ಪತಿಯೇ ಆಕೆಯನ್ನು ಕೊಲೆಗೈದು ಬಳಿಕ ಆತ್ಮಹತ್ಯೆಯ ಕಥೆ ಕಟ್ಟಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೃತ ಮಹಿಳೆಯ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರು(ನ.10): ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತಿಯೇ ಆಕೆಯನ್ನು ಕೊಲೆಗೈದು ಬಳಿಕ ಆತ್ಮಹತ್ಯೆಯ ಕಥೆ ಕಟ್ಟಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೃತ ಮಹಿಳೆಯ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಾವಗಡ ಮೂಲದ ಅನುರಾಧ (31) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಆಕೆಯ ಪತಿ ರಾಜಶೇಖರ್(35) ಬಂಧಿತನಾಗಿದ್ದಾನೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಜಶೇಖರ್ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಮನೆ ಕೆಲಸ ಮಾಡಿಕೊಂಡಿದ್ದ ಅನುರಾಧಗೆ ಕೆಲ ವರ್ಷಗಳ ಹಿಂದೆ ಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಅನುರಾಧಾ ಮತ್ತು ರಾಜಶೇಖರ್ ಪರಸ್ಪರ ಪರಿಚಿತರಾಗಿ ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು.
ಈ ನಡುವೆ ರಾಜಶೇಖರ್ ತನ್ನ ಸ್ನೇಹಿತೆಯ ಜತೆಗಿನ ಅಕ್ರಮ ಸಂಬಂಧ ಮುಂದುವರೆಸಿದ್ದ. ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಈ ವಿಚಾರ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಅ.29ರಂದು ಇದೇ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ರಾಜಶೇಖರ್, ವೇಲ್‌ನಿಂದ ಅನುರಾಧಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಮನೆಯ ಫ್ಯಾನ್‌ಗೆ ಆಕೆಯನ್ನು ನೇತು ಹಾಕಿ, ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ.
ಪಿಎಂ ರಿಪೋರ್ಟ್ ನೀಡಿದ ಸುಳಿವು:
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಈ ಸಂಬಂಧ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅನುರಾಧಳದು ಆತ್ಮಹತ್ಯೆಯಲ್ಲ, ಕುತ್ತಿಗೆ ಬಿಗಿದು ಉಸಿರುಗಟ್ಟಿಸಿರುವುದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಯಲ್ಲಿ ಪೊಲೀಸರು ಪತಿ ರಾಜಶೇಖರನ ಮೇಲೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಪತ್ನಿಯನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಕೊಲೆ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.