ಕುಡಿತ ಬಿಡಿಸಲು ಯತ್ನಿಸಿದ್ದಕ್ಕೆ ಸಿಟ್ಟಿನಲ್ಲಿ ಪೋಷಕರು ಸೇರಿ 6 ಮಂದಿಗೆ ಚಾಕು ಇರಿದು, ಕಾರಿನ ಗಾಜು ಒಡೆದ!

By Kannadaprabha News  |  First Published Sep 10, 2022, 11:40 AM IST

ಮದ್ಯ ವ್ಯಸನ ಬಿಡಿಸಲು ತನ್ನನ್ನು ಪುನರ್ವಸತಿ ಕೇಂದ್ರಕ್ಕೆ ಹಾಕುತ್ತಾರೆ ಎಂದು ತನ್ನ ತಂದೆ-ತಾಯಿ ಸೇರಿದಂತೆ ಐದಾರು ಮಂದಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಯುವಕನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಸೆ.10): ಮದ್ಯ ವ್ಯಸನ ಬಿಡಿಸಲು ತನ್ನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದಕ್ಕೆ ಮುಂದಾದ ಪೋಷಕರ ವಿರುದ್ಧ ಸಿಟ್ಟಿಗೆದ್ದ ಯುವಕನೊಬ್ಬ, ತನ್ನ ತಂದೆ-ತಾಯಿ ಸೇರಿದಂತೆ ಐದಾರು ಮಂದಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಲ್ಲದೆ, 12ಕ್ಕೂ ಹೆಚ್ಚಿನ ಕಾರುಗಳ ಗಾಜು ಒಡೆದು ಪುಂಡಾಟಿಕೆ ನಡೆಸಿದ ಘಟನೆ ಯಶವಂತಪುರ ಸಮೀಪ ನಡೆದಿದೆ. ಸುಬೇದಾರ್‌ಪಾಳ್ಯದ ತೇಜಸ್‌ ಬಂಧಿತನಾಗಿದ್ದು, ಮದ್ಯ ಸೇವನೆ ಬಿಡಿಸಲು ಗುರುವಾರ ರಾತ್ರಿ ಆತನನ್ನು ಪುನವರ್ಸತಿ ಕೇಂದ್ರಕ್ಕೆ ಕಳುಹಿಸಲು ತೇಜಸ್‌ ಪೋಷಕರು ಮುಂದಾದಾಗ ಈ ಕೃತ್ಯ ನಡೆದಿದೆ. ಈ ಘಟನೆಯಲ್ಲಿ ತೇಜಸ್‌ನ ತಂದೆ, ತಾಯಿ ಹಾಗೂ ಸೋದರ ಮಾವ ಸೇರಿ ಐವರಿಗೆ ಗಾಯವಾಗಿದೆ. ಅಲ್ಲದೆ ಆತನ ಮನೆ ದಾರಿಯಲ್ಲಿ ನಿಲ್ಲಿಸಿದ್ದ 12ಕ್ಕೂ ಹೆಚ್ಚಿನ ಕಾರುಗಳ ಗಾಜು ಒಡೆದಿವೆ ಎಂದು ಪೊಲೀಸರು ವಿವರಿಸಿದ್ದಾರೆ. ತನ್ನ ಕುಟುಂಬದವರ ಮೇಲೆ ಗಲಾಟೆ ಮಾಡಿಕೊಂಡು ಮನೆಯಿಂದ ಹೊರಬಂದ ತೇಜಸ್‌, ಅದೇ ವೇಳೆ ಆತನ ಮನೆ ರಸ್ತೆಯಲ್ಲಿ ಬಂದ ಗಣೇಶ ಮೂರ್ತಿ ಮೆರವಣಿಗೆಗೆ ಚಾಕು ಹಿಡಿದುಕೊಂಡು ನುಗ್ಗಿದ್ದಾನೆ. ತಕ್ಷಣವೇ ಎಚ್ಚೆತ್ತು ಮೆರವಣಿಗೆ ಭದ್ರತೆಯಲ್ಲಿದ್ದ ಪೊಲೀಸರು, ತೇಜಸ್‌ನನ್ನು ವಶಕ್ಕೆ ಪಡೆದು ಠಾಣೆ ಕರೆತಂದಿದ್ದಾರೆ. ಇದರಿಂದ ಸಂಭವನೀಯ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕುಡುಕ ಮಗನ ಸಹಿಸಲಾರದ ಪೋಷಕರು: ಆಟೋ ಚಾಲಕ ರಾಮಚಂದ್ರಯ್ಯ ಅವರು, ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ಸುಬೇದಾರ್‌ ಪಾಳ್ಯದಲ್ಲಿ ನೆಲೆಸಿದ್ದಾರೆ. ಕೆಲಸಕ್ಕೆ ಹೋಗದೆ ಅವರ ಪುತ್ರ ತೇಜಸ್‌ ವಿಪರೀತ ಮದ್ಯ ವ್ಯಸನಿಯಾಗಿದ್ದ. ಈತನ ರಗಳೆ ಸಹಿಸಲಾರದೆ ತೇಜಸ್‌ ಪೋಷಕರು, ಗುರುವಾರ ರಾತ್ರಿ ಆತನನ್ನು ಕರೆದುಕೊಂಡು ಹೋಗಲು ಪುನರ್ವಸತಿ ಕೇಂದ್ರದ ಸಿಬ್ಬಂದಿ ಬಂದಾಗ ಅವರೊಂದಿಗೆ ಹೋಗಲು ತೇಜಸ್‌ ನಿರಾಕರಿಸಿದ್ದಾನೆ. ಆಗ ಮಗನಿಗೆ ಬುದ್ಧಿ ಮಾತು ಹೇಳಲು ಮುಂದಾದ ಪೋಷಕರ ವಿರುದ್ಧ ಆತ ರೊಚ್ಚಿಗೆದ್ದು, ಮನೆಯಲ್ಲಿದ್ದ ಚಾಕು ತೆಗೆದುಕೊಂಡು ತನ್ನ ತಂದೆ, ತಾಯಿ, ಸೋದರ ಮಾವನ ಸೇರಿ ಐವರಿಗೆ ಚುಚ್ಚಿದ್ದಾನೆ. ಬಳಿಕ ಮನೆಯಿಂದ ಹೊರ ಬಂದು ರಸ್ತೆಯಲ್ಲಿ ನಿಂತಿದ್ದ ಕಾರುಗಳ ಗಾಜು ಒಡೆದು ಪುಂಡಾಟಿಕೆ ಮಾಡಿದ್ದಾನೆ.

