
ಬೆಂಗಳೂರು(ಅ.14): ಮಾದಕ ವಸ್ತು ಮಾರಾಟ ಜಾಲ ನಂಟು ಪ್ರಕರಣ ಸಂಬಂಧ ಖ್ಯಾತ ನಟಿ ರಾಗಿಣಿ ದ್ವಿವೇದಿ ಸ್ನೇಹ ಬಳಗದ ಮತ್ತೊಬ್ಬ ಚಿಕ್ಕಮಗಳೂರಿನಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರಿನ ಬಸವೇಶ್ವ ನಗರದ ಅಶ್ವಿನ್ ಭೋಗಿ ಬಂಧಿತನಾಗಿದ್ದು, ಕೃತ್ಯ ಬೆಳಕಿಗೆ ಬಂದ ದಿನದಿಂದಲೂ ಪೊಲೀಸರ ಕೈಗೆ ಸಿಗದೆ ಆತ ತಲೆಮರೆಸಿಕೊಂಡಿದ್ದ. ಕೊನೆಗೆ ಚಿಕ್ಕಮಗಳೂರಿನಲ್ಲಿ ಆಶ್ರಯ ಪಡೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಅಶ್ವಿನ್ 9ನೇ ಆರೋಪಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನನಗೆ ಹುಷಾರಿಲ್ಲ, ಆಸ್ಪತ್ರೆಗೆ ಕಳಿಸಿ: ಕೋರ್ಟ್‌ಗೆ ರಾಗಿಣಿ
ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಅಶ್ವಿನ್, ತನ್ನ ಕುಟುಂಬದ ಜತೆ ಬಸವೇಶ್ವರ ನಗರದಲ್ಲಿ ನೆಲೆಸಿದ್ದ. ಹಲವು ವರ್ಷಗಳಿಂದ ನಟಿ ರಾಗಿಣಿ ಸ್ನೇಹಿತ ಹಾಗೂ ಸಾರಿಗೆ ಇಲಾಖೆ ನೌಕರ ರವಿಶಂಕರ್ ಜತೆ ಅಶ್ವಿನ್‌ಗೆ ಒಡನಾಟವಿತ್ತು. ಇದೇ ಗೆಳೆತನದಲ್ಲೇ ಆತನಿಗೆ ರಾಗಿಣಿ ಸಹ ಪರಿಚಯವಾಗಿದ್ದಳು. ಬಳಿಕ ಹೋಟೆಲ್, ಪಬ್, ಕ್ಲಬ್, ರೆಸಾರ್ಟ್ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರವಿಶಂಕರ್ ಜತೆ ಅಶ್ವಿನ್ ಸಹ ಪಾಲ್ಗೊಳ್ಳುತ್ತಿದ್ದ. ಹಾಗೆಯೇ ಡ್ರಗ್ಸ್ ವ್ಯಸನಿ ಕೂಡಾ ಆಗಿದ್ದ. ಕೆಲವು ಬಾರಿ ಮಾದಕ ವಸ್ತು ಮಾರಾಟಕ್ಕೂ ಆತ ಸಹಕರಿಸಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಿಸಿಬಿ ಗಾಳಕ್ಕೆ ರವಿಶಂಕರ್ ಸಿಕ್ಕಿಬಿದ್ದ ವಿಷಯ ತಿಳಿದ ತಕ್ಷಣವೇ ಬಂಧನ ಭೀತಿಯಿಂದ ಅಶ್ವಿನ್ ನಗರ ತೊರೆದಿದ್ದ. ಬೆಂಗಳೂರಿನಿಂದ ಹೊರಟ ಅಶ್ವಿನ್, ಉಡುಪಿ, ಮಂಗಳೂರು, ಹಾಸನ ಹೀಗೆ ಸುತ್ತಾಡಿ ಕೊನೆಗೆ ಚಿಕ್ಕಮಗಳೂರಿನಲ್ಲಿ ಪರಿಚಿತರೊಬ್ಬರ ಆಶ್ರಯದಲ್ಲಿ ಆತ ಅಡಗಿರುವ ಸುಳಿವು ಲಭಿಸಿತು. ಅದರನ್ವಯ ಚಿಕ್ಕಮಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