Bengaluru: ಫಿಲ್ಮ್‌ ಸ್ಟೈಲಲ್ಲಿ ಬಾಲಕನ ಅಪಹರಿಸಿ ಹಣ ಸುಲಿದ ವಿದ್ಯಾರ್ಥಿ!

By Govindaraj SFirst Published Sep 28, 2022, 11:24 AM IST
Highlights

ಇತ್ತೀಚೆಗೆ ಹಣದಾಸೆಯ ತನ್ನ ಪರಿಚಿತ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರ ಮನೆಗೆ ಮುಂಜಾನೆ ನುಗ್ಗಿ ನಿದ್ರೆಯಲ್ಲಿದ್ದ 14 ವರ್ಷದ ಮಗನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬಳಿಕ ಒತ್ತೆಯಾಗಿಟ್ಟು 15 ಲಕ್ಷ ಸುಲಿಗೆ ಮಾಡಿ ತಪ್ಪಿಸಿಕೊಂಡಿದ್ದ ಬಿಕಾಂ ವಿದ್ಯಾರ್ಥಿ ಸೇರಿ ಇಬ್ಬರು ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಸೆ.28): ಇತ್ತೀಚೆಗೆ ಹಣದಾಸೆಯ ತನ್ನ ಪರಿಚಿತ ಸಾಫ್ಟ್‌ವೇರ್‌ ಎಂಜಿನಿಯರ್‌ವೊಬ್ಬರ ಮನೆಗೆ ಮುಂಜಾನೆ ನುಗ್ಗಿ ನಿದ್ರೆಯಲ್ಲಿದ್ದ 14 ವರ್ಷದ ಮಗನನ್ನು ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬಳಿಕ ಒತ್ತೆಯಾಗಿಟ್ಟು 15 ಲಕ್ಷ ಸುಲಿಗೆ ಮಾಡಿ ತಪ್ಪಿಸಿಕೊಂಡಿದ್ದ ಬಿಕಾಂ ವಿದ್ಯಾರ್ಥಿ ಸೇರಿ ಇಬ್ಬರು ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಯಲಹಂಕ ನಿವಾಸಿಗಳಾದ ಎಂ.ಸುನೀಲ್‌ ಕುಮಾರ್‌ ಅಲಿಯಾಸ್‌ ಸುನೀಲ್‌ ರಾಜ್‌ ಹಾಗೂ ವೈ.ವಿ.ನಾಗೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 9.69 ಲಕ್ಷ ಸುಲಿಗೆ ಮಾಡಿದ್ದ ಹಣದಲ್ಲಿ ಖರೀದಿಸಿದ್ದ ಎರಡು ಬೈಕ್‌ಗಳು ಹಾಗೂ ಒಂದು ಕಾರು ಜಪ್ತಿ ಮಾಡಲಾಗಿದೆ.

ಹಣದಾಸೆಗೆ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ನೆಲೆಸಿರುವ ತನ್ನ ಪರಿಚಿತ ಟೆಕ್ಕಿ ದಂಪತಿಯ ಪುತ್ರನನ್ನು ಗೆಳೆಯನ ಜತೆ ಸೇರಿ ಸುನೀಲ್‌ ಅಪಹರಿಸಿದ್ದ. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್‌ ನಾಗರಾಜ್‌ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಎ.ಶೆಟ್ಟಿ ಹೇಳಿದ್ದಾರೆ.

ರಾತ್ರೋರಾತ್ರಿ ದಿಢೀರ್‌ ಕಾರ್ಯಾಚರಣೆ: ದ.ಕ. ಜಿಲ್ಲೆಯ 14 ಪಿಎಫ್‌ಐ ಮುಖಂಡರ ಬಂಧನ

ಅಪ್ಪನ ಕಾರಿನಲ್ಲೇ ಮಗನ ಅಪಹರಣ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸುನೀಲ್‌, ಹಲವು ದಿನಗಳಿಂದ ನಗರದಲ್ಲಿ ನೆಲೆಸಿದ್ದ. ಸಂಜೆ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಆತ, ಓದಿನ ಖರ್ಚಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಹೀಗಿರುವಾಗ ಮಾನ್ಯತಾ ಟೆಕ್‌ಪಾರ್ಕ್ ನೆಲೆಸಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ ಅವರ ಮನೆಗೆ ಕೈದೋಟದ ಕೆಲಸಕ್ಕೆ ನಾಲ್ಕು ದಿನ ಸುನೀಲ್‌ ಹೋಗಿದ್ದ. ಆ ವೇಳೆ ಆತನಿಗೆ ಟೆಕ್ಕಿ ಮನೆ ಕೆಲಸಗಾರರ ಪರಿಚಯವಾಗಿದ್ದು, ಅವರಿಂದ ಟೆಕ್ಕಿ ಮನೆಯಲ್ಲಿ ಅಪಾರ ಹಣವಿದೆ ಎಂಬ ಮಾಹಿತಿ ತಿಳಿದುಕೊಂಡಿದ್ದ. 

