ಬೆಂಗಳೂರು: ವೃದ್ಧೆಯ ಮೊಬೈಲ್‌ ಸಿಮ್‌ ಕದ್ದು ಹಣ ದೋಚಿದ ಖದೀಮ

By Kannadaprabha NewsFirst Published Aug 9, 2022, 6:48 AM IST
Highlights

ವೃದ್ಧೆಯ ಕಾರಿಗೆ ಅರೆಕಾಲಿಕ ಚಾಲಕನಾಗಿ ಹೋಗಿದ್ದ ವೇಳೆ ಸಿಮ್‌ ಎಗರಿಸಿ ಕೃತ್ಯ, 3.45 ಲಕ್ಷ ದೋಚಿದ್ದವ ಜೈಲು ಪಾಲು

ಬೆಂಗಳೂರು(ಆ.09):  ವೃದ್ಧೆಯೊಬ್ಬರ ಮೊಬೈಲ್‌ನಲ್ಲಿ ಸಿಮ್‌ ಕದ್ದು ಬಳಿಕ ಆ ಸಿಮ್‌ ಬಳಸಿ ಅವರ ಬ್ಯಾಂಕ್‌ ಖಾತೆಯಿಂದ 3.45 ಲಕ್ಷ ಕಳವು ಮಾಡಿದ್ದ ಚಾಲಾಕಿ ಕಾರು ಚಾಲಕನೊಬ್ಬ ಈಶಾನ್ಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಂಡ್ಯ ಜಿಲ್ಲೆ ದುದ್ದ ಹೋಬಳಿ ಗುನ್ನನಾಯಕನಹಳ್ಳಿಯ ಜೆ.ಬಿ.ಪ್ರಕಾಶ್‌ ಬಂಧಿತನಾಗಿದ್ದು, ಆರೋಪಿ ಬ್ಯಾಂಕ್‌ ಖಾತೆಯಿಂದ .1.30 ಲಕ್ಷ ನಗದು ಹಾಗೂ ಈ ವಂಚನೆ ಹಣದಿಂದ ಖರೀದಿಸಿದ್ದ 2 ಮೊಬೈಲ್‌, ಡಿಯೋ ಸ್ಕೂಟರ್‌ ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ವೃದ್ಧೆಯ ಕಾರಿಗೆ ಚಾಲಕನಾಗಿದ್ದಾಗ ವಂಚಿಸಿದ್ದಾನೆ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತಾಂತ್ರಿಕ ಮಾಹಿತಿ ಆಧರಿಸಿ ಇನ್‌ಸ್ಪೆಕ್ಟರ್‌ ಸಂತೋಷ್‌ ರಾಮ್‌ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಡ್ಯದ ಪ್ರಕಾಶ್‌, ಅರೆಕಾಲಿಕ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಆತ, ಆ ಆ್ಯಪ್‌ನ ಮೂಲಕ ಗ್ರಾಹಕರು ಸಂಪರ್ಕರಿಸಿದರೆ ಚಾಲಕನಾಗಿ ಹೋಗುತ್ತಿದ್ದ. ಅನಾರೋಗ್ಯ ಅಥವಾ ವೃದ್ಧರು ಅಗತ್ಯ ಇದ್ದಾಗ ಅಪ್ಲೀಕೇಷನ್‌ನಲ್ಲಿ ಚಾಲಕರನ್ನು ಬುಕ್‌ ಮಾಡುತ್ತಿದ್ದರು. ಅಂತೆಯೇ ಕಳೆದ ಮೇನಲ್ಲಿ ವೃದ್ಧೆಯೊಬ್ಬರು, ಕೆಲಸದ ನಿಮಿತ್ತ ನಗರದಿಂದ ಹೊರ ಹೋಗಲು ಪ್ರಕಾಶ್‌ನನ್ನು ಚಾಲಕನಾಗಿ ಕರೆದೊಯ್ದಿದ್ದರು. ಆಗ ಕಾರಿನಲ್ಲೇ ಮೊಬೈಲ್‌ ಬಿಟ್ಟು ಅವರು ಅಂಗಡಿಗೆ ಹೋಗಿದ್ದರು. ಆ ವೇಳೆ ಆ ವೃದ್ಧೆಯ ಮೊಬೈಲ್‌ನಲ್ಲಿ ಆತ ಸಿಮ್‌ ಬದಲಾಯಿಸಿದ್ದ. ವೃದ್ಧೆಯ ಮೊಬೈಲ್‌ಗೆ ಬ್ಲಾಕ್‌ ಆಗಿರುವ ಸಿಮ್‌ ಕಾರ್ಡ್‌ ಅಳವಡಿಸಿ ಅವರ ಸಿಮ್‌ ಕಾರ್ಡನ್ನು ಕಳವು ಮಾಡಿದ್ದ.

