
ಬೆಂಗಳೂರು (ಡಿ.27): ಮಾಜಿ ಸಂಸದ ಡಿ.ಕೆ.ಸುರೇಶ್ ತಂಗಿ ಎಂದು ನಂಬಿಸಿ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ.ಚಿನ್ನಾಭರಣ ಸಾಲ ಪಡೆದು ವಂಚನೆ ಆರೋಪ ಪ್ರಕರಣದ ಆರೋಪಿ ಬಂಗಾರಿ ಗೌಡ (ಹೆಸರು ಬದಲಿಸಲಾಗಿದೆ) ವಿರುದ್ಧ ಈ ಹಿಂದೆ ದಾಖಲಾಗಿದ್ದ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ವೈದ್ಯ ದಂಪತಿಗೆ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಕೊಡಿಸುವುದಾಗಿ 6.2 ಕೋಟಿ ರು. ಪಡೆದು ವಂಚಿಸಿದ ಆರೋಪದಡಿ ಬಂಗಾರಿ ಗೌಡ ವಿರುದ್ಧ ಕಳೆದ ಫೆಬ್ರವರಿಯಲ್ಲಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಸದ್ಯ ಈ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.
ಏನಿದು ವಂಚನೆ ಪ್ರಕರಣ? ದೂರುದಾರ ವಿಜಯನಗರ ನಿವಾಸಿ ಡಾ.ಗಿರೀಶ್ ಮತ್ತು ಅವರ ಪತ್ನಿ ಡಾ.ಮಂಜುಳಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. 2022ನೇ ಸಾಲಿನಲ್ಲಿ ಬಂಗಾರಿ ಗೌಡ ಕಾಸ್ಮಿಟಿಕ್ ಸರ್ಜರಿ ಮಾಡಿಸಲು ಆಸ್ಪತ್ರೆಗೆ ಬಂದಿದ್ದಾಗ ಡಾ.ಗಿರೀಶ್ ದಂಪತಿಗೆ ಪರಿಚಿತರಾಗಿದ್ದಾರೆ. ಈ ವೇಳೆ ನಾನು ರಿಯಲ್ ಎಸ್ಟೇಟ್, ಫೈನಾನ್ಸ್ ವ್ಯವಹಾರ ಮಾಡುತ್ತಿದ್ದೇನೆ. ಜತೆಗೆ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರ ಸಹ ಮಾಡುತ್ತಿದ್ದೇನೆ ಎಂದು ಬಂಗಾರಿ ಗೌಡ ಹೇಳಿಕೊಂಡಿದ್ದಾರೆ.
ನೂರಕ್ಕೆ ನೂರು ಸಿದ್ದರಾಮಯ್ಯ ಹೆಸರನ್ನು ಕೆ.ಆರ್.ಎಸ್.ರಸ್ತೆಗೆ ಇಡ್ತಿವಿ: ಶಾಸಕ ಕೆ.ಹರೀಶ್ ಗೌಡ
ಇದೇ ಸಮಯಕ್ಕೆ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಡಾ.ಗಿರೀಶ್ ದಂಪತಿ ಯೋಚಿಸಿದ್ದು, ಈ ವಿಚಾರವನ್ನು ಬಂಗಾರಿ ಗೌಡ ಬಳಿ ಹೇಳಿಕೊಂಡಿದ್ದಾರೆ. ಈ ವೇಳೆ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಕೊಡಿಸುವುದಾಗಿ ಬಂಗಾರಿ ಗೌಡ ಹೇಳಿದ್ದಾರೆ. ಈಕೆಯ ಮಾತು ನಂಬಿದ ಡಾ.ಗಿರೀಶ್, ಮೊದಲಿಗೆ ಆನ್‌ಲೈನ್ ಮುಖಾಂತರ 2.75 ಕೋಟಿ ರು. ಮತ್ತು 3.25 ಕೋಟಿ ರು. ನಗದು ಹಣವನ್ನು ಬಂಗಾರಿ ಗೌಡಗೆ ನೀಡಿದ್ದಾರೆ. ಬಳಿಕ ಬಂಗಾರಿ ಗೌಡ ಕಾರು ಕೊಡಿಸದೆ ಸಬೂಬು ಹೇಳಿ ಮೋಸ ಮಾಡಿದ್ದಾರೆ.
ಹಣ ವಾಪಸ್ ಕೇಳಿದ್ದಕ್ಕೆ ಅತ್ಯಾಚಾರ ಕೇಸ್ ಬೆದರಿಕೆ: ಡಾ.ಗಿರೀಶ್ ಅವರು 2023ರ ಡಿಸೆಂಬರ್‌ನಲ್ಲಿ ಬಂಗಾರಿ ಗೌಡಗೆ ಕರೆ ಮಾಡಿ ಹಣ ವಾಪಾಸ್ ನೀಡುವಂತೆ ಕೇಳಿದಾಗ, ವಿಜಯನಗರ ಕ್ಲಬ್ ಬಳಿ ಬರುವಂತೆ ಆಕೆ ಕರೆದಿದ್ದಾರೆ. ಅದರಂತೆ ಡಾ.ಗಿರೀಶ್ ದಂಪತಿ ವಿಜಯನಗರ ಕ್ಲಬ್‌ಗೆ ತೆರಳಿ ಹಣ ವಾಪಾಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಬಂಗಾರಿ ಗೌಡ ಏಕಾಏಕಿ ದಂಪತಿಯನ್ನು ನಿಂದಿಸಿದ್ದು, ಹಣ ಕೇಳಿದರೆ, ನಿಮ್ಮ ವಿರುದ್ಧ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಮಾಧ್ಯಮಗಳ ಎದುರು ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾರೆ. ಈ ವಿಷಯವನ್ನು ಇಲ್ಲಿಗೆ ಬಿಡಬೇಕಾದರೆ, 5 ಲಕ್ಷ ರು. ಹಣ ಕೊಡಬೇಕು ಎಂದು ಬೇಡಿಕೆ ಇರಿಸಿ, ಡಾ.ಗಿರೀಶ್ ಅವರಿಂದ 2 ಲಕ್ಷ ರು. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿಯವರಿಗೆ ವಿರೋಧಿಸುವುದು ಬಿಟ್ಟು ಬೇರೆ ಕೆಲಸ ಇಲ್ಲ: ಎಂ.ಲಕ್ಷ್ಮಣ್
ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ: ಬಂಗಾರಿ ಗೌಡ ನನಗೆ ಒಟ್ಟು 6.2 ಕೋಟಿ ರು. ಹಣ ಪಡೆದು ವಂಚನೆ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ಗಿರೀಶ್ ಅವರು ಕಳೆದ ಫೆಬ್ರವರಿಯಲ್ಲಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ನಡುವೆ ಹೈಕೋರ್ಟ್ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