Tap to resize

Latest Videos

ಮಹಿಳೆ ಕೊಲೆಗೈದು ಚಿನ್ನಾಭರಣ ದರೋಡೆ: ಶವ ನದಿಗೆ ಎಸೆದು ದುಷ್ಕರ್ಮಿಗಳು ಎಸ್ಕೇಪ್‌

ಗಾಂಜಾ ಪೆಡ್ಲರ್‌ ಸೆರೆ
ಬೆಂಗಳೂರು: ನಗರದ ಬಿನ್ನಿ ಕ್ಯಾಂಟೀನ್‌ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದ ಪೆಡ್ಲರ್‌ವೊಬ್ಬನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಾಗಡಿ ರಸ್ತೆಯ ನಾಗಮ್ಮ ನಗರದ ನಿವಾಸಿ ಗೋಪಿ ಅಲಿಯಾಸ್‌ ನಾರಾಯಣ ಬಂಧಿತನಾಗಿದ್ದು, ಆರೋಪಿಯಿಂದ .50 ಸಾವಿರ ಮೌಲ್ಯದ 2.1 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಪೊಲೀಸರಿಗೆ ಆಟಿಕೆ ಪಿಸ್ತೂಲ್‌ ತೋರಿಸಿ ತಪ್ಪಿಸಿಕೊಂಡಿದ್ದ ಡ್ರಗ್ಸ್‌ ಪೆಡ್ಲರ್‌ ಬಂಧನ

ಬಿನ್ನಿ ಕ್ಯಾಂಟೀನ್‌ ಸಮೀಪ ಗಾಂಜಾ ಮಾರಾಟಕ್ಕೆ ಆರೋಪಿ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ. ಗೋಪಿ ವೃತ್ತಿಪರ ಕ್ರಿಮಿನಲ್‌ ಆಗಿದ್ದು, ಆತನ ಮೇಲೆ ಕೊಲೆ ಯತ್ನ ಹಾಗೂ ಗಾಂಜಾ ಮಾರಾಟ ಪ್ರಕರಣ ದಾಖಲಾಗಿವೆ. ಕೋಲಾರದ ಪೆಡ್ಲರ್‌ನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿದ್ದಾಗಿ ಆತ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆ ಪೆಡ್ಲರ್‌ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!