*ರಸ್ತೆಗುಂಡಿ ತಪ್ಪಿಸಲು ಬೈಕ್ ಸ್ಕಿಡ್: ರಸ್ತೆಗೆ ಉರುಳಿ ಬಿದ್ದ ಶಿಕ್ಷಕ ದಂಪತಿ
*ಹಿಂಬದಿ ಕುಳಿತ್ತಿದ್ದ ಶಿಕ್ಷಕಿ ತಲೆ ಮೇಲೆ ಹರಿದ ಬೊಲೆರೋ
*ಸ್ಥಳದಲ್ಲಿ ಕೊನೆಯುಸಿರೆಳೆದ ಶಿಕ್ಷಕಿ: ಬೊಲೆರೋ ಚಾಲಕನ ಬಂಧನ
*ಮಾಗಡಿ ಮುಖ್ಯರಸ್ತೆಯ ಅಂಜನಾ ನಗರದಲ್ಲಿ ದುರ್ಘಟನೆ
ಬೆಂಗಳೂರು (ಜ. 31): ನಗರದ ರಸ್ತೆಗುಂಡಿಗಳು (Bengauru Roads) ಮೃತ್ಯುಕೂಪಗಳಾಗಿ ಮಾರ್ಪಾಟ್ಟಿದ್ದು, ರಸ್ತೆ ಗುಂಡಿ ತಪ್ಪಿಸುವಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಹಿಂಬದಿ ಕುಳಿತ್ತಿದ್ದ ಶಿಕ್ಷಕಿ ತಲೆ ಮೇಲೆ ಬೊಲೆರೋ ವಾಹನ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟೆಗಾರಪಾಳ್ಯದ ನಿವಾಸಿ ಶರ್ಮಿಳಾ (38) ಮೃತ ದುರ್ದೈವಿ. ಇವರ ಪತಿ ಪ್ರಕಾಶ್‌ಗೆ ಸಣ್ಣ-ಪುಟ್ಟಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ಬೆಳಗ್ಗೆ 10.45ರ ಸುಮಾರಿಗೆ ಅಂಜನಾ ನಗರದ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಈ ಸಂಬಂಧ ಬೊಲೆರೋ ವಾಹನದ ಚಾಲಕ ಮಾದೇಶ್(34) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಿಳಾ ಹಾಗೂ ಪ್ರಕಾಶ್ ದಂಪತಿ ನಗರದ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಭಾನುವಾರ ಶಾಲೆಗೆ ರಜೆ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಸಂಬಂಧಿಕರ ಮನೆಗೆ ಸ್ಪೆ$್ಲಂಡರ್ ಬೈಕ್‌ನಲ್ಲಿ ಹೊರಟ್ಟಿದ್ದರು. ಮಾರ್ಗದ ಅಂಜನಾನಗರದಲ್ಲಿ ರಸ್ತೆ ಗುಂಡಿ ತಪ್ಪಿಸಲು ಪ್ರಕಾಶ್ ದ್ವಿಚಕ್ರವಾಹನ ಹ್ಯಾಂಡಲ್ ಎಡಕ್ಕೆ ತಿರುಗಿಸಿದ್ದಾರೆ. ಈ ವೇಳೆ ಸ್ಕಿಡ್ ಆಗಿ ದ್ವಿಚಕ್ರ ವಾಹನ ಸಹಿತ ದಂಪತಿ ರಸ್ತೆಗೆ ಬಿದ್ದಿದ್ದಾರೆ.
ಇದನ್ನೂ ಓದಿ: Animal Cruelty : ಬೀದಿ ನಾಯಿ ಮೇಲೆ ಆಡಿ ಕಾರು ಹತ್ತಿಸಿ ವಿಕೃತಿ, ಆದಿಕೇಶವಲು ಮೊಮ್ಮಗನ ಸಂಸ್ಕೃತಿ!
