ಜಮೀರ್‌ ಮನೆ ಮೀರಿಸುತ್ತೆ ಪೊಲೀಸ್ ಇನ್ಸ್‌ಪೆಕ್ಟರ್‌ ಅರಮನೆ!

By Kannadaprabha NewsFirst Published Aug 14, 2021, 7:31 AM IST
Highlights
  • ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಎಂಟಿಎಫ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಕೋಟ್ಯಂತರ ರು. ವೆಚ್ಚ ಮಾಡಿ ಬಂಗಲೆ ನಿರ್ಮಾಣ
  • ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್‌ ಎಂಬುವರು ಮೈಸೂರಿನಲ್ಲಿ ಅರಮನೆಯಂತಹ ಮನೆ ಕಟ್ಟಿಸಿದ್ದಾರೆ
  • ಬರೆದಿಟ್ಟಲೆಕ್ಕದ ಪುಸ್ತಕದಲ್ಲಿ ಎಲ್ಲ ಮಾಹಿತಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿದೆ. 

ವರದಿ :  ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು (ಆ.14):  ಇತ್ತೀಚೆಗೆ ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರ ವೈಭವೋಪೇತ ಅರಮನೆ ಕಂಡು ಬೆರಗಾಗಿದ್ದ ಕರುನಾಡಿನ ಜನರು, ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಎಂಟಿಎಫ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಕೋಟ್ಯಂತರ ರು. ವೆಚ್ಚ ಮಾಡಿ ಅದಕ್ಕಿಂತ ಭವ್ಯವಾಗಿ ನಿರ್ಮಿಸಿರುವ ಮನೆಯನ್ನು ನೋಡಿ ಅಚ್ಚರಿಗೊಳ್ಳುವ ಸಂದರ್ಭ ಬಂದಿದೆ.

ಬಿಎಂಟಿಎಫ್‌ ಇನ್ಸ್‌ಪೆಕ್ಟರ್‌ ವಿಕ್ಟರ್‌ ಸೈಮನ್‌ ಎಂಬುವರು ಮೈಸೂರಿನಲ್ಲಿ ಅರಮನೆಯಂತಹ ಮನೆ ಕಟ್ಟಿಸಿದ್ದು, ಆ ಮನೆಯ ನಿರ್ಮಾಣದ ಉಸ್ತುವಾರಿ ಹೊತ್ತಿದ್ದ ಅವರ ಸೋದರ ಮಾವ ಬರೆದಿಟ್ಟಲೆಕ್ಕದ ಪುಸ್ತಕದಲ್ಲಿ ಎಲ್ಲ ಮಾಹಿತಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿದೆ. ಇದು ಇನ್ಸ್‌ಪೆಕ್ಟರ್‌ಗೆ ಕಂಟಕವಾಗಿದೆ ಎನ್ನಲಾಗಿದೆ.

ತನ್ನ ಬಂಗಲೆ ನಿರ್ಮಾಣಕ್ಕೆ ಐದೂವರೆ ಕೋಟಿ ರು. ಬಂಡವಾಳ ಹೂಡಿರುವ ಇನ್ಸ್‌ಪೆಕ್ಟರ್‌, ಆ ವೈಭವದ ಮನೆಯ ಒಳಾಂಗಣ ಸಿಂಗಾರಕ್ಕೆ ವಿದೇಶದಿಂದ ದೀಪಗಳು ಹಾಗೂ ಪೀಠೋಪಕರಣಗಳಿಗೆ ಕೋಟ್ಯಂತರ ಹಣ ವಿನಿಯೋಗಿಸಿದ್ದಾರೆ. ಈ ಆಸ್ತಿ ಬಗ್ಗೆ ಸ್ಪಷ್ಟವಾದ ಲೆಕ್ಕ ನೀಡುವಂತೆ ಇನ್ಸ್‌ಪೆಕ್ಟರ್‌ಗೆ ಸೂಚಿಸಲಾಗಿದೆ ಎಂದು ಎಸಿಬಿ ಮೂಲಗಳು ಹೇಳಿವೆ.

ಜಮೀರ್ ಅರಮನೆಗೆ ಗೋಲ್ಡ್ ಕೋಟೆಡ್ ಫರ್ನಿಚರ್ಸ್, ಸ್ಯಾಂಡ್‌ವಿಚ್ ಗ್ಲಾಸ್, ಇಟಾಲಿಯನ್ ಮಾರ್ಬಲ್ಸ್!