ಉತ್ತರ ಭಾರತೀಯ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌, ತಮ್ಮ ಪತ್ನಿ ಹಾಗೂ ಮಕ್ಕಳ ಜತೆ ನೆಲೆಸಿದ್ದಾರೆ. ದುರಾಸೆಗೆ ಬಿದ್ದ ಆತ, ಟೆಕ್ಕಿ ಮನೆಯಲ್ಲಿ ಕಳ್ಳತನಕ್ಕೆ ಯೋಜಿಸಿದ್ದ. ಅಂತೆಯೇ ತನ್ನ ಬಾಲ್ಯ ಸ್ನೇಹಿತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಂಡಿಕಲ್‌ ಹೋಬಳಿಯ ವೈ.ವಿ.ನಾಗೇಶ್‌ನನ್ನು ಸುನೀಲ್‌ ಬಳಸಿಕೊಂಡಿದ್ದ. ಎರಡು ದಿನ ಟೆಕ್ಕಿ ಮನೆ ಬಳಿ ತೆರಳಿ ಅಲ್ಲಿನ ಭದ್ರತಾ ವ್ಯವಸ್ಥೆ ಬಗ್ಗೆ ತಿಳಿದುಕೊಂಡ ಆರೋಪಿಗಳು, ಸೆ.2ರಂದು ರಾತ್ರಿ ಮನೆಯಲ್ಲಿ ಕಳ್ಳತನಕ್ಕೆ ಸಜ್ಜಾದರು. ಈ ಮೊದಲು ಟೆಕ್ಕಿ ಮನೆಯಲ್ಲಿ ಕೆಲಸ ಮಾಡಿದ್ದರಿಂದ ಅವರ ಮನೆಗೆ ಕೆಳ ಮಹಡಿಯಿಂದ ಪ್ರವೇಶಿಸುವ ಮಾರ್ಗವು ಸುನೀಲ್‌ಗೆ ಗೊತ್ತಿತ್ತು. 

ಪೂರ್ವ ಯೋಜನೆಯಂತೆ ಸ್ಲೇಡಿಂಗ್‌ ಬಾಗಿಲಿನ ಮೂಲಕ ಒಳ ಪ್ರವೇಶಿಸಿದ ಆರೋಪಿಗಳು, ಕೆಳಹಂತದಲ್ಲಿ ಹುಡುಕಾಡಿದಾಗ ಅವರಿಗೆ ನಿರೀಕ್ಷಿಸಿದಷ್ಟು ಹಣ ಮತ್ತು ಒಡವೆ ಸಿಕ್ಕಿಲ್ಲ. ಆ ವೇಳೆ ಬೆಡ್‌ ರೂಮ್‌ನಲ್ಲಿ ಮಲಗಿದ್ದ ಅವರ ಪುತ್ರನನ್ನು ಅಪಹರಿಸಲು ನಿರ್ಧರಿಸಿದ್ದಾರೆ. ಕೂಡಲೇ ಬಾಲಕನಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಮನೆಯಿಂದ ಆರೋಪಿಗಳು ಹೊರ ತಂದಿದ್ದಾರೆ. ರಾತ್ರಿ ಮನೆಯ ಹೊರಗೆ ರಸ್ತೆ ಬದಿ ತಮ್ಮ ಕಾರನ್ನು ಟೆಕ್ಕಿ ನಿಲ್ಲಿಸಿದ್ದರು. ರೂಮ್‌ನಿಂದ ಹೊರಗೆ ಕರೆ ತರುವಾಗಲೇ ಬಾಲಕನಿಂದ ಅವರ ಅಪ್ಪನ ಕಾರಿನ ಕೀಯನ್ನು ಸಹ ಆರೋಪಿಗಳು ತೆಗೆದುಕೊಂಡು ಬಂದಿದ್ದರು. 

ಹಾಸ್ಟೆಲ್‌ ಹುಡುಗೀರ ಅಶ್ಲೀಲ ವಿಡಿಯೋ ಮಾಡಿ ಲವರ್‌ಗೆ ಕಳಿಸುತ್ತಿದ್ದವಳ ಬಂಧನ!

ಬಳಿಕ ಅವರ ಕಾರಿನಲ್ಲಿ ಮಗನನ್ನು ಅಪಹರಿಸಿ ನೆಲಮಂಗಲ ಸಮೀಪದ ದಾಬಸಪೇಟೆಗೆ ಕರೆದೊಯ್ದರು. ಅಲ್ಲಿ ಬಾಲಕನ ಮೊಬೈಲ್‌ನಿಂದಲೇ ಅವರ ಅಪ್ಪನಿಗೆ ಕರೆ ಮಾಡಿಸಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಮಾತಿಗೆ ಒಪ್ಪಿದ ಟೆಕ್ಕಿ, ಆರೋಪಿಗಳು ಹೇಳಿದ ಜಾಗಕ್ಕೆ ಹೋಗಿ ಹಣ ಕೊಟ್ಟು ಮಗನನ್ನು ಕರೆ ತಂದಿದ್ದಾರೆ. ಮರು ದಿನ ಪೊಲೀಸರಿಗೆ ಘಟನೆ ಬಗ್ಗೆ ಅವರು ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮನೆ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಬೈಕ್‌ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!