ಇದೇ ಸಮಯಕ್ಕೆ ಹಿಂದಿನಿಂದ ವೇಗವಾಗಿ ಬಂದ ಬೊಲೊರೋ ವಾಹನದ ಎಡಭಾಗದ ಚಕ್ರ ಶರ್ಮಿಳಾ ಅವರ ತಲೆ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟರು. ಪ್ರಕಾಶ್‌ಗೆ ಸಣ್ಣಪುಟ್ಟಗಾಯಗಳಾಗಿ ಬದುಕುಳಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈಕೋರ್ಟ್ ಛೀಮಾರಿ ಹಾಕಿದರೂ ಬುದ್ಧಿ ಕಲಿಯದ ಬಿಬಿಎಂಪಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳಿಂದ ಅಮಾಯಕರ ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಬಿಬಿಎಂಪಿ ಮೇಲೆ ಹಲವು ಸಾರಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಬಿಬಿಎಂಪಿ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಈ ಸಂಬಂಧ ಬಿಬಿಎಂಪಿ ಮುಖ್ಯ ಇಂಜಿನಿಯರ್ ಅವರನ್ನು ಬಂಧಿಸುವ ಎಚ್ಚರಿಕೆ ನೀಡಿತ್ತು.
ಹೈಕೋರ್ಟ್ ಬಿಸಿ ಮುಟ್ಟಿಸಿದಾಗ ರಸ್ತೆ ಗುಂಡಿ ಮುಚ್ಚಲು ಮುಂದಾಗುವ ಪಾಲಿಕೆ, ಬಳಿಕ ಸುಮ್ಮನಾಗುತ್ತಿದೆ. ಗುಂಡಿ ಮುಚ್ಚುವ ಕಾಮಗಾರಿಗಳು ಕಳಪೆ ಕಾಮಗಾರಿಯಿಂದ ಕೂಡಿವೆ ಎಂಬ ಆರೋಪಿಗಳು ಕೇಳಿ ಬರುತ್ತಿವೆ. ಒಂದು ಕಡೆಯಿಂದ ರಸ್ತೆ ಗುಂಡಿ ಮುಚ್ಚಿಕೊಂಡು ಹೋಗದೆ ಮತ್ತೊಂದು ಕಡೆಯಿಂದ ಅದೇ ಗುಂಡಿಗಳು ಮತ್ತೆ ಬಾಯ್ತೆರೆಯುತ್ತಿವೆ.
ಇದನ್ನೂ ಓದಿ: Bengaluru: ವಿಕಲಾಂಗ ಮಹಿಳೆಯನ್ನು ಥಳಿಸಿದ ಎಎಸ್‌ಐ ನಾರಾಯಣ ಗೌಡ ಅಮಾನತು
ಇನ್ನೊಂದೆಡೆ ಕಾಮಗಾರಿ ಹೆಸರಿನಲ್ಲಿ ರಸ್ತೆಗಳನ್ನು ಅಗೆದು ಸರಿಯಾಗಿ ಮುಚ್ಚದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ನಗರದ ಅಮಾಯಕ ವಾಹನ ಸವಾರರು ಮೃತ್ಯುಕೂಪಗಳಾದ ರಸ್ತೆ ಗುಂಡಿಗಳಿಗೆ ಬಲಿಯಾಗುವುದು ಮುಂದುವರಿದಿದೆ.ರಸ್ತೆಗುಂಡಿಗಳಿಗೆ ಮುಕ್ತಿ ಕಾಣಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರೂ, ನಗರದಲ್ಲಿ ರಸ್ತೆ ಗುಂಡಿಗಳು ಬಾಯ್ತೆರೆದು ಕೊಂಡೇ ಇವೆ.
