ನೆಟೆರೋಗದಿಂದಾಗಿ ತೊಗರಿ ಸಂಪೂರ್ಣ ಹಾನಿಗೊಳಗಾಗಿದ್ದರಿಂದ ಎದೆ ಒಡೆದುಕೊಂಡಿರುವ ರೈತರು ಸಾಲುಸಾಲು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ.
ಚಿತ್ತಾಪುರ/ಕಾಳಗಿ(ಜ.08): ನೆಟೆರೋಗದಿಂದಾಗಿ ತೊಗರಿ ಸಂಪೂರ್ಣ ಹಾನಿಗೊಳಗಾಗಿದ್ದರಿಂದ ಎದೆ ಒಡೆದುಕೊಂಡಿರುವ ರೈತರು ಸಾಲುಸಾಲು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಈಗಾಗಲೇ ಐವರು ರೈತರು ಆತ್ಮಹತ್ಯೆ ಮಾಡಿಕೊಂಡು ತೊಗರಿ ಕಣಜದಲ್ಲೆಲ್ಲಾ ಆಕ್ರಂದನ ಮುಗಿಲು ಮುಟ್ಟಿರುವಾಗ ಶುಕ್ರವಾರ ಹಾಗೂ ಶನಿವಾರ ಚಿತ್ತಾಪುರ ಹಾಗೂ ಕಾಳಗಿಯಲ್ಲಿ ಮತ್ತಿಬ್ಬರು ತೊಗರಿ ರೈತರು ಆತ್ಮಹತ್ಯೆ ಮಾಡಿಕೊಂಡು ಸಾವಿನ ಮನೆ ಸೇರಿರುವ ದಾರಣ ಘಟನೆಗಳು ಸಂಭವಿಸಿವೆ.
ತಾಲೂಕು ಕೇಂದ್ರ ಕಾಳಗಿ ಸಮೀಪದ ಕೊಡದೂರ ಗ್ರಾಮದಲ್ಲಿ ತೊಗರಿ ರೈತ ಸಂತೋಷ ಹರಿಶ್ಚಂದ್ರ ಜಾಧವ್ (39) ಊರಲ್ಲಿನ ಮೊಬೈಲ್ ಟವರ್ ಹತ್ತಿ ತುತ್ತತುದಿಗೆ ಹೋಗಿ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಊರವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಗೋಪುರದ ಮೇಲುಗಡೆ ನೇತಾಡುತ್ತಿದ್ದ ರೈತನ ಶವ ತೆಗೆಯಲು ಪೊಲೀಸರು, ಮನೆಮಂದಿ ಎಲ್ಲರೂ ಹರಸಾಹಸ ಪಡಬೇಕಾಯ್ತು.
undefined
ಕಲಬುರಗಿ: ತೊಗರಿ ಕಣಜದಲ್ಲಿ ರೈತರ ಆತ್ಮಹತ್ಯೆ..!
ಬ್ಯಾಂಕ್‌ನಿಂದ 2 ಲಕ್ಷ, ಖಾಸಗಿ 10 ಲಕ್ಷ ಸಾಲ:
ಕೊಡದೂರ ರೈತ ಸಂತೋಷ ಜಾಧವ್‌ಗೆ 1.20 ಎಕರೆ ಜಮೀನಿದೆ. ಅನ್ಯರಿಗೆ ಸೇರಿರುವ 59 ಎಕರೆ ಜಮೀನು ವರ್ಷಕ್ಕೆ ಕಡತಿ ಹಾಕಿಕೊಂಡು ಬೇಸಾಯ ಮಾಡುತ್ತಿದ್ದ. ತನ್ನ ಹೊಲದ ಮೇಲೆಯೇ ಎಸ್‌ಬಿಐನಲ್ಲಿ 3 ಲಕ್ಷ ರು. ಸಾಲ ಪಡೆದು ಉಳುಮೆಗಾಗಿ ಟ್ರ್ಯಾಕ್ಟರ್ ಖರೀದಿಸಿದ್ದ. ಕಳೆದ 2 ವರ್ಷದಿಂದ ತೊಗರಿ ಅಷ್ಟಕ್ಕಷ್ಟೆಬೆಳೆದಿದ್ದರಿಂದ ಸಾಲದ ಕಂತು ಕಟ್ಟುವಲ್ಲಿ ತುಂಬ ತೊಂದರೆ ಪಡುತ್ತಿದ್ದ. ಖಾಸಗಿಯಾಗಿ .10 ಲಕ್ಷ ಸಾಲ ಮಾಡಿ ಒದ್ದಾಡುತ್ತಿದ್ದ ಸಂತೋಷನಿಗೆ ದಿಕ್ಕೇ ತೋಚದಂತಾಗಿತ್ತು ಎಂದು ಹೇಳಲಾಗುತ್ತಿದೆ.
