ಸುಲಿಗೆ ಯತ್ನ ವಿವಾದದಲ್ಲಿ ಸಿಲುಕಿರುವ ರಾಜ್ ನ್ಯೂಸ್ ಕಾರ್ಯನಿರ್ವಾಹಕ ಎನ್ನಲಾದ ರಾಜಾನುಕುಂಟೆ ವೆಂಕಟೇಶ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಮತ್ತೊಂದು ಸುಲಿಗೆ ಪ್ರಕರಣ ದಾಖಲಾಗಿದೆ.
ಬೆಂಗಳೂರು (ಜು.07): ಸುಲಿಗೆ ಯತ್ನ ವಿವಾದದಲ್ಲಿ ಸಿಲುಕಿರುವ ರಾಜ್ ನ್ಯೂಸ್ ಕಾರ್ಯನಿರ್ವಾಹಕ ಎನ್ನಲಾದ ರಾಜಾನುಕುಂಟೆ ವೆಂಕಟೇಶ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಮತ್ತೊಂದು ಸುಲಿಗೆ ಪ್ರಕರಣ ದಾಖಲಾಗಿದೆ. ಇಂದಿರಾ ನಗರದ 80 ಅಡಿ ರಸ್ತೆಯ ಮೈಕಲ್ ಪಾಳ್ಯ ಸಮೀಪದ ಸಹರಾ ಇಂಟರ್ ನ್ಯಾಷನಲ್ ಸ್ಪಾದ ವ್ಯವಸ್ಥಾಪಕ ಮಹೇಶ್ ಶೆಟ್ಟಿಗೆ ಬೆದರಿಸಿ 1 ಲಕ್ಷ ರು ಸುಲಿಗೆ ಮಾಡಿದ್ದು, ಈ ಬಗ್ಗೆ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ರಾಜ್ ನ್ಯೂಸ್ ಸಿಇಒ ವೆಂಕಟೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈಗಾಗಲೇ ಇಂದಿರಾನಗರದ ಮತ್ತೊಂದು ಸ್ಪಾನ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರು ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್ ಬಂಧನವಾಗಿದೆ.
ವಿಡಿಯೋ ಇದೆ ಎಂದು ಬೆದರಿಸಿ ಸುಲಿಗೆ: ಜೂ.20 ರಂದು ನನ್ನ ಮೊಬೈಲ್‌ಗೆ ಕರೆ ಮಾಡಿ ರಾಜ್ ಟಿವಿ ಸಿಇಓ ವೆಂಕಟೇಶ್ ಎಂದು ಪರಿಚಯಿಸಿಕೊಂಡ. ಬಳಿಕ ನಿಮ್ಮ ಸ್ಪಾ ಬಗ್ಗೆ ಮಾತನಾಡಬೇಕಿದೆ ಎಂದು ಹೇಳಿ ಯಲಹಂಕ ಉಪನಗರದ ಬಳಿಗೆ ಬರುವಂತೆ ಆತ ಸೂಚಿಸಿದ. ಅಂತೆಯೇ ಪೂರ್ವನಿಗದಿತ ಸಮಯಕ್ಕೆ ಆತನನ್ನು ಭೇಟಿಯಾಗಿದ್ದೆ. ಆಗ ವಿಡಿಯೋವೊಂದನ್ನು ತೋರಿಸಿ ನಿಮ್ಮ ಸ್ಪಾನಲ್ಲಿ ಅನೈತಿಕ ಚಟುವಿಟಕೆ ನಡೆಯುತ್ತಿದೆ. ನೀವು 25 ಲಕ್ಷ ರು ಕೊಟ್ಟರೆ ವಿಡಿಯೋ ಡಿಲೀಟ್ ಮಾಡುತ್ತೇನೆ. ಇಲ್ಲದೆ ಹೋದರೆ ನನ್ನ ಚಾನೆಲ್‌ನಲ್ಲಿ ಪ್ರಸಾರ ಮಾಡುತ್ತೇನೆ ಎಂದು ಬೆದರಿಸಿದ್ದಾಗಿ ದೂರಿನಲ್ಲಿ ಮಹೇಶ್ ಶೆಟ್ಟಿ ಉಲ್ಲೇಖಿಸಿದ್ದಾರೆ.
ಈ ಬ್ಲ್ಯಾಕ್‌ಮೇಲ್ ಬಗ್ಗೆ ನನ್ನ ಸ್ಪಾ ಮಾಲಿಕ ಮಧುಸೂಧನ್ ಅವರಿಗೆ ತಿಳಿಸಿದೆ. ಆದರೆ ನಗರದಿಂದ ಹೊರ ಇದ್ದ ಕಾರಣ ಅವರು ನನಗೆ ಪ್ರಕರಣ ಇತ್ಯರ್ಥಪಡಿಸುವಂತೆ ಹೇಳಿದರು. ಅಂತೆಯೇ ವೆಂಕಟೇಶ್ ಅವರನ್ನು ಸಂಪರ್ಕಿಸಿ ನನ್ನ ಬಳಿ ತಾವು ಹೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲವೆಂದು ಹೇಳಿದೆ. ಇದಾದ ಬಳಿಕ ಪದೇ ಪದೇ ಕರೆ ಮಾಡಿ ಹಣಕ್ಕೆ ವೆಂಕಟೇಶ್ ಒತ್ತಾಯಿಸಿದ್ದ. ಅಂತಿಮವಾಗಿ 1 ಲಕ್ಷ ರು ಆತನಿಗೆ ಹಂತ ಹಂತವಾಗಿ ಪಾವತಿಸಿದೆ. ಅಲ್ಲದೆ ಪ್ರತಿ ತಿಂಗಳು 19ನೇ ತಾರೀಖು 20 ಸಾವಿರ ಹಣ ನೀಡುವಂತೆ ವೆಂಕಟೇಶ್ ತಾಕೀತು ಮಾಡಿದ್ದ ಎಂದು ಶೆಟ್ಟಿ ಹೇಳಿದ್ದಾರೆ.
100 ಜನರಿಗೆ ದಿವ್ಯಾ ವಸಂತ ಗ್ಯಾಂಗ್ ಸುಲಿಗೆ: ರಾಜ್ಯವೇ ಖುಷಿಪಡುವ ನ್ಯೂಸ್ ಕೊಟ್ಟವಳು ನಾಪತ್ತೆ!
ದಿವ್ಯಾ ವಸಂತ ಪತ್ತೆಗೆ ಹುಡುಕಾಟ: ಈ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಿರೂಪಕಿ ದಿವ್ಯಾ ವಸಂತ ಗ್ಯಾಂಗ್ ಪತ್ತೆಗೆ ಜೆ.ಬಿ.ನಗರ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ನಂತರ ಆಕೆ ತಲೆಮರೆಸಿಕೊಂಡಿದ್ದಾಳೆ.