ಸ್ವಿಮಿಂಗ್‌ ಪೂಲ್‌, ಫಾರಿನ್‌ ಲೈಟಿಂಗ್ಸ್‌: ಮೈಸೂರಿನ ವಿಜಯನಗರದ 3ನೇ ಹಂತದಲ್ಲಿ 60*80 ಅಳತೆ ನಿವೇಶನದಲ್ಲಿ ಮೂರು ಅಂತಸ್ತಿನ ವೈಭೋಗದ ಮನೆಯನ್ನು ಇನ್ಸ್‌ಪೆಕ್ಟರ್‌ ವಿಕ್ಟರ್‌ ಕಟ್ಟಿಸಿದ್ದಾರೆ. ಮನೆಯ ಹೊರಗಡೆ ಪುಟ್ಟಉದ್ಯಾನ, ವಿಶಾಲವಾದ ನಿಲುಗಡೆ ಪ್ರದೇಶವಿದೆ. ಮನೆಯ ತಾರಸಿಯಲ್ಲಿ ಈಜುಕೊಳ ನಿರ್ಮಿಸಿದ್ದು, ಮನೆಯೊಳಗೆ ಓಡಾಡಲು ಲಿಫ್ಟ್‌ ಸೌಲಭ್ಯವಿದೆ. ಏಳೆಂಟು ಕೋಣೆಗಳು, ಡೈನಿಂಗ್‌ ಹಾಲ್‌, ಡ್ರಾಯಿಂಗ್‌ ರೂಮ್‌ಗಳಿವೆ. ಮನೆ ಗೋಡೆಯಲ್ಲಿ ಇನ್ಸ್‌ಪೆಕ್ಟರ್‌ ದಂಪತಿಯ ದುಬಾರಿ ವರ್ಣಚಿತ್ರವಿದೆ. ಮನೆಯಲ್ಲಿ ಝಗಮಗಿಸುವ ದೀಪಗಳಿವೆ. ಲೈಟಿಂಗ್ಸ್‌, ಪೀಠೋಪಕರಣ ಹಾಗೂ ಮಾರ್ಬಲ್‌ಗಳನ್ನು ವಿದೇಶದಿಂದ ತರಿಸಲಾಗಿದೆ ಎಂದು ಎಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಲಂಚದ ಬೆನ್ನುಹತ್ತಿದಾಗ ಅಕ್ರಮ ಸಂಪತ್ತು ಬಯಲು: ಕೆಲ ತಿಂಗಳ ಹಿಂದೆ ಬೆಳ್ಳಂದೂರು ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದಾಗ ಖಾಸಗಿ ಕಂಪನಿಯೊಂದರ ಹಣಕಾಸು ವಿವಾದದಲ್ಲಿ ವಿಕ್ಟರ್‌ ಸೈಮನ್‌ ಮಧ್ಯಪ್ರವೇಶಿಸಿದ್ದರು. ಆಗ ಆ ಕಂಪನಿಯ ಇಬ್ಬರು ಪಾಲುದಾರರ ಪೈಕಿ ಒಬ್ಬಾತನಿಂದ ಸುಮಾರು 1.25 ಕೋಟಿ ರು. ಲಂಚ ಪಡೆದು ಅನುಕೂಲ ಮಾಡಿಕೊಟ್ಟಆರೋಪ ಕೇಳಿಬಂದಿತ್ತು. ಈ ಬಗ್ಗೆ ಎಸಿಬಿಗೆ ಕಂಪನಿಯ ಪಾಲುದಾರ ದೂರು ನೀಡಿದ್ದರು. ಅಂತೆಯೇ ಎಫ್‌ಐಆರ್‌ ದಾಖಲಿಸಿಕೊಂಡು ಎಸಿಬಿ ತನಿಖೆ ಆರಂಭಿಸಿತ್ತು. ಆದರೆ ತನಿಖೆಗೆ ನ್ಯಾಯಾಲಯದಲ್ಲಿ ವಿಕ್ಟರ್‌ ತಡೆಯಾಜ್ಞೆ ತಂದಿದ್ದರು. ಈ ಲಂಚ ಪ್ರಕರಣದ ತನಿಖೆ ವೇಳೆ ಇನ್ಸ್‌ಪೆಕ್ಟರ್‌ ಮಾಡಿದ ಮತ್ತಷ್ಟುಭಾನಗಡಿಗಳು ಬೆಳಕಿಗೆ ಬಂದಿದ್ದವು. ಆಗ ಇನ್ಸ್‌ಪೆಕ್ಟರ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಯಿತು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

