ತಮ್ಮ ಮೇಲೆ ಹಲ್ಲೆ ಕನ್ನಡ ಮಾತನಾಡಿದ ಕಾರಣಕ್ಕೆ ಹಲ್ಲೆ ನಡೆದಿದೆ ಎಂದಿದ್ದ ನಟಿ ಹರ್ಷಿಕಾ ಪೂಣಚ್ಚ ದಂಪತಿ, ಘಟನೆ ಸಂಬಂಧ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಶನಿವಾರ ದೂರು ಸಲ್ಲಿಸಿದ್ದಾರೆ.
ಬೆಂಗಳೂರು (ಏ.21): ತಮ್ಮ ಮೇಲೆ ಹಲ್ಲೆ ಕನ್ನಡ ಮಾತನಾಡಿದ ಕಾರಣಕ್ಕೆ ಹಲ್ಲೆ ನಡೆದಿದೆ ಎಂದಿದ್ದ ನಟಿ ಹರ್ಷಿಕಾ ಪೂಣಚ್ಚ ದಂಪತಿ, ಘಟನೆ ಸಂಬಂಧ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಶನಿವಾರ ದೂರು ಸಲ್ಲಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ರಮಣ್ ಗುಪ್ತಾ ಅವರನ್ನು ಭೇಟಿಯಾದ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ಭುವನ್, ತಮ್ಮ ಮೇಲೆ ಹಲ್ಲೆ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ನಮ್ಮ ದೂರಿಗೆ ಹೆಚ್ಚುವರಿ ಆಯುಕ್ತರು ಸ್ಪಂದಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಕ್ರಮ ಜರುಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆಯುಕ್ತರು ಭೇಟಿ ಸಾಧ್ಯವಾಗದ ಕಾರಣ ಹೆಚ್ಚುವರಿ ಆಯುಕ್ತರಿಗೆ ದೂರು ನೀಡಿದ್ದೇವೆ ಎಂದು ನಟ ಭುವನ್ ಹೇಳಿದರು. ಘಟನೆ ನಡೆದ ದಿನವೇ ದೂರು ನೀಡಿದರೆ ಘಟನೆಗೆ ಬೇರೆ ರೂಪ ಸಿಗುತ್ತದೆ ಎಂಬ ಕಾರಣಕ್ಕೆ ದೂರು ಕೊಟ್ಟಿರಲಿಲ್ಲ. ಈ ಬಗ್ಗೆ ಸಂಬಂಧಿಕರು ಹಾಗೂ ಹಿತೈಷಿಗಳ ಸಲಹೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಯಿತು. ಈಗ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ತಾಲಿಬಾನ್ ಆಡಳಿತ ಇದೆಯೇ?: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ
ನನಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇನೆ. ಆದರೆ ದೂರಿನ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಇಲ್ಲ. ನಮಗೆ ದೂರನ್ನು ಯಾರೂ ಬರೆದುಕೊಟ್ಟಿಲ್ಲ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಾನು ಕನ್ನಡ ಮಾತನಾಡಬಾರದೆ ಎಂದು ಅಸಮಾಧಾನದಲ್ಲಿ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ರೀತಿಯಲ್ಲಿ ‘ಎಕ್ಸ್’ ತಾಣದಲ್ಲಿ ಪೋಸ್ಟ್ ಮಾಡಿದ್ದೇ. ಆದರೆ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆ ದೂಷಣೆ ಮಾಡಿಲ್ಲ ಎಂದು ಹರ್ಷಿಕಾ ಸ್ಪಷ್ಟಪಡಿಸಿದರು.