ಕಪ್ಪು ಚರ್ಮ ಹೊಂದಿದ್ದೀಯ ಎಂದು ಪತಿ ಆಗಾಗ್ಗೆ ತನ್ನ ಪತ್ನಿಯನ್ನು ಟೀಕಿಸುತ್ತಿದ್ದ ಹಿನ್ನೆಲೆ ಸಿಟ್ಟಿಗೆದ್ದ ಪತ್ನಿ ಆತನನ್ನು ಕೊಲೆ ಮಾಡಿದ್ದಾಳೆ ಎಂದು ಛತ್ತೀಸ್‌ಗಢ ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಮ್ಮ ಪತ್ನಿ ದಪ್ಪಗಿದ್ದಾಳೆ, ಕಪ್ಪಗಿದ್ದಾಳೆ ಅಂತ ಆಗಾಗ ಆಡಿಕೊಳ್ತಿರ್ತೀರಾ.. ಅಥವಾ ಈ ವಿಷಯವಾಗಿ ಜಗಳವಾಡುತ್ತಿರುತ್ತೀರಾ ಹಾಗೂ ಟೀಕೆ ಮಾಡ್ತಿರುತ್ತೀರಾ.. ಹಾಗಾದ್ರೆ, ನೀವು ಈ ಸ್ಟೋರಿಯನ್ನು ಓದ್ಲೇಬೇಕು. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ತಾನು ಕಪ್ಪಗಿದ್ದೇನೆ ಎಂದು ಆಗಾಗ್ಗೆ ಟೀಕಿಸುತ್ತಿದ್ದ ಪತಿಯನ್ನು 30 ವರ್ಷದ ಪತ್ನಿ ಕೊಡಲಿಯಿಂದ ಕೊಲೆ ಮಾಡಿದ್ದಾಳೆಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಈ ಹಿಂದೆಯೂ ಹಲವು ಬಾರಿ ಪತಿ ಹಾಗೂ ಪತ್ನಿ ಜಗಳವಾಡುತ್ತಿದ್ದರು ಎಂದೂ ತಿಳಿದುಬಂದಿದೆ. ಇದೇ ವಿಚಾರವಾಗಿ ಶನಿವಾರ ರಾತ್ರಿ ಮತ್ತೆ ದಂಪತಿ ಜಗಳವಾಡಿದ್ದು, ಈ ಹಿನ್ನೆಲೆ ಆಕ್ರೋಶಗೊಂಡ ಪತ್ನಿ ಸಂಗೀತಾ ತನ್ನ ಗಂಡನ ಮೇಲೆ ಮನೆಯಲ್ಲಿದ್ದ ಕೊಡಲಿಯಿಂದ ದಾಳಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಅಲ್ಲದೆ, ಪತಿಯ ಮರ್ಮಾಂಗವನ್ನೂ ಕತ್ತರಿಸಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.
ಪತಿ ಅನಂತ್ ಸೋನ್ವಾನಿ (40) ಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಸೋಮವಾರ ಸಂಗೀತಾ ಸೋನ್ವಾನಿಯನ್ನು ಬಂಧಿಸಿದ್ದಾರೆ. ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಅಮ್ಲೇಶ್ವರ ಗ್ರಾಮದಲ್ಲಿ ಭಾನುವಾರ ರಾತ್ರಿ ಆಕೆಯನ್ನು ಬಂಧಿಸಲಾಗಿದೆ ಎಂದು ಪಟಾಣ್ ಪ್ರದೇಶದ ಪೊಲೀಸ್ ಉಪವಿಭಾಗಾಧಿಕಾರಿ ದೇವಾನ್ಶ್ ರಾಥೋರ್ ಮಾಹಿತಿ ನೀಡಿದ್ದಾರೆ. ಇನ್ನು, ಮೃತ ಪತಿಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ನಿಧನರಾದ ಬಳಿಕ ಸಂಗೀತಾಳನ್ನು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ನಾವಿಬ್ಬರು ಬಿಳಿ ಮಗುವೇಕೆ ಕಪ್ಪು: ತಾಯಿ ಜೀವಕ್ಕೆ ಎರವಾಯ್ತು ಕರುಳ ಕುಡಿಯ ಬಣ್ಣ
ಇನ್ನು, ಶನಿವಾರ ರಾತ್ರಿ ಕೊಲೆ ನಡೆದಿದ್ದು ಮರುದಿನ ಬೆಳಗ್ಗೆ, ಆರೋಪಿ ಸಂಗೀತಾ ತನ್ನ ಪತಿಯನ್ನು ಬೇರೆ ಯಾರೋ ಕೊಲೆ ಮಾಡಿದ್ದಾರೆಂದು ಗ್ರಾಮಸ್ಥರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸ್ ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ವಿರುದ್ಧ ಐಪಿಸಿ ಕಾಯ್ದೆ 302 (ಕೊಲೆ) ಹಾಗೂ ಇತರೆ ಸಂಬಂಧಿತ ಸೆಕ್ಷನ್‌ಗಳನ್ನು ಹಾಕಲಾಗಿದೆ ಮತ್ತು ಈ ಸಂಬಂಧ ತನಿಖೆ ಇನ್ನೂ ಮುಂದುವರಿದಿದೆ ಎಂದೂ ಛತ್ತೀಸ್‌ಗಢದ ಪಟಾಣ್ ಪ್ರದೇಶದ ಪೊಲೀಸ್ ಉಪವಿಭಾಗಾಧಿಕಾರಿ ದೇವಾನ್ಶ್ ರಾಥೋರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೊನೆಯ ಸಲ ಮಗಳ ಮುಖ ನೋಡಲೂ ಬಿಡ್ಲಿಲ್ಲ: Ankita Bhandari ತಾಯಿ ಆಕ್ರೋಶ