Bengaluru Crime News: ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳ ಶವ ಪತ್ತೆ

ಆನಂತರ ತನ್ನ ಮೊಬೈಲ್‌ಗೆ ಸಿಮ್‌ಕಾರ್ಡ್‌ ಹಾಕಿಕೊಂಡು ವ್ಯಾಲೆಟ್‌, ನೆಟ್‌ ಬ್ಯಾಂಕಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿದ್ದ. ನಂತರ ವೃದ್ಧೆ ಸಿಮ್‌ಗೆ ಬಂದ ಒಟಿಪಿ ಹಾಕಿ ಆಕ್ಟೀವೇಟ್‌ ಮಾಡಿದ ಆತ, ಬ್ಯಾಂಕ್‌ಗೆ ಲಿಂಕ್‌ ಆಗಿದ್ದ ಸಿಮ್‌ ಬಳಸಿ ಬೇರೊಂದು ಬ್ಯಾಂಕ್‌ ಖಾತೆಗೆ ಅವರ ಖಾತೆಯಿಂದ .3.45 ಲಕ್ಷ ವರ್ಗಾಯಿಸಿದ್ದ. ಇತ್ತ ತಮ್ಮ ಸಿಮ್‌ ಸ್ಥಗಿತವಾಗಿದೆ ಎಂದು ಭಾವಿಸಿ ದೂರುದಾರರು ಸುಮ್ಮನಾಗಿದ್ದರು. ಸ್ವಲ್ಪ ದಿನಗಳ ಬಳಿಕ ಹೊಸ ಸಿಮ್‌ ಕಾರ್ಡ್‌ ಪಡೆದಾಗ ಅವರಿಗೆ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಬಗ್ಗೆ ಸಂದೇಶಗಳು ಬಂದಿವೆ. ಇದರಿಂದ ಗಾಬರಿಗೊಂಡ ವೃದ್ಧೆ, ಅಪರಿಚಿತರಿಗೆ ಒಟಿಪಿ ನೀಡಿಲ್ಲ. ಆ್ಯಪ್‌ ಡೌನ್‌ಲೋಡ್‌ ಸಹ ಮಾಡಿಕೊಂಡಿಲ್ಲ. ಯಾವುದೇ ಯುಪಿಐ ಅಥವಾ ನೆಟ್‌ ಬ್ಯಾಂಕಿಂಗ್‌ ಸೇವೆ ನಡೆಸಿಲ್ಲ. ಹೇಗೆ ಹಣ ವರ್ಗಾವಣೆಯಾಯಿತು ಎಂದು ಚಿಂತೆಗೀಡಾಗಿದ್ದಾರೆ. ಕೊನೆಗೆ ಈಶಾನ್ಯ ವಿಭಾಗ ಸಿಇಎನ್‌ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ದೂರುದಾರರ ಸಿಮ್‌ ಕಾರ್ಡ್‌ ಬ್ಲಾಕ್‌ ಆಗಿರಲಿಲ್ಲ. ಬದಲಿಗೆ ಮೇ 8ರಿಂದ 14ರ ಅವಧಿಯಲ್ಲಿ ಬೇರೊಂದು ಮೊಬೈಲ್‌ಗೆ ಅಳವಡಿಸಿಕೊಂಡು ಬ್ಯಾಂಕ್‌ ಖಾತೆಗೆ ಕೆವೈಸಿ ಮಾಡಿ ಹಣ ಬಳಸಿರುವುದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಕೃತ್ಯ ಎಸಗಿದ್ದಾನೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿತಿಳಿಸಿದ್ದಾರೆ.

ಮಗುವಿನೊಂದಿಗೆ ನೇಣಿಗೆ ಶರಣಾದ ತಾಯಿ!

ನಾಗರಿಕರಿಗೆ ಪೊಲೀಸರ ಸೂಚನೆ

*ಮೊಬೈಲ್‌ ಸಿಮ್‌ ಕಾರ್ಯ ಸ್ಥಗಿತವಾದ ಕೂಡಲೇ ಹೊಸ ಸಿಮ್‌ ಕಾರ್ಡ್‌ ಪಡೆಯಬೇಕು
*ಮೊಬೈಲ್‌ ಲಾಕ್‌ ಆಗಿದೆ ಎಂದು ಉದಾಸೀನ ಬೇಡ
*ಎಲ್ಲೆಂದರಲ್ಲಿ ಮೊಬೈಲ್‌ ಬಿಡದೆ ಅಥವಾ ಯಾರಿಗೂ ಕೊಡದೆ ಸುರಕ್ಷಿತವಾಗಿಡಿ.

ಸಾರ್ವಜನಿಕರು ಬ್ಯಾಂಕ್‌ ಖಾತೆಗೆ ಲಿಂಕ್‌ ಆಗಿರುವ ಮೊಬೈಲ್‌ ಮತ್ತು ಸಿಮ್‌ ಕಾರ್ಡ್‌ ಬಗ್ಗೆ ಜಾಗೃತವಾಗಿರಬೇಕು. ಮೊಬೈಲ್‌ ಕಳ್ಳವಾದ ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿ ಅಥವಾ ಬ್ಯಾಂಕ್‌ ಸಹಾಯವಾಣಿ ಕರೆ ಮಾಡಿ ಬ್ಯಾಂಕ್‌ ಖಾತೆ ಸ್ಥಿಗಿತಗೊಳಿಸಬೇಕು ಅಂತ ಈಶಾನ್ಯ ವಿಭಾಗದ ಡಿಸಿಪಿ ಡಾ. ಅನೂಪ್‌.ಎ.ಶೆಟ್ಟಿ ತಿಳಿಸಿದ್ದಾರೆ.  
 

click me!