ಮೈಸೂರು: ಆಕ್ಸಿಡೆಂಟ್ ನೆಪದಲ್ಲಿ ಹೆದರಿಸಿ ಸುಲಿಗೆ, ಖದೀಮನ ಹೆಡೆಮುರಿ ಕಟ್ಟಿದ ಪೊಲೀಸರು

By Kannadaprabha News  |  First Published Sep 13, 2023, 3:58 PM IST

ನಿವೃತ್ತ ಎಎಸ್ಐ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ. ಈತನ ವಿರುದ್ದ ಇದೇ ರೀತಿಯ 5 ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಮೂರು ಪ್ರಕರಣಗಳು ಪತ್ತೆಯಾಗಿವೆ. 


ಮೈಸೂರು(ಸೆ.13):  ಕಾರುಗಳನ್ನೇ ಗುರಿಯಾಗಿಸಿ ಆಕ್ಸಿಡೆಂಟ್ ನೆಪದಲ್ಲಿ ಕಾರು ಚಾಲಕರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮೈಸೂರಿನ ಕುವೆಂಪುನಗರ ಠಾಣೆಯ ಪೊಲೀಸರು ಬಂಧಿಸಿ, 40 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಮತ್ತು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಕೆಸರೆ ರಾಜೇಂದ್ರನಗರದ ನಿವಾಸಿ ಜಮೀಲ್ ಖಾನ್ (32) ಬಂಧಿತ ಆರೋಪಿ. ಕಳೆದ ಸೆ.2 ರಂದು ಕೆಎಸ್‌ಆರ್.ಪಿ ನಿವೃತ್ತ ಎಎಸ್‌ಐ ದೇವಯ್ಯ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಈತ ಹಿಂದಿನಿಂದ ದ್ವಿಚಕ್ರವಾಹನದಲ್ಲಿ ಬಂದು ಕಾರನ್ನು ಅಡ್ಡ ಹಾಕಿ, ಮಾರ್ಗ ಮಧ್ಯೆ ರಸ್ತೆ ಅಪಘಾತ ಮಾಡಿದ್ದಿರಾ, ಇದರಿಂದ ನನ್ನ ಸ್ನೇಹಿತನ ಕಾಲು ಮುರಿದಿದೆ. ಆಸ್ಪತ್ರೆಗೆ ಸೇರಿಸಲು ಹಣ ನೀಡಬೇಕು. ಕೊಡದಿದ್ದರೆ ಜನರಿಂದ ಹೊಡೆಸಬೇಕಾಗುತ್ತದೆಂದು ಹೆದರಿಸಿ, ಅವರನ್ನು ಹತ್ತಿರ ಎಟಿಎಂ ಕೇಂದ್ರಕ್ಕೆ ಕರೆದುಕೊಂಡು ಅವರಿಂದಲ್ಲೇ 40 ಸಾವಿರ ಹಣ ಡ್ರಾ ಮಾಡಿಸಿಕೊಂಡು ತೆರಳಿದ್ದ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Latest Videos

undefined

ಅಪ್ರಾಪ್ತ ಯುವತಿಯನ್ನ ಮದುವೆಯಾಗಿ ಸಂಕಷ್ಟಕ್ಕೆ ಸಿಲುಕಿದ ಹಾಡ್ಯಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ!

ನಿವೃತ್ತ ಎಎಸ್ಐ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ. ಈತನ ವಿರುದ್ದ ಇದೇ ರೀತಿಯ 5 ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಮೂರು ಪ್ರಕರಣಗಳು ಪತ್ತೆಯಾಗಿದೆ ಎಂದು ಅವರು ಹೇಳಿದರು.

ದೂರು ಕೊಡಿ

ನಗರದಲ್ಲಿ ಕಳೆದ ಒಂದು ತಿಂಗಳಿಂದ ಆಕ್ಸಿಡೆಂಟ್ ಮಾಡಿದ್ದಿರಾ ಎಂದು ಕಾರು ಚಾಲಕರನ್ನು ಹೆದರಿಸಿ ಹಣ ಸುಲಿಗೆ ಮಾಡುತ್ತಿರುವ ವಿಚಾರ ಪತ್ತೆಯಾದ ಹಿನ್ನಲೆಯಲ್ಲಿ ಸುಲಿಗೆಕೋರರ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ವಯಸ್ಸಾದವರು ಕಾರು ಚಾಲನೆ ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ ಅವರ ಕಾರನ್ನು ಬೆನ್ನತ್ತುತ್ತಿದ್ದ ಖದೀಮ, ಕಾರಿನ ಬಳಿ ಹೋಗಿ ಜೋರಾಗಿ ಸದ್ದು ಮಾಡಿ, ಬಳಿಕ ಕಾರನ್ನು ಅಡ್ಡ ಹಾಕಿ. ನಿಮ್ಮ ಕಾರು ನಮ್ಮ ಸ್ನೇಹಿತನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಆತ ಗಾಯಗೊಂಡಿದ್ದಾನೆ. ಆತನಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿ ಹಣ ಸುಲಿಗೆ ಮಾಡುತ್ತಿದ್ದ. ಸಾಕಷ್ಟು ಮಂದಿಯಿಂದ ಈ ರೀತಿ ಹಣ ಸುಲಿಗೆ ಮಾಡಿದ್ದು, ಕೆಲವರು ತಾವೇ ಅಪಘಾತ ಮಾಡಿರಬಹುದು ಎಂಬ ಭಯದಿಂದ ದೂರು ನೀಡಲು ಬಂದಿಲ್ಲ. ಈ ರೀತಿಯಲ್ಲಿ ಯಾರಿಗಾದರೂ ಸಮಸ್ಯೆಯಾಗಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಡಿಸಿಪಿ ಎಸ್. ಜಾಹ್ನವಿ, ಕೆ.ಆರ್. ಉಪ ವಿಭಾಗದ ಎಸಿಪಿ ಎಸ್.ಇ. ಗಂಗಾಧರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆ ಇನ್ಸ್ ಪೆಕ್ಟರ್ ಎಲ್. ಅರುಣ್, ಎಸ್‌ಐಗಳಾದ ಎಸ್.ಪಿ. ಗೋಪಾಲ್, ಎಂ. ರಾಧಾ ಹಾಗೂ ಸಿಬ್ಬಂದಿ ವಿ. ಆನಂದ್, ಎಂ.ಪಿ. ಮಂಜುನಾಥ್, ಹಜರತ್, ಎನ್.ಕೆ. ಪುಟ್ಟಪ್ಪ, ಸುರೇಶ್, ನಾಗೇಶ, ಅಮೋಘ್, ಕುಮಾರ್ ಅವರು ಈ ಪತ್ತೆ ಮಾಡಿದ್ದಾರೆ.

click me!