ಕಲಬುರಗಿ: ಒಣಗಿದ ತೊಗರಿ ಬೆಳೆ; ಅನ್ನದಾತರು ಕಂಗಾಲು
59 ಎಕರೆಯಲ್ಲಿನ ಫಸಲು ಹಾಳಾಗಿತ್ತು:
ಈ ವರ್ಷವಂತೂ ಸಂತೋಷ ಜಾಧವ್ ಮಾಡಿರುವ ಹೊಲ, ಆತನ ಸ್ವಂತ ಹೊಲ ಎಲ್ಲಾಕಡೆ ತೊಗರಿ ನೆಟೆರೋಗಕ್ಕೆ ತುತ್ತಾಗಿ ಭಾರಿ ಹಾನಿ ಎದುರಾಗಿತ್ತು. ಇದಿರಂದ ತುಂಬ ನೊಂದಿದ್ದ ಸಂತೋಷ ಸಾಲದ ಚಿಂತೆಯಲ್ಲೇ ಎದೆ ಒಡೆದುಕೊಂಡಿದ್ದ. ಕಡ್ತಿ ಮಾಡಿದವರಿಗೆ ಹಣ ಕೊಡಬೇಕು. ಬ್ಯಾಂಕಿನ ಕಂತು ಕಟ್ಟಬೇಕು, ಖಾಸಗಿಯಾಗಿಯೂ 10 ಲಕ್ಷದಷ್ಟುಸಾಲ ಈತ ಮಾಡಿದ್ದರಿಂದ ಅದನ್ನು ತೀರಿಸುವ ಜವಾಬ್ದಾರಿ ಇತ್ತು. ಮೃತ ರೈತನಿಗೆ ಪತ್ನಿ, 2 ಗಂಡು, 1 ಹೆಣ್ಣು ಮಕ್ಕಳಿದ್ದಾರೆ. ಸಂತೋಷನ ಶವದ ಮುಂದೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ, ಕೊಡದೂರ ಗ್ರಾಮದಲ್ಲಿ ರೈತರೆಲ್ಲರು ಸೇರಿ ಈ ದಾರುಣ ಘಟನೆಗೆ ಕಂಬನಿ ಮಿಡಿದಿದ್ದಾರೆ.
ವಿಷ ಕುಡಿದ ಕಮರವಾಡಿ ರೈತ:
ಚಿತ್ತಾಪುರ ತಾಲೂಕಿನ ಕಮರವಾಡಿಯಲ್ಲಿ ಯುವ ರೈತ ನಾಗಪ್ಪ ಹಣಮಂತ ತಳವಾರ (25) ಸಾಲದ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ತೊಗರಿ ಬೇಸಾಯಗಾರನಾಗಿದ್ದ ಈತ 13 ಎಕರೆ ಅನ್ಯರ ಹೊಲ ಈ ವರ್ಷಕ್ಕೆ ಹಲವು ಷರತ್ತಿನ ಮೇಲೆ ಕಡತಿ ಹಾಕಿಕೊಂಡಿದ್ದ. 13 ಎಕರೆ ಪೂರ್ತಿ ತೊಗರಿ ಬಿತ್ತಿದ್ದ ನಾಗಪ್ಪ ಇನ್ನೇನು ತೊಗರಿ ರಾಶಿಗೆ ಸಿದ್ಧನಾಗಬೇಕು ಎಂದು ಕುಳಿತಿರುವಾಗಲೇ ತನ್ನ ಹೊಲದಲ್ಲಿನ ತೊಗರಿ ಕಾಯಿ ಕಟ್ಟುವಾಗಲೇ ಒಣಗಿ ಹಾಳಾಗಿರೋದರಿಂದ ಕಂಗಾಲಾಗಿದ್ದ. ಖಾಸಗಿಯಾಗಿ ನಾಗಪ್ಪ ಸಾಲ ತುಂಬಾ ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆಯಾದರೂ ಆತನ ಕುಟುಂಬದವರು ದುಃಖದಲ್ಲಿರೋದರಿಂದ ಸಾಲ ಅದೆಷ್ಟಿತ್ತು ಎಂಬುದರ ನಿಖರ ಮಾಹಿತಿ ದೊರಕಿಲ್ಲ. ತೊಗರಿಗೆ ಬಂದಿರುವ ನೆಟೆ ರೋಗವೇ ನಾಗಪ್ಪನ ಬಲಿ ಪಡೆಯಿತು ಎಂದು ಆತನ ಬಂಧುಗಳು ಹಾಗೂ ಕಮರವಾಡಿಯ ರೈತರೆಲ್ಲರೂ ಗೋಳಾಡುತ್ತಿದ್ದಾರೆ. ಊರಲ್ಲಿ ರೈತನ ಸಾವಿಗೆ ಎಲ್ಲರೂ ಕಮ್ಣೀರು ಹಾಕುತ್ತಿದ್ದಾರೆ.