ಸ್ಥಳೀಯರ ಆಕ್ರೋಶ: ಮಾಗಡಿ ಮುಖ್ಯರಸ್ತೆಯ ಅಂಜನಾನಗರದಿಂದ ದೊಡ್ಡ ಗೊಲ್ಲರಹಟ್ಟಿಯವರೆಗೆ ಕಾವೇರಿ ನೀರಿನ ಪೈಪ್‌ಲೈನ್ ಅಳವಡಿಕೆಗಾಗಿ ರಸ್ತೆಯನ್ನು ಅಗೆಯಲಾಗಿತ್ತು. ಕಾಮಗಾರಿ ಬಳಿಕ ಆ ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿರಲಿಲ್ಲ. ಹೀಗಾಗಿ ದೊಡ್ಡ ವಾಹನಗಳು ಆ ಗುಂಡಿಯಲ್ಲಿ ಸಂಚರಿಸಿದಾಗ ಗುಂಡಿ ಮತ್ತಷ್ಟುಆಳವಾಗಿತ್ತು. ಹೀಗಾಗಿ ಆಗಾಗ ಈ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಿವೆ. ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿನ ರಸ್ತೆ ಗುಂಡಿಗಳು ಮರಣದ ಗುಂಡಿಗಳಾಗಿವೆ. ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಹಾಗೂ ಇತರೆ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ರಸ್ತೆಗಳು ಹೆದಗೆಟ್ಟಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನಿಗಿನ ರಸ್ತೆಗುಂಡಿ ಅಪಘಾತ ಪ್ರಕರಣಗಳು
ಪ್ರಕರಣ -1: ಕಳೆದ ಸೆ.7ರಂದು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿನ ಗುಂಡಿಗೆ ದ್ವಿಚಕ್ರ ವಾಹನ ಉರುಳಿ ಬಿದ್ದು ಸವಾರ ಖುರ್ಷಿದ್ ಅಹ್ಮದ್(65) ಸ್ಥಳದಲ್ಲೇ ಮೃತಪಟ್ಟಿದ್ದರು. ಮೈಕೋ ಲೇಔಟ್‌ನ ಬಿಸ್ಮಿಲಾ ನಗರದ ನಿವಾಸಿ ಖುರ್ಷಿದ್ ಅಹ್ಮದ್ ಅಂಗವಿಕಲರಾಗಿದ್ದು, ಸಣ್ಣಪುಟ್ಟಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಎರಡು ಪ್ರತ್ಯೇಕ ಚಕ್ರ ಅಳವಡಿಸಿಕೊಂಡು ಓಡಾಡುತ್ತಿದ್ದರು.
ಪ್ರಕರಣ- 2: ಕಳೆದ ಅ.8ರಂದು ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಬಳಿ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ರಸ್ತೆಗೆ ಬಿದ್ದು, ಹಿಂಬದಿ ಕುಳಿತ್ತಿದ್ದ ಗೋರಿಪಾಳ್ಯ ನಿವಾಸಿ ನೂಫಿಯಾ(17) ಮೇಲೆ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಳು. ಸವಾರ ಅರ್ಹಾನ್(28) ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ದ್ವಿಚಕ್ರ ವಾಹನದ ಚಕ್ರ ಗುಂಡಿಗೆ ಇಳಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ನೂಫಿಯಾ ಸೊಂಟದ ಮೇಲೆ ಹರಿದಿತ್ತು.
ಪ್ರಕರಣ-3: ಕಳೆದ ಸೆ.16ರಂದು ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಗುಂಡಿ ತಪ್ಪಿಸುವಾಗ ಹಿಂದಿನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿಯಾಗಿ ಶಿರಸಿ ಮೂಲದ ಮನೋಜ್(28) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರರ ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣ-4: ಕಳೆದ ಸೆ.17ರಂದು ರಾತ್ರಿ 11.30ರ ಸುಮಾರಿಗೆ ಹೆಸರಘಟ್ಟಮುಖ್ಯರಸ್ತೆಯಲ್ಲಿ ಕಾಮಗಾರಿ ನಿಮಿತ್ತ ತೆಗೆಯಲಾಗಿದ್ದ ಗುಂಡಿಗೆ ದ್ವಿಚಕ್ರ ವಾಹನ ಸಹಿತ ಬಿದ್ದು ಸವಾರ ಆನಂದ್(47) ಮೃತಪಟ್ಟಿದ್ದರು.