ಕಡಿಮೆ ಬೆಲೆಗೆ ವಸ್ತು ಖರೀದಿಸಿ ಹೆಚ್ಚಿನ ದರಕ್ಕೆ ಮಾರಿ ಎಂದು ವಂಚನೆ: ಖತರ್ನಾಕ್‌ ವಂಚಕ ಅರೆಸ್ಟ್‌

By Kannadaprabha NewsFirst Published Oct 2, 2022, 12:45 AM IST
Highlights

ಆನ್‌ಲೈನ್‌ನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ನೆಪದಲ್ಲಿ ಹಣ ಪಡೆದು ಮೋಸ

ಬೆಂಗಳೂರು(ಅ.02): ಸಾಮಾಜಿಕ ಜಾಲತಾಣದಲ್ಲಿ ಕಡಿಮೆ ದರಕ್ಕೆ ವಸ್ತುಗಳನ್ನು ಖರೀದಿಸಿ, ಅದೇ ವಸ್ತುಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಸುಲಭವಾಗಿ ಲಾಭಗಳಿಸುವಂತೆ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಖತರ್ನಾಕ್‌ ವಂಚಕನನ್ನು ಈಶಾನ್ಯ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಶಾನೀದ್‌ ಅಬ್ದುಲ್‌ ಅಮೀದ್‌ (29) ಬಂಧಿತ. ಆರೋಪಿಯಿಂದ ವಿವಿಧ ಕಂಪನಿಗಳ 222 ಸಿಮ್‌ ಕಾರ್ಡ್‌, 10 ಮೊಬೈಲ್‌ ಫೋನ್‌, 10 ಡೆಬಿಟ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಚೆಕ್‌ಬುಕ್‌ ಜಪ್ತಿ ಮಾಡಲಾಗಿದೆ. ಈತನ ಸ್ನೇಹಿತ ಮೊಹಮ್ಮದ್‌ ನಿಹಾಲ್‌ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿ ಶಾನೀದ್‌ ಬಿಬಿಎಂ ವ್ಯಾಸಂಗ ಅರ್ಧಕ್ಕೆ ಮೊಟುಕುಗೊಳಿಸಿದ್ದು, ಉದ್ಯೋಗ ಇಲ್ಲದೆ ಪರದಾಡಿದ್ದ. ಈ ವೇಳೆ ಯುಟ್ಯೂಬ್‌ನಲ್ಲಿ ಸೈಬರ್‌ ಕ್ರೈಂ ಬಗ್ಗೆ ತಿಳಿದುಕೊಂಡು, ಆನ್‌ಲೈನ್‌ ಶಾಪಿಂಗ್‌ ಮಾದರಿಯ ವೆಬ್‌ಸೈಟ್‌ ಸೃಷ್ಟಿಸಿ, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್‌ಗಳಿಗೆ ಆ ವೆಬ್‌ಸೈಟ್‌ ಲಿಂಕ್‌ ಕಳುಹಿಸುತ್ತಿದ್ದ. ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ವಸ್ತುಗಳನ್ನು ಖರೀದಿಸಿ ಬಳಿಕ ಇಲ್ಲಿಯೇ ದುಬಾರಿ ದರಕ್ಕೆ ಮಾರಾಟ ಮಾಡಿ ಲಾಭ ಪಡೆಯಿರಿ ಎಂಬ ಜಾಹೀರಾತು ನೀಡುತ್ತಿದ್ದ. ಲಿಂಕ್‌ ತೆರೆದು ನೋಡಿದವರು, ಇದು ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಇರಬಹುದು ಎಂದು ನಂಬುತಿದ್ದರು.

ಬೆಂಗ್ಳೂರಲ್ಲಿ ದಾಖಲೆ ಬೇಕಿಲ್ಲ, ಹಣಕ್ಕೆ ಸಿಗುತ್ತೆ ಆಧಾರ್‌ ಕಾರ್ಡ್‌..!

ದೊಡ್ಡ ಮೊತ್ತ ಬಂದಾಗ ವೆಬ್‌ಸೈಟ್‌ ಸ್ಥಗಿತ

ಈ ಲಿಂಕ್‌ ಹಾಗೂ ಜಾಹೀರಾತು ನೋಡಿದ ಸಾರ್ವಜನಿಕರು ಮೊದಲಿಗೆ ಸಣ್ಣ ಮೊತ್ತಕ್ಕೆ ಆ ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ವಸ್ತುಗಳನ್ನು ಖರೀದಿಸಿ ಬಳಿಕ ಅಲ್ಲಿಯೇ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿ ಹಾಗೂ ಆತನ ಸಹಚರರೇ ದುಬಾರಿ ದರಕ್ಕೆ ಆ ವಸ್ತುಗಳನ್ನು ಖರೀದಿಸಿ ಲಾಭಾಂಶವನ್ನು ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದರು. ಸುಲಭವಾಗಿ ಲಾಭಾಂಶ ಬಂದಿದ್ದಕ್ಕೆ ಖುಷಿಯಾದ ಗ್ರಾಹಕರು ಹೆಚ್ಚಿನ ಲಾಭ ಗಳಿಸಲು ಹೆಚ್ಚಿನ ಮೊತ್ತಕ್ಕೆ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ವೇಳೆ ಆರೋಪಿಗಳು ಏಕಾಏಕಿ ವೆಬ್‌ಸೈಟ್‌ ಸ್ಥಗಿತಗೊಳಿಸಿ ಸಂಪರ್ಕ ಕಡಿತಗೊಳಿಸುತ್ತಿದ್ದರು.

