ಬೆಳಗಾವಿ: ಹುಡುಗಿ ಹೆಸರಲ್ಲಿ ಅಕೌಂಟ್‌ ಸೃಷ್ಟಿಸಿ ಹಣ ಪಿಕುತ್ತಿದ್ದವನ ಬಂಧನ

By Kannadaprabha News  |  First Published Jul 29, 2022, 9:30 AM IST

ಹಲವರಿಂದ ಅಂದಾಜು 20 ಲಕ್ಷ ಹಣ ಪೀಕಿದ್ದ ಆರೋಪಿ ಮಹಾಂತೇಶ


ಬೆಳಗಾವಿ(ಜು.29):  ಹುಡುಗಿ ಹೆಸರಲ್ಲಿ ನಕಲಿ ಫೇಸ್ಬುಕ್‌, ಇನ್‌ಸ್ಟಾಗ್ರಾಂ ಪೇಜ್‌ ಕ್ರಿಯೇಟ್‌ ಮಾಡಿ ಲಕ್ಷ ಲಕ್ಷ ಹಣ ಪೀಕುತ್ತಿದ್ದ ಯುವಕನೊಬ್ಬನನ್ನು ಬೆಳಗಾವಿಯ ಸಿಇಎನ್‌ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಯಿಹಿಂಗ್ಲಜ್‌ ಗ್ರಾಮದ ಮಹಾಂತೇಶ ಮೂಡಸೆ ಬಂಧಿತ ಆರೋಪಿ. ಈತ ಎಂ.ಸ್ನೇಹಾ ಹೆಸರಿನಲ್ಲಿ ಫೇಸ್ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ನಕಲಿ ಐಡಿ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ಮೋಸ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಯುವತಿಯೊಬ್ಬರ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಡೌನ್‌ಲೋಡ್‌ ಮಾಡಿದ್ದ ಮಹಾಂತೇಶ ಬೆಳಗಾವಿ ನಗರದ ಯುವತಿ ಫೋಟೊ ಬಳಸಿ ನಕಲಿ ಖಾತೆ ಸೃಷ್ಟಿಸಿದ್ದ. ಆ ಯುವತಿ ಫೋಟೋಕ್ಕೆ ಸ್ನೇಹಾ ಹೆಸರು ಹಾಕಿ ಅಕೌಂಟ್‌ ಸೃಷ್ಟಿಸಿದ್ದ. ಈತ ಕಳೆದ ಮೂರು ವರ್ಷಗಳ ಹಿಂದೆ ನಕಲಿ ಅಕೌಂಟ್‌ ಮಾಡಿಕೊಂಡು ವಿವಿಧ ಜನರಿಂದ .20 ಲಕ್ಷ ಹಣ ಪಡೆದುಕೊಂಡಿದ್ದ. ಫೇಸ್‌ಬುಕ್‌ ಮತ್ತು ಇನ್‌ಸ್ಟ್ರಾಗ್ರಾಂನಲ್ಲಿ ಯುವಕರೊಂದಿಗೆ ಸ್ನೇಹ ಮಾಡಿಕೊಂಡು ಯುವಕರಿಗೆ ತಾನೂ ಸ್ನೇಹಾ ಅಂತಾ ನಂಬಿಸಿ ಅವರ ನಂಬರ್‌ ಪಡೆಯುತ್ತಿದ್ದ ಮಹಾಂತೇಶ. ಹೀಗೆ ನಂಬರ್‌ ಪಡೆದ ನಂತರ ಫೋನ್‌ನಲ್ಲಿ ಮಾತನಾಡದೇ ಬರೀ ಚಾಟ್‌ ಮಾಡುತ್ತಿದ್ದ. ಈ ವೇಳೆ ಕೆಲವು ಫೋಟೋಗಳನ್ನು ಅವರಿಗೆ ವಾಟ್ಸ್‌ಪ್‌ ಮಾಡುತ್ತಿದ್ದ. ಹಣದ ಅವಶ್ಯಕತೆ ಇದೆ ಅಂತಾ ಹತ್ತು, ಇಪ್ಪತ್ತು, ಐವತ್ತು  ಸಾವಿರವರೆಗೂ ಹಣ ಹಾಕಿಸಿಕೊಂಡು ನಂಬರ್‌ ಬ್ಲಾಕ್‌ ಮಾಡುತ್ತಿದ್ದ. ಹೀಗೆ ಯುವತಿ ಫೋಟೊ ಹಾಕಿ ಯುವತಿ ಹೆಸರಲ್ಲಿ ಮಾಡಿದ್ದ ಅಕೌಂಟ್‌ಗೆ ಹದಿನೈದು ಸಾವಿರ ಫಾಲೋವರ್ಸ್‌ ಕೂಡ ಮಾಡಿಕೊಂಡಿದ್ದನು.

Tap to resize

Latest Videos

ಬೆಂಗಳೂರು: ಸಂಪ್‌ನಲ್ಲಿತ್ತು 2.68 ಕೋಟಿಯ ರಕ್ತಚಂದನ, ನಾಲ್ವರು ರೈತರು ಸೇರಿ ಐವರ ಸೆರೆ

ಹೀಗೆ ತನ್ನ ಫೋಟೋ ಬೇರೆಯವರು ಬಳಸುತ್ತಿದ್ದ ವಿಚಾರ ತಿಳಿದು ಯುವತಿ ಗಾಬರಿಗೊಂಡಿದ್ದಾಳೆ. ಈ ಯುವತಿ ದುಬೈನಲ್ಲಿ ವಾಸವಾಗಿದ್ದಾಳೆ. ಹೀಗಾಗಿ ಈ ಯುವತಿ ಮೇಸೆಜ್‌ ಮಾಡಿ ಮಹಾಂತೇಶನಿಗೆ ಈ ನಕಲಿ ಅಕೌಂಟ್‌ ಡಿಲೀಟ್‌ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಇದಕ್ಕೆ ಆತ ಸ್ಪಂದಿಸದ ಹಿನ್ನೆಲೆ ಜು.4ರಂದು ಬೆಳಗಾವಿಗೆ ಆಗಮಿಸಿ ದೂರು ಸಲ್ಲಿಸಿದ್ದಳು. ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ಯುವತಿಯ ದೂರಿನ ಮೇರೆಗೆ ಗೋವಾದಲ್ಲಿ ಮಜಾ ಮಾಡುತ್ತಿದ್ದ ಆರೋಪಿ ಮಹಾಂತೇಶನನ್ನು ಸಿಇಎನ್‌ ಪೊಲೀಸರು ಬಂಧಿಸಿದ್ದಾರೆ. ಮಹಾಂತೇಶ ಮೂಡಸೆ ಪಿಎಸ್‌ಐ ದೈಹಿಕ ಪರೀಕ್ಷೆ ಕೂಡ ಪಾಸ್‌ ಆಗಿ ಧಾರವಾಡದಲ್ಲಿದ್ದುಕೊಂಡು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. 

click me!