2003ರಲ್ಲಿ ಪಿಎಸ್‌ಐ ಆಗಿ ಪೊಲೀಸ್‌ ಇಲಾಖೆ ಸೇರಿದ ವಿಕ್ಟರ್‌ ಸೈಮನ್‌ ಅವರನ್ನು ಕಳೆದ ಮಾಚ್‌ರ್‍ನಲ್ಲಿ ಬಂಧಿಸಲಾಗಿತ್ತು. ಆ ವೇಳೆ ಇನ್ಸ್‌ಪೆಕ್ಟರ್‌ಗೆ ಸೇರಿದ ಮೈಸೂರು ಹಾಗೂ ಬೆಂಗಳೂರು ಮನೆಯೂ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಪರಿಶೀಲಿಸಿದಾಗ ಕೆಲ ದಾಖಲೆಗಳು ಪತ್ತೆಯಾಗಿದ್ದವು. ಅದರಲ್ಲಿ ಮೈಸೂರಿನ ಬಂಗಲೆ ನಿರ್ಮಾಣ ಸಂಬಂಧ ಇನ್ಸ್‌ಪೆಕ್ಟರ್‌ ಸೋದರ ಮಾವ ಬರೆದಿದ್ದ ಲೆಕ್ಕದ ಪುಸ್ತಕವೂ ಸೇರಿತ್ತು ಎಂದು ಮೂಲಗಳು ಹೇಳಿವೆ.

ಲಂಚದ ಹಣ, ಭೋಗ್ಯದ ಲೆಕ್ಕ:

ಲಂಚದ ಆರೋಪದಿಂದ ಮುಕ್ತನಾಗಲು ಸೃಷ್ಟಿಸಿದ್ದರು ಎನ್ನಲಾದ ಭೂಮಿ ಕರಾರು ಪತ್ರವು ಈಗ ಇನ್ಸ್‌ಪೆಕ್ಟರ್‌ಗೆ ಎರಡು ಪ್ರಕರಣದಲ್ಲಿ ಸಂಕಷ್ಟತಂದಿದೆ.

ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ವಿಕ್ಟರ್‌ ಅವರಿಗೆ ಸೇರಿದ್ದು ಎನ್ನಲಾದ ಮೂರು ಎಕರೆ ಭೂಮಿ ಇದೆ. ಈ ಭೂಮಿಯಲ್ಲಿ ಒಂದು ಎಕರೆಯನ್ನು ತಾನು ಲಂಚ ಸ್ವೀಕರಿಸಿದ ಆರೋಪ ಹೊತ್ತಿದ್ದ ಖಾಸಗಿ ಕಂಪನಿ ಮಾಲಿಕನಿಗೆ ರೆಸಾರ್ಟ್‌ ನಿರ್ಮಾಣ ಸಲುವಾಗಿ 1.24 ಕೋಟಿ ರು. ಹಣ ಪಡೆದು ಒಂದು ವರ್ಷಕ್ಕೆ ಬೋಗ್ಯಕ್ಕೆ ನೀಡಿದ್ದಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಇನ್ಸ್‌ಪೆಕ್ಟರ್‌ ಕರಾರು ಮಾಡಿದ್ದರು. ಇದಾದ ಕೆಲ ದಿನಗಳಲ್ಲೇ ಭೋಗ್ಯ ರದ್ದುಗೊಂಡಿರುವ ಬಗ್ಗೆ ಸಹ ಮತ್ತೊಂದು ಕರಾರನ್ನು ವಿಕ್ಟರ್‌ ಮಾಡಿಸಿದ್ದರು. ಆದರೆ ಲಂಚದ ಪ್ರಕರಣದಲ್ಲಿ ಭೋಗ್ಯದ ಕರಾರು ಪತ್ರ ಸಲ್ಲಿಸಿದ ಇನ್ಸ್‌ಪೆಕ್ಟರ್‌, ಭೋಗ್ಯ ರದ್ದತಿಯನ್ನು ಮುಚ್ಚಿಟ್ಟಿದ್ದರು. ನಾವು ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಪರಿಶೀಲಿಸಿದಾಗಲೂ ಭೋಗ್ಯ ರದ್ದತಿ ದಾಖಲೆ ಸಿಕ್ಕಿರಲಿಲ್ಲ. ಆದರೆ ಅಕ್ರಮ ಸಂಪತ್ತು ಪ್ರಕರಣದಲ್ಲಿ ವಿಕ್ಟರ್‌ ಮನೆ ಮೇಲೆ ದಾಳಿ ನಡೆಸಿದಾಗ ಭೋಗ್ಯದ ಕರಾರು ಪತ್ರಗಳು ಪತ್ತೆಯಾಗಿವೆ. ಈ ಕರಾರು ಪತ್ರಗಳು ಇನ್ಸ್‌ಪೆಕ್ಟರ್‌ ವಿರುದ್ಧದ ಎರಡು ಪ್ರಕರಣಗಳಿಗೆ ಪುರಾವೆಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!