್ತು.
ಭಾರತವನ್ನು ಇಸ್ಲಾಮಿಕ್ ರಾಷ್ಟ್ರವಾಗಿಸಲು ಹುನ್ನಾರ: ಹಿಂದೂ ರಾಷ್ಟ್ರಸೇನೆಯ ಖಂಡನೆ
ಬಳಿಕ ಬೇಲ್ ಮೂಲಕ ಹೊರಬಂದಿದ್ದ ಆರೋಪಿ ಮೌಸೀನ್ ಹೆಚ್ಚು ಜನರಿಗೆ ಕಾಣಿಸಿಕೊಳ್ಳದೇ ಫೇಸ್ ಬುಕ್ , ವಾಟ್ಸ್ ಅಪ್ ಮೂಲಕ ಪ್ರಚೋದನಕಾರಿ ಹೇಳಿಕೆಯನ್ನು ಯುವಕರಿಗೆ ಕಳುಹಿಸುತಿದ್ದ. ಅಲ್ಲದೇ, ಅವರವರ ವ್ಯಾಪ್ತಿಯಲ್ಲಿ ಯುವಕರನ್ನು ಒಟ್ಟುಗೂಡಿಸಿ ಗುಪ್ತ ಸಭೆಗಳನ್ನು ನಡೆಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದ. ಇನ್ನು ಈ ಸಹೋದರರಿಬ್ಬರು ಕೆಜೆ ಹಳ್ಳಿ ಹಾಗೂ ಡಿಜೆಹಳ್ಳಿಯ ಗಲಾಟೆ ಹಾಗೂ ಶಿವಮೊಗ್ಗದ ಹರ್ಷಾ ಕೊಲೆ ಪ್ರಕರಣದಲ್ಲೂ ಕೈವಾಡ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಪ್ರತೀ ಬಾರಿ ಉಗ್ರ ಚಟುವಟಿಕೆಯನ್ನು ನಡೆಸಲು ಪ್ರೇರೇಪಿಸುವ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ
ಒಟ್ಟಿನಲ್ಲಿ ಅಧಿಕಾರಿಗಳು ಸದ್ಯ ಅಝೀಝ್ ಅಬ್ದುಲ್ ಶುಕುರ್‌ನನ್ನು ಬಂಧಿಸಿದ್ದು, ಆತನ ಸಹೋದರ ಮೌಸಿನ್ ಅಬ್ದುಲ್ ಶುಕೂರ್‌ಗಾಗಿ ಬಲೆ ಬೀಸಿದ್ದಾರೆ. ಈ ಸಹೋದರರಿಬ್ಬರೂ ಇನ್ನು ಯಾವ್ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಉಗ್ರರಿಗೂ ಇವರಿಗೂ ನೇರವಾದ ಸಂಪರ್ಕವಿದೆಯೇ, ಇವರ ಮುಂದಿನ ಯೋಜನೆಗಳು ಏನೇನು ಎಂಬುದರ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.