
ಬೆಂಗಳೂರು (ಫೆ. 01) ಆರೋಪಿ ಒಮ್ಮೆ ನ್ಯಾಯಾಲಯದ (Court) ಮುಂದೆ ಹಾಜರಾಗಿ ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರೆಂಟ್ ಜಾರಿಯಾದರೆ, ನಿರೀಕ್ಷಣಾ ಜಾಮೀನು (Anticipatory bail) ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್(Karnataka High Court) ಅಭಿಪ್ರಾಯ ಪಟ್ಟಿದೆ.
ಉಡ ಹಾಗೂ ಗೌಜಲಹಕ್ಕಿಯನ್ನು ಅಕ್ರಮವಾಗಿ ಮನೆಯಲ್ಲಿ ಇರಿಸಿಕೊಂಡಿದ್ದ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಗೌರಿಬಿದನೂರಿನ ರಮೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಆರೋಪಿಯು ವಿಚಾರಣಾ ನ್ಯಾಯಾಲಯದ ಮುಂದೆಯೇ ಸೂಕ್ತ ಅರ್ಜಿ ಸಲ್ಲಿಸಿ ಎನ್‌ಬಿಡಬ್ಲ್ಯೂ ಜಾರಿಗೆ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಮನವಿ ಮಾಡಲು ಮುಕ್ತ ಅವಕಾಶ ಹೊಂದಿದ್ದಾನೆ ಎಂದು ಆದೇಶದಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.
Animal Cruelty : ಶ್ವಾನದ ಮೇಲೆ ಕಾರು ಹತ್ತಿಸಿದ ಆದಿ ಬಂಧನ, ಕೆಲ ಹೊತ್ತಲ್ಲೆ ಬಿಡುಗಡೆ
ರಮೇಶ್ ಮನೆಯಲ್ಲಿದ್ದ ಮೂರು ಉಡಗಳು ಹಾಗೂ ಮೂರು ಗೌಜಲಹಕ್ಕಿಗಳನ್ನು ಗೌರಿಬಿದನೂರಿನ ಉಪ ಅರಣ್ಯ ವಲಯಾಧಿಕಾರಿ (ಡಿಆರ್‌ಎಫ್‌ಒ) 2020ರ ಜು.8ರಂದು ವಶಪಡಿಸಿಕೊಂಡಿದ್ದರು. ಈ ಸಂಬಂಧ ವನ್ಯಜೀವಿ (ಸಂರಕ್ಷಣೆ) ಕಾಯ್ದೆ-1972ರ ಅಡಿಯಲ್ಲಿ ಸ್ಥಳೀಯ ಮ್ಯಾಜಿಸ್ಪ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯವು ಆರೋಪಿಗೆ ಅ.5ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿತ್ತು.
ಅ.5ರಂದು ವಕೀಲರ ಮೂಲಕ ಆರೋಪಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ್ದ ನ್ಯಾಯಾಲಯ ಆ ದಿನದ ವಿಚಾರಣೆಗೆ ವಿನಾಯಿತಿ ನೀಡಿತ್ತು. ನಂತರದ ದಿನಗಳಲ್ಲಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಮೇಶ್ ವಿರುದ್ಧ 2021ರ ಅ.6ರಂದು ಎನ್‌ಬಿಡಬ್ಲ್ಯೂ ಜಾರಿಗೊಳಿಸಲಾಗಿತ್ತು. ಬಂಧನ ಭೀತಿಯಿಂದ ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು.
ಆರೋಪಿ ತನ್ನ ವಕೀಲರ ಮೂಲಕ ಈಗಾಗಲೇ ಒಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿದ್ದಾನೆ. ನಂತರ ವಿಚಾರಣೆಗೆ ಗೈರಾಗಿರುವ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲಾಗಿದೆ. ಆರೋಪಿ ಒಮ್ಮೆ ವಿಚಾರಣಾ ನ್ಯಾಯಾಲಯದ ಮುಂದೆ ಖುದ್ದಾಗಿ ಅಥವಾ ವಕೀಲರ ಮುಖಾಂತರ ಹಾಜರಾಗಿ, ನಂತರದ ದಿನಗಳಲ್ಲಿ ವಿಚಾರಣೆಗೆ ಗೈರಾದ ಕಾರಣಕ್ಕೆ ವಾರಂಟ್ ಜಾರಿಯಾದರೆ, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಆತನಿಗೆ ಅವಕಾಶ ಇರುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಶ್ವಾನದ ಮೇಲೆ ಕಾರು ಹತ್ತಿಸಿದ್ದ: ರಸ್ತೆ ಬದಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಸಾಯಿಸಲು ಯತ್ನಿಸಿದ್ದ ಪ್ರಕರಣ ಸಂಬಂಧ ಉದ್ಯಮಿ ದಿವಂಗತ ಆದಿಕೇಶವಲು ಅವರ ಮೊಮ್ಮಗ ಆದಿಯನ್ನು ಬಂಧಿಸಿದ್ದ ಸಿದ್ದಾಪುರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಠಾಣಾ ಬೇಲ್ ಮೇಲೆ ಬಿಡುಗಡೆಗೊಳಿಸಿದ್ದರು.
ಜ.26ರಂದು ಸಂಜೆ 6.15ರಲ್ಲಿ ಜಯನಗರ 1ನೇ ಬ್ಲಾಕ್ 10ನೇ ‘ಬಿ’ ಮುಖ್ಯರಸ್ತೆಯ ಮನೆ ಎದುರಿನ ಪಾದಚಾರಿ ಮಾರ್ಗದ ಪಕ್ಕದಲ್ಲಿ ಬೀದಿ ನಾಯಿ ಮಲಗಿತ್ತು. ಈ ವೇಳೆ ಆದಿ ಐಷಾರಾಮಿ ಬಿಳಿ ಬಣ್ಣದ ಆಡಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಮಲಗಿದ್ದ ಬೀದಿ ನಾಯಿ ಮೇಲೆ ಹತ್ತಿಸಿ ಸಾಯಿಸಲು ಯತ್ನಿಸಿದ್ದ. ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