ಬೆಂಗ್ಳೂರಲ್ಲಿ ಡ್ರಗ್ಸ್‌ ಮಾರುತ್ತಿದ್ದ ಮಲಯಾಳಿ ಕಿರುತೆರೆ ನಟ..!

ಹೀಗೆ ಹಣ ಕಳೆದುಕೊಂಡು ವಂಚನೆಗೆ ಒಳಗಾದವರು ಈ ಸಂಬಂಧ ಏನು ಮಾಡಬೇಕು ಎಂಬುದು ತಿಳಿಯದೇ ಸುಮ್ಮನಾಗುತ್ತಿದ್ದರು. ಇತ್ತೀಚೆಗೆ ಈ ರೀತಿಯ ಸೈಬರ್‌ ವಂಚನೆ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಮೊಬೈಲ್‌ ನೆಟ್‌ ವರ್ಕ್ ಹಾಗೂ ಬ್ಯಾಂಕ್‌ ಖಾತೆ ಮಾಹಿತಿ ಜಾಡು ಹಿಡಿದು ತನಿಖೆಗೆ ಇಳಿದಾಗ ಆರೋಪಿ ಶಾನೀದ್‌ ಬಲೆಗೆ ಬಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಂಡವರ ಬ್ಯಾಂಕ್‌ ಖಾತೆಯಲ್ಲಿ ಖತರ್ನಾಕ್‌ ಆಟ

ಆರೋಪಿ ಶಾನೀದ್‌ ಆನ್‌ಲೈನ್‌ ಶಾಪಿಂಗ್‌ ವಂಚನೆಗೆ ಬ್ಯಾಂಕ್‌ ಖಾತೆ ಮತ್ತು ಸಿಮ್‌ ಕಾರ್ಡ್‌ ಪಡೆಯಲು ಖತರ್ನಾಕ್‌ ಐಡಿಯಾ ಮಾಡಿದ್ದ. ಟೆಲಿಗ್ರಾಮ್‌ ಆ್ಯಪ್‌ನಲ್ಲಿ ವಿವಿಧ ಹೆಸರಿನಲ್ಲಿ ಗ್ರೂಪ್‌ ತೆರೆದು ಕ್ರಿಪ್ಟೋ ಕರೆನ್ಸಿಗೆ ಹೂಡಿಕೆ ಮಾಡುವ ಆಸಕ್ತರಿಗೆ ಸಹಾಯ ಮಾಡುವುದಾಗಿ ಹೇಳುತ್ತಿದ್ದ. ಈತನ ಮಾತು ನಂಬಿ ಕರೆ ಮಾಡಿದವರಿಗೆ ನಿಮ್ಮ ಹೆಸರಿನಲ್ಲಿ ಚಾಲ್ತಿ ಖಾತೆ ತೆರೆದು ಅದರ ಚೆಕ್‌ಬುಕ್‌, ಪಾಸ್‌ಬುಕ್‌ ಮತ್ತು ಡೆಬಿಟ್‌ ಕಾರ್ಡ್‌ ಮತ್ತು ಸಿಮ್‌ ಕಾರ್ಡ್‌ಗಳನ್ನು ನನ್ನ ವಿಳಾಸಕ್ಕೆ ಕಳುಹಿಸಿ. ನಿಮ್ಮ ಹೆಸರಿನಲ್ಲಿ ಕ್ರಿಪ್ಟೋ ಟ್ರೇಡಿಂಗ್‌ ನಡೆಸಿ ಬಂದ ಲಾಭದಲ್ಲಿ ನಿಮಗೂ ಒಂದು ಪಾಲು ನೀಡುವುದಾಗಿ ಹೇಳುತ್ತಿದ್ದ. ಈತನ ಮಾತು ನಂಬಿದವರು ಬ್ಯಾಂಕ್‌ ಖಾತೆ ತೆರೆದು ಎಲ್ಲ ದಾಖಲೆ ಕಳುಹಿಸುತ್ತಿದ್ದರು. ಆನ್‌ಲೈನ್‌ ಶಾಪಿಂಗ್‌ನಲ್ಲಿ ಗ್ರಾಹಕರಿಂದ ಬರುವ ಹಣವನ್ನು ಈ ಬ್ಯಾಂಕ್‌ ಖಾತೆಗಳಿಗೆ ಆರೋಪಿ ಜಮೆ ಮಾಡುತ್ತಿದ್ದ. ಬಳಿಕ ಆ ಹಣವನ್ನು ಡ್ರಾ ಮಾಡುತ್ತಿದ್ದ. ಹೀಗಾಗಿ ಆರೋಪಿ ತನ್ನ ಹೆಸರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಸುಲಭವಾಗಿ ಅಮಾಯಕರನ್ನು ವಂಚಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದರು.
 

click me!