
ವಿಜಯವಾಡ: ಪತ್ನಿ ತನ್ನಿಂದ ವಿಚ್ಛೇದನ ಕೇಳಲು ಆಕೆಯ ಪೋಷಕರೇ ಕುಮಕ್ಕು ನೀಡಿದ್ದಾರೆ ಎಂದು ಸಿಟ್ಟುಗೊಂಡ ಗಂಡನೋರ್ವ ತನಗೆ ಹೆಣ್ಣು ಕೊಟ್ಟ ಅತ್ತೆಯನ್ನೇ ಹೊಡೆದು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಪೊಲೀಸರು ಹೇಳುವ ಪ್ರಕಾರ ವಿಜಯವಾಡದ ವೈಎಸ್‌ಆರ್ ಕಾಲೋನಿಯಲ್ಲಿ ವಾಸ ಇರುವ ಗುಗ್ಗುಲಾ ಗುರುಸ್ವಾಮಿ (Gogula Guruswamy) ಹಾಗೂ ನಾಗಮಣಿ (Nagamani) ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ 2ನೇ ಮಗಳಾದ ಲಲಿತಾ ಎಂಬಾಕೆಯನ್ನು ಕಂಭಾ ರಾಜೇಶ್ (Kambha Rajesh) ಎಂಬಾತನಿಗೆ 15 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಈ ದಾಂಪತ್ಯದಲ್ಲಿ ಇಬ್ಬರು ಮಕ್ಕಳಿದ್ದರು. ವೈಯಕ್ತಿಕ ವಿಚಾರಕ್ಕೆ ದಂಪತಿಯಲ್ಲಿ ಆಗಾಗ ಕಲಹಗಳಾಗುತ್ತಿದ್ದಿದ್ದರಿಂದ ಲಲಿತಾ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಗೆ ಬಂದು ಅಲ್ಲೇ ವಾಸ ಮಾಡುತ್ತಿದ್ದಳು. ಇತ್ತೀಚೆಗೆ ಆಕೆ ತನ್ನ ಪತಿಗೆ ವಿಚ್ಛೇದನ ನೋಟೀಸ್ ಕೂಡ ಕಳುಹಿಸಿದ್ದಳು.
ಓದಿಸಿ ಎಸ್‌ಡಿಎಂ ಮಾಡಿದ ಗಂಡನನ್ನೇ ಜೈಲಿಗಕಿದ್ಲಾ ನ್ಯಾಯಾಧೀಶೆ : ಏನಿದು ಪ್ರಕರಣ?
ಡಿವೋರ್ಸ್ ನೋಟೀಸ್ ಮನೆ ತಲುಪುತ್ತಿದ್ದಂತೆ ಸಿಟ್ಟಿಗೆದ್ದ ರಾಜೇಶ, ತನ್ನ ಪತ್ನಿ ವಿಚ್ಛೇದನ ಪಡೆಯುವುದಕ್ಕೆ ಆಕೆಯ ಪೋಷಕರೇ ಬೆಂಬಲ ನೀಡುತ್ತಿದ್ದಾರೆ ಎಂದು ಭಾವಿಸಿದ್ದು, ಹೀಗಾಗಿ ತನ್ನ ಅತ್ತೆ ಮಾವನ ಮುಗಿಸಿಬಿಡಲು ನಿರ್ಧರಿಸಿದ್ದಾನೆ. ಇದಕ್ಕಾಗಿ ಸರಿಯಾದ ಸಮಯಕ್ಕೆ ರಾಜೇಶ್ ಕಾಯುತ್ತಿದ್ದು, ಅದಕ್ಕೆತಕ್ಕಂತೆ ಶನಿವಾರ ಸಂಜೆ ತನ್ನ ಅತ್ತೆ ಮಾವ ಅವರ ದೊಡ್ಡ ಮಗಳ ಮನೆಗೆ ಬೈಕ್‌ನಲ್ಲಿ ಹೋಗುತ್ತಾರೆ ಎಂಬ ವಿಚಾರ ರಾಜೇಶ್‌ಗೆ ತಿಳಿದಿದೆ. ಕೂಡಲೇ ಆತ ತೆಂಗಿನ ಕಾಯಿ ಕತ್ತರಿಸುವ ಕತ್ತಿ ಹಿಡಿದುಕೊಂಡು ಬೈಕ್‌ನಲ್ಲಿ ತನ್ನ ಅತ್ತೆ ಮಾವನನ್ನು ಹಿಂಬಾಲಿಸಿದ್ದಾನೆ.
ಚಿಟ್ಟಿನಗರದ ಛಮುಲು ವೆಂಕಟರಾವ್ ಫ್ಲೈಒವರ್ ಬಳಿ ಆತ ತನ್ನ ಅತ್ತೆಯ ಮೇಲೆ ಕತ್ತಿ ಬೀಸಿದ್ದು, ಕೂಡಲೇ ಅವರು ಬೈಕ್‌ನಿಂದ ಬಿದ್ದಿದ್ದಾರೆ. ಬೈಕ್‌ನಿಂದ ಕೆಳಗೆ ಬಿದ್ದವರಿಗೆ ಆತ ಹಲವು ಬಾರಿ ಕತ್ತಿಯಿಂದ ಕಡಿದಿದ್ದಾನೆ. ನಂತರ ಮಾವ ಗುರುಸ್ವಾಮಿಯನ್ನು ಕೂಡ ಬೆನ್ನಟ್ಟಿದ್ದು, ಆತ ಅಳಿಯನಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅತ್ತೆ ನಾಗಮಣಿ ಸತ್ತಿದ್ದಾಳೆ ಎಂಬುದು ಖಚಿತವಾದ ನಂತರವೇ ಆತ ಸ್ಥಳದಿಂದ ಹೊರಟು ಹೋಗಿದ್ದಾನೆ.
ನಂತರ ಈ ವಿಚಾರ ಪೊಲೀಸರಿಗೆ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ನಾಗಮಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಜಯವಾಡದ ಜಿಜಿಹೆಚ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಬಳಿಕ ರಾಜೇಶ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು 2 ತಂಡ ರಚನೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಗಳು ಲಲಿತಾ ಮಾತನಾಡಿದ್ದು, ರಾಜೇಶ್ ಎಂದಿಗೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ, ವಿವಿಧ ದುಶ್ಚಟಗಳಿಗೆ ದಾಸನಾಗಿದ್ದ ಆತ ಸದಾ ಕಿರುಕುಳ ನೀಡುತ್ತಿದ್ದ, ಆತನ ಕಿರುಕುಳ ತಾಳಲಾರದೇ ತಾನು ತವರು ಮನೆ ಸೇರಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